ಜಿಲ್ಲೆ

ಅರಸೀಕೆರೆಯಲ್ಲಿ ತಪ್ಪದ ಕಸದ ಕಿರಿಕಿರಿ

ಅರಸೀಕೆರೆ: ನಗರಸಭೆ ವತಿಯಿಂದ ಕಸ ವಿಲೇವಾರಿ ಮಾಡಲು ಆಟೋ ಟಿಪ್ಪರ್ ಹಾಗೂ ಸಿಬ್ಬಂದಿ ನಿಯೋಜಿಸಿದ್ದರೂ ಜನರು ಆಯಕಟ್ಟಿನ ಜಾಗಗಳಲ್ಲಿ ಪದೇ ಪದೆ ಕಸ ಸುರಿಯುತ್ತಿರುವುದು ಅನೈರ್ಮಲ್ಯಕ್ಕೆ ಕಾರಣವಾಗಿದೆ.

ರೈಲ್ವೆ ನಿಲ್ದಾಣ ಸಂಪರ್ಕಿಸುವ ರಸ್ತೆಗೆ ಹೊಂದಿಕೊಂಡಂತಿರುವ ಪುರಾತನ ಪಶು ಆಸ್ಪತ್ರೆ ಆವರಣ ಕಸದಿಂದ ತುಂಬಿ ಹೋಗಿದ್ದು ಶುಚಿತ್ವ ಮರೀಚಿಕೆಯಾಗಿದೆ. ಹೋಟೆಲ್, ಗೂಡಂಗಡಿಗಳ ತ್ಯಾಜ್ಯವನ್ನು ತಂದು ಸುರಿಯುತ್ತಿರುವುದು ಅಧ್ವಾನಕ್ಕೆ ಪ್ರಮುಖ ಕಾರಣವಾಗಿದೆ.

ಸದ್ಯದ ಬೆಳವಣಿಗೆಯಿಂದಾಗಿ ಸ್ಥಳೀಯರಲ್ಲಿ ರೋಗ, ರುಜಿನಗಳು ಹರಡುವ ಭೀತಿ ಎದುರಾಗಿದೆ. ಇದೀಗ ಪೂರ್ವ ಮುಂಗಾರು ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಪ್ಲಾಸ್ಟಿಕ್ ಕವರ್ ಸೇರಿದಂತೆ ಚೀಲಗಳಲ್ಲಿ ಅಪಾರ ಪ್ರಮಾಣದ ನೀರು ಸಂಗ್ರಹವಾಗುತ್ತಿದ್ದು ಸೊಳ್ಳೆಗಳ ಆವಾಸ ತಾಣವಾಗಿ ಮಾರ್ಪಟ್ಟಿರುವುದು ಪ್ರಯಾಣಿಕರು ಹಾಗೂ ನಾಗರಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಬೀದಿ ನಾಯಿ, ಬೀಡಾಡಿ ದನಗಳಿಗೆ ಕಸದ ರಾಶಿಯೇ ಆಹಾರದ ತಾಣವಾಗಿದ್ದು ಹಸು, ಕರುಗಳು ಮಸಾಲೆ ಭರಿತ ಪ್ಲಾಸ್ಟಿಕ್ ಚೀಲಗಳನ್ನು ದಿನವಿಡೀ ಜಿಗಿದು ತಿನ್ನುತ್ತಿರುವ ಹಿನ್ನೆಲೆಯಲ್ಲಿ ಅವುಗಳ ಆರೋಗ್ಯದ ಮೇಲೂ ದುಷ್ಪರಿಣಾಮ ಎದುರಾಗುವ ಆತಂಕ ಮಾಲೀಕರಲ್ಲಿ ಮನೆಮಾಡಿದೆ.

ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತಿರುವ ಚರಂಡಿಗಳ ಇಕ್ಕೆಲಗಳನ್ನು ಶುಚಿಗೊಳಿಸಿ ದಶಕಗಳೇ ಕಳೆದಿವೆ. ಭಾರಿ ಮಳೆ ಬಂದಲ್ಲಿ ನೀರು ಸರಾಗವಾಗಿ ಹರಿಯಲು ಸಾಧ್ಯವಿಲ್ಲದಂತಾಗಿದೆ. ಚರಂಡಿಗಳಲ್ಲಿ ಕಸ, ಕಡ್ಡಿ, ತ್ಯಾಜ್ಯ ತುಂಬಿ ತುಳುಕುತ್ತಿರುವುದು ಅವ್ಯವಸ್ಥೆಯನ್ನು ಅನಾವರಣಗೊಳಿಸಿದೆ. ನಗರಸಭೆ ವಾಣಿಜ್ಯ ಸಂಕೀರ್ಣ, ದೀಪಾ ನರ್ಸಿಂಗ್ ಹೋಮ್, ರೈಲ್ವೆ ನಿಲ್ದಾಣ ರಸ್ತೆ, ಮೊದಲಿಯಾರ್ ಬೀದಿ, ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು ತಡೆಗೋಡೆ, ಮಟನ್ ಮಾರ್ಕೆಟ್, ಬಸ್ ನಿಲ್ದಾಣದ ಆಸುಪಾಸಿನ ಜಾಗಗಳು ಕಸ ಸುರಿಯುವ ಪ್ರಮುಖ ಸ್ಥಳಗಳಾಗಿದ್ದು ತಡೆಯುವುದು ಅಸಾಧ್ಯ ಎನ್ನುವಂತಾಗಿದೆ.

ಕಂತೇನಹಳ್ಳಿ ಕೆರೆ ಏರಿಯ ಎರಡೂ ಬದಿಯಲ್ಲಿ ಕೋಳಿ, ಕುರಿ, ದನದ ತ್ಯಾಜ್ಯ, ಸತ್ತ ನಾಯಿ, ಬೆಕ್ಕಿನ ಜತೆಗೆ ಪ್ಲಾಸ್ಟಿಕ್ ತಂದು ಸುರಿಯುತ್ತಿರುವುದು ದುರ್ವಾಸನೆಗೆ ಕಾರಣವಾಗಿದೆ. ಇದರಿಂದಾಗಿ ಬೈಕ್, ಕಾರು ಸೇರಿದಂತೆ ವಿವಿಧ ವಾಹನ ಸವಾರರು, ಪಾದಚಾರಿಗಳು ಪ್ರತಿನಿತ್ಯ ಮೂಗುಮುಚ್ಚಿ ಸಂಚರಿಸುವ ಅನಿವಾರ್ಯತೆ ಎದುರಾಗಿರುವುದು ಸಮಸ್ಯೆಯ ಗಂಭೀರತೆಯನ್ನು ಬಿಂಬಿಸಿದೆ.

ಅರಸೀಕೆರೆಯಿಂದ ಮಾಲೆಕಲ್ ತಿರುಪತಿ, ಹುಳಿಯಾರು ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿ, ಚನ್ನರಾಯಪಟ್ಟಣ ರಾಜ್ಯ ಹೆದ್ದಾರಿಯೂ ಇದಕ್ಕೆ ಹೊರತಾಗಿಲ್ಲ. ಹಳೆಯ ಹಾಸಿಗೆ, ಮುರಿದ ಕುರ್ಚಿ, ಮಂಚದ ಕಾಲು, ಹತ್ತಿ, ಪ್ಲಾಸ್ಟಿಕ್ ಹಾಳೆ, ಪ್ಲೇಟ್ ಸೇರಿ ಹಲವು ಪರಿಕರಗಳನ್ನು ಮನಬಂದಂತೆ ಎಸೆಯಲಾಗಿದೆ. ಅಲ್ಲದೆ ಕಟ್ಟಡ ಕಾಮಗಾರಿಗೆ ಬಳಸಿದ ಅನುಪಯುಕ್ತ ಪ್ಲಾಸ್ಟಿಕ್ ಸಿಮೆಂಟ್ ಚೀಲಗಳನ್ನು ಚರಂಡಿಗೆ ಸುರಿದಿದ್ದು ನೀರು ಹರಿಯಲು ಸಾಧ್ಯವಿಲ್ಲದಂತಾಗಿರುವುದು ಅಸಹನೆಗೆ ಕಾರಣವಾಗಿದೆ.

