The conclusion of the 'Nanoo Nayaka' camp doddaballapura 
ಜಿಲ್ಲೆ

ವೈಜ್ಞಾನಿಕ ಪ್ರಜ್ಞೆಯಿಂದ ಮೌಡ್ಯತೆ ನಿವಾರಣೆ

ಶಿವರಾಜ.ಎಂ

ವಿಜಯವಾಣಿ ಸುದ್ದಿಜಾಲ ದೊಡ್ಡಬಳ್ಳಾಪುರ
ಮನಸ್ಸಿನಲ್ಲಿ ವೈಜ್ಞಾನಿಕ ಮನೋ ಭೂಮಿಕೆಯಿಂದ ಜ್ಞಾನ ವಿಕಾಸವಾಗಲು ಸಾಧ್ಯ. ಮೂಢನಂಬಿಕೆಯಿಂದ ಬದುಕು ಹಾಳಾಗುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪಮೊಯ್ಲಿ ಹೇಳಿದರು.
ನಗರದ ಬೆಸೆಂಟ್ ಪಾರ್ಕ್‌ನಲ್ಲಿ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ವತಿಯಿಂದ ಹಮ್ಮಿಕೊಂಡಿದ್ದ ‘ನಾನೂ ನಾಯಕ’ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ವೈಜ್ಞಾನಿಕ ಪ್ರಜ್ಞೆ ಮೌಢ್ಯತೆ ಅಳಿಸುತ್ತದೆ. ಇದನ್ನು ಎಚ್ಚರಿಸುವ ಅಭಿಯಾನ ಎಲ್ಲಡೆ ನಡೆಯಬೇಕಿದೆ. ವೈಜ್ಞಾನಿಕ ಪ್ರಜ್ಞೆ ಹಳ್ಳಿಯ ಕಡೆಗೆ ನಡೆಯಬೇಕು. ಅಂದೋಲನ ಆಗಬೇಕು ಎಂದರು.
ವಿಜ್ಞಾನ ಮತ್ತು ಸಂಸ್ಕೃತಿ ಸಮಾನಂತರವಾಗಿ ಹೋಗಬೇಕು. ಮಾನವ ಕುಲವೇ ಮುಖ್ಯವೆಂದು ಭಾವಿಸಬಾರದು. ವಿಶ್ವ ಪ್ರಜ್ಞೆ ಮತ್ತು ವಿಶ್ವ ಕುಟುಂಬದಿಂದ ಮಾತ್ರ ಪರಿಸರ, ಪ್ರಾಣಿ ಸಂಕುಲ ಮತ್ತು ಮನುಕುಲ ಉಳಿಯಲು ಸಾಧ್ಯ. ಬದುಕು ಸಾವಯವ ವಿಶ್ವವಿದ್ಯಾನಿಲಯ ಇದ್ದಂತೆ. ಮನುಷ್ಯ ತನ್ನ ಭವಿಷ್ಯವನ್ನು ತಾನೇ ರೂಪಿಸಿಕೊಳ್ಳಬೇಕು. ವೈಜ್ಞಾನಿಕ ಪಥದಲ್ಲಿ ಅಚಲತೆಬೇಕು ಎಂದರು.
ಇಂಡಿಯಾ ಎಂಬ ಹೆಸರು ನಂದ ಸಾಮ್ರಾಜ್ಯದಲ್ಲಿಯೇ ಚಾಲ್ತಿಯಲ್ಲಿತ್ತು. ಬೌದ್ಧ ಮತ್ತು ಜೈನ ಧರ್ಮಗಳು ಮೌರ್ಯ ಮತ್ತು ನಂದ ಸಾಮ್ರಾಜ್ಯದಲ್ಲಿ ಅಸ್ತಿತ್ವದಲ್ಲಿದ್ದುವು. ಶೂದ್ರ ರಾಜರ ಆಳ್ವಿಕೆಯ ಕಾಲದಲ್ಲಿ ವಿದೇಶಿ ದಾಳಿಗಳನ್ನು ಸಮರ್ಥವಾಗಿ ಎದುರಿಸಿದ್ದರು. ನಂತರ ಬಂದ ರಾಜರು ವಿದೇಶಿ ದಾಳಿಗಳನ್ನು ಹಿಮ್ಮೆಟ್ಟಿಸುವಲ್ಲಿ ವಿಫಲರಾದರು ಎಂದರು. ಜಗತ್ತಿನಲ್ಲಿ ಯುದ್ಧಗಳಿಂದ ಸಾಯುತ್ತಿರುವವರಿಗಿಂತ ರೋಗಗಳಿಂದ ಸಾಯುವವರ ಸಂಖ್ಯೆ ಹೆಚ್ಚಾಗಿದೆ. ಮನುಷ್ಯನ ಸ್ವಾರ್ಥಕ್ಕೆ ಪರಿಸರ ಮತ್ತು ಪ್ರಾಣಿಸಂಕುಲ ನಾಶವಾಗುತ್ತಿದೆ. ಪರಿಸರ ಸಮತೋಲನವಾಗದೆ ಹೋದರೆ ಮಾನವ ಕುಲ ನಾಶವಾಗುತ್ತದೆ ಎಂದು ಎಚ್ಚರಿಸಿದರು. ಶೂದ್ರರು ಮತ್ತು ಬಡವರ ಬಗ್ಗೆ ಎಲ್ಲರಲ್ಲೂ ನಿರ್ಲಕ್ಷ್ಯ ಮನೋಭಾವವಿದೆ. ಇಂತಹ ಸವಾಲು ಮೆಟ್ಟಿ ನಿಲ್ಲಬೇಕು ಎಂದರು.