ಬೆಂಗಳೂರು: ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಶ್ರೀಕೃಷ್ಣ ದೀಕ್ಷಿತ್ ಹಾಗೂ ಸಿ.ಎಂ. ಜೋಶಿ ಅವರು ಸಂಪೂರ್ಣವಾಗಿ ಕನ್ನಡದಲ್ಲಿ ಆದೇಶ ಹೊರಡಿಸಿರುವುದು ಮುಖ್ಯ ಪರಂಪರೆಯೊಂದಕ್ಕೆ ನಾಂದಿ ಹಾಡಿದಂತಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಡಾ. ಮನು ಬಳಿಗಾರ್ ತಿಳಿಸಿದ್ದಾರೆ. ಬಹುಸಂಸ್ಕೃತಿ, ಬಹುಭಾಷೆಗಳನ್ನು ಹೊಂದಿರುವ ಭಾರತದ ಒಕ್ಕೂಟಕ್ಕೆ ಇಂತಹ ಒಂದು ಅವಶ್ಯಕತೆ ಇತ್ತು. ಜನರ ನಾಡಿ ಹಾಗೂ ಸಮಸ್ಯೆಗಳನ್ನು ಅರ್ಥೈಸಿಕೊಂಡು ನ್ಯಾಯಮೂರ್ತಿಗಳು ಕನ್ನಡದಲ್ಲಿ ತೀರ್ಪು ನೀಡಿರುವುದಕ್ಕೆ ನಾಡಿನ ಎಲ್ಲ ಕನ್ನಡಿಗರ ಪರವಾಗಿ ಅಭಿನಂದನೆ ಸಲ್ಲಿಸಿದ್ದಾರೆ. ನ್ಯಾಯಮೂರ್ತಿಗಳ ಈ ನಡೆ ರಾಜ್ಯದ ಇತರ ನ್ಯಾಯಾಧೀಶರಿಗೆ ಹಾಗೂ ನ್ಯಾಯಾಲಯಗಳಿಗೆ ಮಾದರಿಯಾಗಿದ್ದು, ಭವಿಷ್ಯದಲ್ಲಿ ಎಲ್ಲರೂ ಕನ್ನಡದಲ್ಲಿಯೇ ಆದೇಶ ಹೊರಡಿಸುವಂತೆ ಪ್ರೇರೇಪಿಸಲಿದೆ. ಇವರ ಈ ನಡೆ ಅನುಕರಣೀಯ ಎಂದು ಹೇಳಿದ್ದಾರೆ.