ಹುಬ್ಬಳ್ಳಿ : ವಕ್ಪ್ ಭೂ ಕಬಳಿಕೆ ಪ್ರಕರಣದಲ್ಲಿ ರಾಜ್ಯ ಸರ್ಕಾರ ರೈತರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆರೋಪಿಸಿದರು.
ನಗರದಲ್ಲಿ ಬುಧವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರೈತರಿಗೆ ವಕ್ಪ್ ನೀಡಿದ್ದ ನೋಟಿಸ್ ಹಿಂಪಡೆದಿರುವುದಾಗಿ ಮುಖ್ಯಮಂತ್ರಿಯವರು ಹೇಳುತ್ತಾರೆ. ಆದರೆ, ಪಹಣಿಯಲ್ಲಿ ವಕ್ಪ್ ಹೆಸರಿರುವುದನ್ನು ಏನು ಮಾಡುತಿ್ತೕರಿ? ಎಂದು ಪ್ರಶ್ನಿಸಿದರು.
ದೇಶ ಸ್ವತಂತ್ರ ಹೊಂದುವ ಮೊದಲು ಹಾಗೂ ನಂತರದ 70 ವರ್ಷಗಳಿಂದ ಜಮೀನಿನ ಪಹಣಿಯಲ್ಲಿ ರೈತರ ಹೆಸರಿದೆ. ರೈತರ ಜಮೀನು ನೋಟಿಫೈ ಮಾಡಿ, ಕಾಲಂ ನಂ.11ರಲ್ಲಿ ರೈತರ ಹೆಸರು ದಾಖಲಿಸಿದೆ. ಹೀಗಿದ್ದಾಗ ಇತ್ತೀಚಿನ ವರ್ಷಗಳಲ್ಲಿ ವಕ್ಪ್ ಹೆಸರು ದಾಖಲಿಸಿರುವುದನ್ನು ಯಾವುದೇ ಕಾರಣಕ್ಕೂ ಒಪ್ಪಲು ಸಾಧ್ಯವಿಲ್ಲ ಎಂದು ಜೋಶಿ ಸ್ಪಷ್ಟಪಡಿಸಿದರು.
ಪಹಣಿಯಲ್ಲಿ ವಕ್ಪ್ ಹೆಸರನ್ನು ಸಂಪೂರ್ಣ ತೆಗೆಯುವವರೆಗೂ ಹೋರಾಟ ನಿಲ್ಲುವುದಿಲ್ಲ. ವಿಜಯಪುರದಲ್ಲಿ ರೈತರ ಹೋರಾಟಕ್ಕೆ ಬಿಜೆಪಿ ಸಾಥ್ ನೀಡಲಿದೆ ಮತ್ತು ರೈತರಿಗೆ ನೈತಿಕ ಸ್ಥೈರ್ಯ ತುಂಬಲಿದೆ ಎಂದು ಪ್ರಲ್ಹಾದ ಜೋಶಿ ಹೇಳಿದರು.
ಕಾಂಗ್ರೆಸ್ ನವರು ಬಿಜೆಪಿ ಕಾಲದಲ್ಲಿ ಆಗಿದೆ ಎನ್ನುತ್ತ ಜನರ ದಾರಿ ತಪ್ಪಿಸುತ್ತಿದ್ದಾರೆ. ಆದರೆ ಯಾರ ಕಾಲದಲ್ಲಿ ಆದರೂ ಅದು ತಪ್ಪೇ. ಆ ಸಂದರ್ಭದಲ್ಲಿ ಸರ್ಕಾರದ ಗಮನಕ್ಕೆ ಬಂದಿರಲಿಲ್ಲ ಎಂದು ಜೋಶಿ ಸಮಜಾಯಿಷಿ ನೀಡಿದರು.
