ವಿದ್ಯುತ್ ಅವಘಡದಿಂದ ತೀವ್ರವಾಗಿ ಗಾಯಗೊಂಡಿದ್ದ ವಿದ್ಯಾರ್ಥಿ ಜೀವನ್‌ನನ್ನು ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ರವಾನಿಸುತ್ತಿರುವುದು. 
ಜಿಲ್ಲೆ

ವಿದ್ಯುತ್ ಸ್ಪರ್ಶದಿಂದ ವಿದ್ಯಾರ್ಥಿ ಸ್ಥಿತಿ ಗಂಭೀರ

ಮಳವಳ್ಳಿ: ತಾಲೂಕಿನ ಬಿ.ಜಿ.ಪುರ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಭಾನುವಾರ ಶಿಕ್ಷಕರ ನಿರ್ಲಕ್ಷೃದಿಂದ ಮರ ಏರಿದ್ದ ವಿದ್ಯಾರ್ಥಿಯೊಬ್ಬನಿಗೆ ವಿದ್ಯುತ್ ಸ್ಪರ್ಶವಾಗಿ ಗಂಭೀರವಾಗಿ ಗಾಯಗೊಂಡಿದ್ದಾನೆ.

ಮೂಲತಃ ಮಲೆ ಮಹದೇಶ್ವರ ಬೆಟ್ಟದ ಕುಮಾರ್ ಅವರ ಪುತ್ರ ಕೆ.ಜೀವನ್ ವಿದ್ಯುತ್ ಅವಘಡದಿಂದ ಗಾಯಗೊಂಡಿದ್ದಾನೆ.

ಬಿ.ಜಿ.ಪುರ ಸಮೀಪದ ತೋಟವೊಂದರಲ್ಲಿ ಬಾಲಕನ ಪಾಲಕರು ಕೂಲಿ ಕೆಲಸಕ್ಕಾಗಿ ಬಂದು ನೆಲೆಸಿದ್ದರು. ಈ ಹಿನ್ನೆಲೆಯಲ್ಲಿ ಪುತ್ರನನ್ನು ಗ್ರಾಮದ ಸರ್ಕಾರಿ ಶಾಲೆಗೆ ದಾಖಲಿಸಿದ್ದರು. 7 ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಬಾಲಕ ಭಾನುವಾರ ಆಯೋಜಿಸಿದ್ದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ. ಕಾರ್ಯಕ್ರಮದ ನಂತರ ಶಾಲೆಯಲ್ಲಿ ತಯಾರಿಸಿದ್ದ ಉಪಾಹಾರ ಸೇವನೆಗೆ ತಟ್ಟೆಗಳ ಕೊರತೆಯಾಗಿದ್ದ ಕಾರಣ ಶಾಲಾ ಆವರಣದಲ್ಲೇ ಬೆಳೆದಿದ್ದ ಸುಮಾರು 20 ಅಡಿ ಎತ್ತರವಿರುವ ತೇಗದ ಮರದಿಂದ ಎಲೆಗಳನ್ನು ಕೀಳಲು ವಿದ್ಯಾರ್ಥಿ ಜೀವನ್ ಮರ ಏರಿದ್ದಾನೆ.

