ತಿ.ನರಸೀಪುರ: ಪ್ರಜಾಪ್ರಭುತ್ವ ವ್ಯವಸ್ಥೆಯಡಿ ಪ್ರತಿಯೊಬ್ಬರೂ ಸಮಾನತೆಯಿಂದ ನೆಮ್ಮದಿಯ ಜೀವನ ನಡೆಸಲು ಭಾರತೀಯ ಸಂವಿಧಾನ ಮುಕ್ತ ಅವಕಾಶ ಕಲ್ಪಿಸಿಕೊಟ್ಟಿದೆ ಎಂದು ಚಾಮರಾಜನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಟಿ.ಕವಿತಾ ಹೇಳಿದರು.
ಪಟ್ಟಣದ ಬೈರಾಪುರ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ಕಾಲೇಜು ಶಿಕ್ಷಣ ಇಲಾಖೆ ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಸಹಯೋಗದಲ್ಲಿ ದಲಿತ ಸಂಘರ್ಷ ಸಮಿತಿಯಿಂದ ಆಯೋಜಿಸಿದ್ದ ನಮ್ಮ ಹೆಮ್ಮೆಯ ಭಾರತ ಸಂವಿಧಾನ ಕುರಿತು ಜಾಗೃತಿ ಕಾರ್ಯಕ್ರಮ ಹಾಗೂ ಸಂವಿಧಾನ ಉಚಿತ ಪುಸ್ತಕ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಬಹುತೇಕರಲ್ಲಿ ಸಂವಿಧಾನವೆಂದರೆ ರಾಜಕಾರಣಿಗಳು ಆಯ್ಕೆಗೊಳ್ಳಲು ಮತ್ತು ಅಧಿಕಾರಿಗಳ ಕಾರ್ಯನಿರ್ವಹಣೆಗಷ್ಟೇ ಉಪಯುಕ್ತ ಎಂಬ ಅಭಿಪ್ರಾಯವಿದೆ. ವಾಸ್ತವದಲ್ಲಿ ಸಂವಿಧಾನ ಭಾರತೀಯ ಪ್ರತಿಯೊಬ್ಬ ಪ್ರಜೆಯೂ ಸಮಾನ ಹಕ್ಕುಗಳೊಂದಿಗೆ ಜೀವನ ನಡೆಸುವ ನಿಯಮಗಳನ್ನು ರೂಪಿಸಿದೆ ಎಂದರು.
ದಸಂಸ ಜಿಲ್ಲಾ ಸಂಚಾಲಕ ಸಿ.ಉಮಾ ಮಹದೇವ ಪ್ರಾಸ್ತಾವಿಕವಾಗಿ ಮಾತನಾಡಿ, ದೇಶದ ವೈವಿಧ್ಯತೆ ಮತ್ತು ಪ್ರಾಂತ್ಯವಾರು ವೈರುಧ್ಯಗಳನ್ನು ಅರಿತಿದ್ದ ಡಾ.ಅಂಬೇಡ್ಕರ್ ಅವರು ಸಾಮಾಜಿಕ ಅಸಮಾನತೆಯ ನೋವನ್ನು ಅನುಭವಿಸಿದ್ದರಿಂದ ಸಮಾನತೆ ಬದುಕನ್ನು ಎಲ್ಲರಿಗೂ ಸಿಗುವಂತಾಗಬೇಕು ಎಂಬ ಉದ್ದೇಶದಿಂದ ಸಂವಿಧಾನ ರಚಿಸಿದ್ದಾರೆ. ಸಂವಿಧಾನದ ಬಗ್ಗೆ ಆರಂಭದಿಂದಲೂ ಕೆಲವು ಸಮುದಾಯಗಳ ಅನುಕೂಲಕ್ಕೆ ರೂಪಿತವಾಗಿದೆ ಎಂಬುದು ಬದಲಾಗಬೇಕಿದೆ ಎಂದು ತಿಳಿಸಿದರು.
ಸಂವಿಧಾನ ಕುರಿತು ಮಂಗಳೂರು ವಿಜಯ ಮಾತನಾಡಿದರು. ಮೈಸೂರು ಗ್ರಾಮಾಂತರ ಕಾಂಗ್ರೆಸ್ ವೈದ್ಯಕೀಯ ವಿಭಾಗದ ಜಿಲ್ಲಾಧ್ಯಕ್ಷ ಡಾ.ಬಿ.ಪ್ರದೀಪ್ ಸಂವಿಧಾನ ಪುಸ್ತಕಗಳನ್ನು ವಿತರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲೆ ಡಾ.ಬಿ.ಪಿ.ಇಂದಿರಾ ವಹಿಸಿದ್ದರು. ರಾಷ್ಟ್ರೀಯ ಸೇವಾ ಯೋಜನೆ ಸಂಚಾಲಕಿ, ದೈಹಿಕ ಶಿಕ್ಷಣ ನಿರ್ದೇಶಕಿ ಪಿ.ಕೆ. ಶಶಿರೇಖಾ, ಚಿಂತಕ ಡಾ. ಜೈಕುಮಾರ್, ಕಾರ್ಯಕ್ರಮದಲ್ಲಿ ಕೇತುಪುರ ಶಿವಪ್ರಕಾಶ್ ಇತರರಿದ್ದರು.