ಬಿಜೆಪಿ ಸರ್ಕಾರ ವಕ್ಪ್ ಹೆಸರು ದಾಖಲಿಸಲು ಬಿಡುವುದಿಲ್ಲವೆಂದು ವಕ್ಪ್ ಕಮಿಟಿ ಆಗ ಸರ್ಕಾರದ ಗಮನಕ್ಕೆ ಬಾರದಂತೆ ರಹಸ್ಯವಾಗಿ ಮಾಡಿದೆ. ಜನಕ್ಕೂ ಗೊತ್ತಾಗಿಲ್ಲ. ಸರ್ಕಾರದ ಗಮನಕ್ಕೆ ಬಂದಿದ್ದರೆ ಆಗಲೇ ವಕ್ಪ್ಗೆ ವಾರ್ನಿಂಗ್ ಕೊಡುತ್ತಿತ್ತು ಮತ್ತು ಬಿಜೆಪಿ ಸರ್ಕಾರ ವಕ್ಪ್ ಹೆಸರನ್ನು ಕಿತ್ತೆಸೆಯುತ್ತಿತ್ತು ಎಂದರು.
ವಕ್ಪ್ ಭೂ ಕಬಳಿಕೆ ಈಗಲೂ ಬೆಳಕಿಗೆ ಬರುತ್ತಿರಲಿಲ್ಲ. ರೈತರು ಸಾಲ ಪಡೆಯಲು ಪಹಣಿ ತೆಗೆಸಿದಾಗ ಗೊತ್ತಾಗಿದೆ. ಸುದ್ದಿ ಹರಡಿ ಎಲ್ಲೆಡೆ ರೈತರು ಎಚ್ಚರಗೊಂಡು ಪಹಣಿ ಪರಿಶೀಲಿಸುತ್ತಿದ್ದಾರೆ ಎಂದರು.
ವಕ್ಪ್ ಮೂಲಕ ಇನ್ನೂ ಅದೆಷ್ಟು ಭೂಮಿ ಹೀಗೆ ಕಬಳಿಸಿದ್ದಾರೋ ಗೊತ್ತಿಲ್ಲ. ಹಾಗಾಗಿ, ಕೇಂದ್ರ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿದೆ. ವಕ್ಪ್ ಕಾನೂನು ತಿದ್ದುಪಡಿ ಮಾಡಲಿದೆ. ಕಾಂಗ್ರೆಸ್ ನಿಜವಾಗಿ ರೈತರ ಪರವಿದ್ದರೆ ಇದಕ್ಕೆ ಬೆಂಬಲ ನೀಡಲಿ ಎಂದು ಸಚಿವ ಜೋಶಿ ಸವಾಲು ಹಾಕಿದರು.
ಇಲ್ಲಿರುವ ಮುಸ್ಲಿಂರೆಲ್ಲ ಒಂದು ಕಾಲದಲ್ಲಿ ಹಿಂದುಗಳು ಆಗಿದ್ದವರು. ಅವರಿಗೆ ಆಮೀಷ, ಬೆದರಿಕೆವೊಡ್ಡಿ ಮತಾಂತರ ಮಾಡಲಾಗಿತ್ತು. ಹಾಗಾಗಿ, ವಕ್ಪ್ ಭೂಮಿ ಬಹಳ ಹಿಂದಿನಿಂದ ಇದೆ ಎನ್ನುವುದು ಸುಳ್ಳು. ವಕ್ಪ್ಗೆ ಲಕ್ಷಗಟ್ಟಲೇ ಎಕರೆ ಆಸ್ತಿಯನ್ನು ಯಾರೂ ದಾನ ಕೊಟ್ಟಿಲ್ಲ. ವಕ್ಪ್ ಗೆ ಎಲ್ಲಿಂದ ಆಸ್ತಿ ಬರುತ್ತದೆ ? ದಾನ ಕೊಡುವವರು ಲಕ್ಷ ಎಕರೆಗಟ್ಟಲೆ ದಾನ ಕೊಡುತ್ತಾರೆಯೇ ?. ಎಂದು ಪ್ರಲ್ಹಾದ ಜೋಶಿ ಪ್ರಶ್ನಿಸಿದರು.