ರಸ್ತೆ ಬದಿಯಲ್ಲಿ ಕಸ ಸುರಿಯುವುದರಿಂದ ಆಗುತ್ತಿರುವ ನೇರ ಪರಿಣಾಮಗಳ ಕುರಿತು ನಗರಸಭೆ ವತಿಯಿಂದ ಜಾಗೃತಿ ಮೂಡಿಸುವ ಕೆಲಸ ನಿತ್ಯ ನಿರಂತರವಾಗಿ ನಡೆಯುತ್ತಿದೆ. ಕಸ ಸಂಗ್ರಹಣೆ ನಿಮಿತ್ತ 31 ವಾರ್ಡ್‌ಗಳಿಗೂ ಆಟೋ ಟಿಪ್ಪರ್ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ ಟ್ರ್ಯಾಕ್ಟರ್ ನಿಯೋಜಿಸಿದ್ದು ಪೌರ ಕಾರ್ಮಿಕರು ಹಗಲಿರುಳೆನ್ನದೆ ಆರೋಗ್ಯವನ್ನೂ ಲೆಕ್ಕಿಸದೆ ಕಸ ಸಂಗ್ರಹಣೆ ಮಾಡುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಹೀಗಿದ್ದರೂ ಕೆಲ ಬೀದಿ ಬದಿ ಆಹಾರ ತಯಾರಿಸುವವರು, ನಿವಾಸಿಗಳು ಕದ್ದುಮುಚ್ಚಿ ಆಯಕಟ್ಟಿನ ಜಾಗಗಳಲ್ಲಿ ಪ್ಲಾಸ್ಟಿಕ್ ಜತೆಗೆ ಕಸ ಸುರಿಯುತ್ತಿರುವುದು ಅನೈರ್ಮಲ್ಯಕ್ಕೆ ಕಾರಣವಾಗಿದೆ. ಆಗೊಮ್ಮೆ, ಈಗೊಮ್ಮೆ ದಂಡ ವಿಧಿಸಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ.

ಸಹಸ್ರಾರು ಪ್ರಯಾಣಿಕರು ಬಂದು ಹೋಗುವ ರೈಲ್ವೆ ನಿಲ್ದಾಣ ಕೂಡ ಇದಕ್ಕೆ ತ್ಯಾಜ್ಯ ಸಂಗ್ರಹದಿಂದ ಹೊರತಾಗಿಲ್ಲ. ನಿಲ್ದಾಣದ ಒಳ, ಹೊರಗಿನ ಹೋಟೆಲ್ ಹಾಗೂ ಸಣ್ಣಪುಟ್ಟ ಅಂಗಡಿಗಳಲ್ಲಿ ಸಿಗುವ ಆಹಾರ ಪದಾರ್ಥಗಳನ್ನು ಖರೀದಿಸುವ ಪ್ರಯಾಣಿಕರು ಕಸ ಸಂಗ್ರಹ ಡಬ್ಬಿಗಳನ್ನು ಬಳಸಿಕೊಳ್ಳುತ್ತಿಲ್ಲ. ಪೇಪರ್ ಪ್ಲೇಟ್, ಕಾಫಿ ಲೋಟ, ಚಿಪ್ಸ್ ಮತ್ತಿತರ ಕವರ್‌ಗಳು ನಿಲ್ದಾಣದ ಆಸುಪಾಸಿನ ರಸ್ತೆಗಳ ಬದಿಯಲ್ಲಿ ಕಸದ ರಾಶಿ ರಾರಾಜಿಸುತ್ತಿದೆ. ಇಂತಹ ತ್ಯಾಜ್ಯವನ್ನು ಜಾನುವಾರು ಹಾಗೂ ನಾಯಿಗಳ ಹಿಂಡು ರುಚಿಕರವೆಂದು ಭಾವಿಸಿ ಅರಸಿ ಬರುತ್ತಿರುವುದು ತಪ್ಪಿಲ್ಲ.