ಈ ಸಂದರ್ಭದಲ್ಲಿ ಮರದ ಪಕ್ಕದಲ್ಲೇ ಹಾದು ಹೋಗಿದ್ದ 11 ಕೆ.ವಿ.ವಿದ್ಯುತ್ ತಂತಿಗೆ ಬಾಲಕ ಹಿಡಿದಿದ್ದ ಮರದ ಕೊಂಬೆ ತಗುಲಿ ವಿದ್ಯುತ್ ಪ್ರವಹಿಸಿದೆ. ಕೂಡಲೇ ಇದನ್ನು ಗಮನಿಸಿದ ಗ್ರಾಮದ ಮುಖಂಡರೊಬ್ಬರು ಶಾಲೆಯ ಪಕ್ಕದಲ್ಲೇ ಇದ್ದ ವಿದ್ಯುತ್ ವಿತರಣಾ ಕೇಂದ್ರದ ಕಚೇರಿ ನೌಕರರಿಗೆ ಕೂಗಿ ಹೇಳಿದ್ದರಿಂದ ತಕ್ಷಣ ವಿದ್ಯುತ್ ಸ್ಥಗಿತಗೊಳಿಸುತ್ತಿದ್ದಂತೆ ಜೀವನ್ ಪ್ರಜ್ಞೆ ಕಳೆದುಕೊಂಡು ಮರದಿಂದ ಕೆಳಕ್ಕೆ ಬಿದ್ದಾಗ ಕಾಂಪೌಂಡ್‌ಗೆ ತೆಲೆ ಹೊಡೆದು ತೀವ್ರ ರಕ್ತ ಸ್ರಾವವಾಗಿದೆ.

ಕೂಡಲೇ ಬಾಲಕನನ್ನು ಪಟ್ಟಣದ ತಾಲೂಕು ಆಸ್ಪತ್ರೆಗೆ ಕರೆತಂದು ಪ್ರಥಮ ಚಿಕಿತ್ಸೆನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಂಡ್ಯ ವಿಮ್ಸ್ ಕರೆದೊಯ್ದಿದ್ದು, ಅಲ್ಲಿನ ವೈದ್ಯರ ಸಲಹೆಯಂತೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಸಾಗಿಸಿ ತೀವ್ರ ನಿಗಾ ಘಟಕದಲ್ಲಿರಿಸಿಕೊಂಡು ಚಿಕಿತ್ಸೆ ನೀಡಲಾಗುತ್ತಿದೆ.

ಬಿಗುವಿನ ವಾತಾವರಣ: ಶಾಲಾ ಆವರಣದಲ್ಲಿ ನಡೆದ ದಿಢೀರ್ ಅವಘಡದಿಂದ ಶಾಲೆಗೆ ದೌಡಾಯಿಸಿ ಬಂದ ಪಾಲಕರು ಪುತ್ರನ ಸ್ಥಿತಿಯನ್ನ ಕಂಡು ಆತಂಕಗೊಂಡು ಚೀರಾಡ ತೊಡಗಿದರು. ಈ ವೇಳೆ ಬಾಲಕನನ್ನು ಶಿಕ್ಷಕರೇ ಪಾಲಕರ ಜತೆಗೂಡಿ ಆಸ್ಪತ್ರೆಗೆ ಕರೆದೊಯ್ದರು. ಅಷ್ಟರಲ್ಲಿ ವಿಷಯ ತಿಳಿದು ನೂರಾರು ಸಂಖ್ಯೆಯಲ್ಲಿ ಗ್ರಾಮಸ್ಥರು ಶಾಲೆ ಬಳಿ ಜಮಾಯಿಸಿದರು.

ಶಿಕ್ಷಕರು ಮತ್ತು ಸೆಸ್ಕ್ ಅಧಿಕಾರಿಗಳ ನಿರ್ಲಕ್ಷೃದಿಂದ ವಿದ್ಯಾರ್ಥಿ ಜೀವನ್ಮರಣದ ನಡುವೆ ಹೋರಾಡುವ ಪರಿಸ್ಥಿತಿ ಬಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕೂಡಲೇ ಈ ಅವಘಡಕ್ಕೆ ಕಾರಣರಾದ ಸೆಸ್ಕ್ ಅಧಿಕಾರಿಗಳು ಮತ್ತು ಶಾಲಾ ಶಿಕ್ಷಕರನ್ನು ಅಮಾನತು ಮಾಡುವುದರ ಜತೆಗೆ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು.

ಸ್ಥಳಕ್ಕೆ ಬೆಳಕವಾಡಿ ಪೊಲೀಸರು ಆಗಮಿಸಿ ಪ್ರತಿಭಟನಾಕಾರರ ಮನವೊಲಿಸಿ ಪರಿಸ್ಥಿತಿ ತಿಳಿಗೊಳಿಸಿದರು.