ಕಂಪ್ಲಿ: ಬಳ್ಳಾರಿಯಲ್ಲಿ 88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತದೆ, ಆತಂಕ ಬೇಡ ಎಂದು ಬಳ್ಳಾರಿ ಕಸಾಪ ಜಿಲ್ಲಾಧ್ಯಕ್ಷ ಡಾ.ನಿಷ್ಠಿ ರುದ್ರಪ್ಪ ತಿಳಿಸಿದರು.
ಇಲ್ಲಿನ ಗಂಗಾಸಂಕೀರ್ಣದಲ್ಲಿ ಭಾನುವಾರ ಆಯೋಜಿಸಿದ್ದ ಕಂಪ್ಲಿ-ಕೋಟೆಯ ಲೇಖಕ ಜಿ.ಪ್ರಕಾಶ ಅವರ ‘ಬದುಕಿನ ಅನಂತದಲ್ಲಿ’ ಮತ್ತು ‘ಜೀವ ಝೇಂಕಾರ’ಎರಡು ಕವನ ಸಂಕಲನಗಳ ಬಿಡುಗಡೆ ಗೊಳಿಸಿ, ಅಖಂಡ ಬಳ್ಳಾರಿ ಜಿಲ್ಲೆಯನ್ನು ಪ್ರತಿನಿಧಿಸಿ ಬಳ್ಳಾರಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ಕಸಾಪ ಪದಾಧಿಕಾರಿಗಳೊಂದಿಗೆ, ಜನಪ್ರತಿನಿಧಿಗಳು, ಪ್ರಗತಿಪರ ಸಂಘಟನೆಗಳು ಮುಂಚೂಣಿಯಲ್ಲಿವೆ. ಜನತೆ ಸಮ್ಮೇಳನದ ಯಶಸ್ವಿಗೆ ಕೈಜೋಡಿಸಬೇಕಿದೆ. ಕವಿಗಳು ಪ್ರಶಸ್ತಿಗಳ ಹಿಂದೆ ಬೀಳದೆ ಉತ್ತಮ ಸಾಹಿತ್ಯ ರಚನೆಯತ್ತ ಮನಸ್ಸು ಹರಿಸಬೇಕಿದೆ. ಬದುಕು ಮತ್ತು ಬರಹ ಒಂದಾಗಿಸುವ ಕೃತಿಗಳು ಶ್ರೇಷ್ಠ ಎಂದರು.
ಪುರಸಭೆ ಮುಖ್ಯಾಧಿಕಾರಿ ಬಿ.ಮಲ್ಲಿಕಾರ್ಜುನ ಮಾತನಾಡಿ, ಲೇಖಕರನ್ನು ಗುರುತಿಸುವ ಕೆಲಸ ಆಗಬೇಕು. ಓದುಗರು ಕೃತಿಯ ನಾಡಿಮಿಡಿತ ಅರಿತು ಅಭಿಪ್ರಾಯಗಳನ್ನು ವ್ಯಕ್ತಪಡಿಸಬೇಕು ಎಂದರು.
ಷಾ.ಮಿಯಾಚಂದ್ ಹೈಸ್ಕೂಲ್ ಶಿಕ್ಷಕ ಡಾ.ಬಿ.ಸುನೀಲ್ ಬದುಕಿನ ಅನಂತದಲ್ಲಿ ಕೃತಿ ಪರಿಚಯಿಸಿ ಹಣ, ಆಸಿ,್ತ ಅಂತಸ್ತು, ಅಧಿಕಾರವನ್ನು ಪ್ರಾಮಾಣಿಕವಾಗಿ ಗಳಿಸಿ, ನಿಸ್ವಾರ್ಥಕ್ಕೆ ಬಳಸುವಂತೆ ಕೃತಿ ಪ್ರೇರೇಪಿಸುತ್ತದೆ ಎಂದರು.
ಕನ್ನಡ ವಿವಿಯ ಸಂಶೋಧನಾರ್ಥಿ ಬೇರ‌್ಗಿ ಜಯಶ್ರೀ ಜೀವ ಝೇಂಕಾರ ಕೃತಿಯನ್ನು ಪರಿಚಯಿಸಿ, ಕೃತಿಯಲ್ಲಿ ದಾರಿ ತಪ್ಪುವ ಯುವ ಪೀಳಿಗೆಯ ಹಪಾಹಪಿತನವನ್ನು ಗೆಲ್ಲಲು ಅನುಸರಿಸುವ ಮೌಲ್ಯಗಳ ಸಾರವಿದೆ. ಬದುಕನ್ನು ಪ್ರೀತಿಸುವ ಸಾಮಗ್ರಿಗಳಿವೆ ಎಂದರು.
ಕಸಾಪ ತಾಲೂಕು ಅಧ್ಯಕ್ಷ ಷಣ್ಮುಖಪ್ಪ ಚಿತ್ರಗಾರ ಅಧ್ಯಕ್ಷತೆ ವಹಿಸಿದ್ದರು. ವರ್ತಕ ಕೃಷ್ಣ ಎಸ್.ಪೋಳ, ಮಾಜಿ ಪುರಸಭೆ ಅಧ್ಯಕ್ಷ ಬಿ.ಸಿದ್ದಪ್ಪ, ಅನಂತಪುರದ ವಕೀಲ ರಾಘವೇಂದ್ರ, ನಾಡಗೌಡ ವೀರೇಂದ್ರಗೌಡ, ಸಂತೋಷ ಸೋಗಿ ಮಾತನಾಡಿದರು. ಕಸಾಪ ಪದಾಧಿಕಾರಿಗಳಾದ ಎಸ್.ಡಿ.ಬಸವರಾಜ, ಎಸ್.ರಾಮು, ಬಂಗಿ ದೊಡ್ಡ ಮಂಜುನಾಥ, ಎಲಿಗಾರ ವೆಂಕಟರೆಡ್ಡಿ, ಯು.ಎಂ.ವಿದ್ಯಾಶಂಕರ, ಶಾಮಸುಂದರರಾವ್, ಬಿ.ಅಂಬಣ್ಣ, ಮಂಜುನಾಥಗೌಡ, ಗೌಳೇರ ಶೇಖರಪ್ಪ ಇತರರಿದ್ದರು.