ಅನೈತಿಕ ಚಟುವಟಿಕೆ ತಾಣ ದಾನಿಗಳು ಕೊಡುಗೆಯಾಗಿ ನೀಡಿರುವ ಪಶು ಅಸ್ಪತ್ರೆ ಆವರಣ ಕಸದ ರಾಶಿ ಜತೆಗೆ ಮದ್ಯಪ್ರಿಯರ ನೆಚ್ಚಿನ ಆವಾಸ ಸ್ಥಾನವಾಗಿ ಮಾರ್ಪಟ್ಟಿದೆ. ಭೂತ ಬಂಗಲೆಯಂತಾಗಿ ಮಾರ್ಪಟ್ಟಿರುವ ಹಳೆಯ ಕಟ್ಟಡದಲ್ಲಿ ತಡರಾತ್ರಿ ಅನೈತಿಕ ಚಟುವಟಿಕೆ ನಡೆಯುತ್ತಿದೆ ಎನ್ನುವ ಆರೋಪಗಳಿವೆ. ಪರಿಸ್ಥಿತಿ ಹೀಗಿದ್ದರೂ ಹೇಳುವವರು, ಕೇಳುವವರು ಯಾರೂ ಇಲ್ಲದಂತಾಗಿದೆ. ಹಳೆಯ ಪಶು ಆಸ್ಪತ್ರೆ ಆವರಣದಲ್ಲಿ ಹೊಸ ಬಸ್ ನಿಲ್ದಾಣ ತಲೆಯೆತ್ತಲಿದೆ ಎನ್ನುವ ಮಾತುಗಳು ಆರೇಳು ವರ್ಷದಿಂದ ಕೇಳಿ ಬರುತ್ತಿದ್ದರೂ ಇನ್ನೂ ಕಾರ್ಯರೂಪಕ್ಕೆ ಬರುವ ಯಾವ ಲಕ್ಷಣವೂ ಗೋಚರಿಸುತ್ತಿಲ್ಲ. ಸಂಬಂಧಿಸಿದ ಅಧಿಕಾರಿಗಳು ಹಾಗೂ ಚುನಾಯಿತ ಜನಪ್ರತಿನಿಧಿಗಳು ತ್ಯಾಜ್ಯ ಸಂಗ್ರಹಕ್ಕೆ ಮುಕ್ತಿ ನೀಡಿ ನಗರ ಸೌಂದರ್ಯ ಕಾಪಾಡುವರೇ ಎಂಬುದನ್ನು ಕಾದುನೋಡಬೇಕಿದೆ.

ಪ್ರತಿ ನಿತ್ಯವೂ ಕಸ ವಿಲೇವಾರಿ ಮಾಡಲು ನಗರಸಭೆ ವತಿಯಿಂದ ಆಟೋ ಟಿಪ್ಪರ್ ಒದಗಿಸಲಾಗುತ್ತಿದೆ. ಹೀಗಿದ್ದರೂ ಜನರು ರಸ್ತೆ ಬದಿ ಮನಬಂದಂತೆ ಕಸ ಸುರಿಯುತ್ತಿರುವುದು ಸರಿಯಲ್ಲ. ನಗರ ನೈರ್ಮಲ್ಯ ಕಾಪಾಡುವುದು ಜವಾಬ್ದಾರಿಯಾಗಿದೆ. ಹಳೆಯ ಪಶುಆಸ್ಪತ್ರೆ ಸೇರಿದಂತೆ ವಿವಿಧೆಡೆ ಕಸ ಸುರಿಯುವ ಕುರಿತು ಜನರಿಗೆ ಅರಿವು ಮೂಡಿಸಿ ಸಮಸ್ಯೆ ಪರಿಹರಿಸಲು ನಗರಸಭೆ ಅಧಿಕಾರಿಗಳ ಗಮನ ಸೆಳೆಯಲಿದ್ದೇನೆ. ಶ್ವೇತಾ ರಮೇಶ್ 11ನೇ ವಾರ್ಡ್ ನಗರಸಭೆ ಸದಸ್ಯೆ ನಗರದ ವಿವಿಧ ಬಡಾವಣೆಗಳ ಆಯಕಟ್ಟಿನ ಜಾಗಗಳಲ್ಲಿ ಕಸ ಸುರಿಯುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಕೇಳಿ ಬರುತ್ತಿವೆ. ನಗರಸಭೆ ನೀತಿ, ನಿಯಮ ಉಲ್ಲಂಘಿಸಿ ಕಸ ಸುರಿದವರಿಗೆ ಈಗಾಗಲೇ ದಂಡ ವಿಧಿಸಲಾಗಿದೆ. ಸ್ವಚ್ಛತೆ ಕಾಪಾಡಲು ಸಾರ್ವಜನಿಕರ ಸಹಕಾರವೂ ಅಗತ್ಯವಿದೆ ಎಂಬುದನ್ನು ಮನಗಾಣಬೇಕು. ಅನೈರ್ಮಲ್ಯ ತಡೆ ಕುರಿತಂತೆ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಜರುಗಿಸಲಾಗುವುದು. ಎಚ್.ಟಿ. ಕೃಷ್ಣಮೂರ್ತಿ ಪೌರಾಯುಕ್ತ, ಅರಸೀಕೆರೆ