ಜಿಲ್ಲೆ

ಸಮುದಾಯ ಒಗ್ಗೂಡಿಸಬೇಕು

ಪ್ರಶಾಂತ ಹೂಗಾರ

ಹುಕ್ಕೇರಿ: ಸಾಂಸ್ಕೃತಿಕ, ಧಾರ್ಮಿಕ, ಸಹಕಾರ ಮತ್ತು ರಾಜಕೀಯವಾಗಿ ಹುಕ್ಕೇರಿ ತಾಲೂಕು ಹೆಸರಾಗಿದೆ. ಇದೀಗ ಹಿರೇಮಠದ ಚಂದ್ರಶೇಖರ ಶಿವಾಚಾರ್ಯರಿಂದ ರಾಷ್ಟ್ರಮಟ್ಟದಲ್ಲೂ ಗುರುತಿಸಿಕೊಳ್ಳುತ್ತಿರುವುದು ಸಂತಸದ ಸಂಗತಿ ಎಂದು ಮಾಜಿ ಸಂಸದ ರಮೇಶ ಕತ್ತಿ ಹೇಳಿದರು.

ಸ್ಥಳೀಯ ಅಡವಿಸಿದ್ಧೇಶ್ವರ ಮಠದಲ್ಲಿ ಕನ್ನಡ ಜಾನಪದ ಪರಿಷತ್‌ನಿಂದ ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆಗೆ ರಾಷ್ಟ್ರೀಯ ಉಪಾಧ್ಯಕ್ಷರಾಗಿ ಆಯ್ಕೆಯಾದ ಚಂದ್ರಶೇಖರ ಶಿವಾಚಾರ್ಯರಿಗೆ ಶನಿವಾರ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.

ಲಿಂಗಾಯತ ಮತ್ತು ವೀರಶೈವರಲ್ಲಿರುವ ಗೊಂದಲದಿಂದ ಸಮುದಾಯದ ಒಗ್ಗಟ್ಟು ಹಾಳಾಗುತ್ತಿದೆ. ಸಮಾಜದ ಕಣ್ಣುಗಳಂತಿರುವ ಗುರು, ವಿರಕ್ತರು ಒಂದಾಗಿ ಸಮಾಜಕ್ಕೆ ಮಾರ್ಗದರ್ಶನ ಮಾಡಬೇಕು. ಎಲ್ಲ ಸಮುದಾಯಗಳೊಂದಿಗೆ ಒಂದಾಗಿರುವ ಚಂದ್ರಶೇಖರ ಶ್ರೀಗಳು ವೀರಶೈವ ಲಿಂಗಾಯತ ಸಮುದಾಯ ಒಗ್ಗೂಡಿಸುವ ಕಾರ್ಯ ಮಾಡಲಿ. ಅವರ ಪ್ರಯತ್ನಕ್ಕೆ ನಾವೆಲ್ಲ ಒಂದಾಗಿ ಶ್ರಮಿಸುತ್ತೇವೆ ಎಂದರು.

ಮಾಜಿ ಸಚಿವ ಎ.ಬಿ.ಪಾಟೀಲ ಮಾತನಾಡಿ, ಸ್ವಾಮೀಜಿಗಳು ಒಂದಾದರೆ ಸಮಾಜ ಒಂದಾದಂತೆ. ಚಂದ್ರಶೇಖರ ಶಿವಾಚಾರ್ಯರು ಗುರು-ವಿರಕ್ತರ ನಡುವಿನ ಸಮನ್ವಯದ ಕೊಂಡಿಯಾಗಿದ್ದಾರೆ. ಲಿಂಗಾಯತ ಸಮುದಾಯದ ಎಲ್ಲ ಒಳ ಪಂಗಡಗಳು ಒಂದು ಮಾಡುವಲ್ಲಿ ಶ್ರೀಗಳು ಮುಂದಾಗಬೇಕು. ಸಮಾಜಕಾರ್ಯ ವಿಷಯದಲ್ಲಿ ಒಗ್ಗಟ್ಟಾಗಿರಬೇಕು ಎಂದು ತಿಳಿಸಿದರು.

ಕನ್ನಡ ಜಾನಪದ ಪರಿಷತ್ ಅಧ್ಯಕ್ಷ ಸುಭಾಸ ನಾಯಿಕ, ಮಹಾವೀರ ಉದ್ಯೋಗ ಸಮೂಹ ಸಂಸ್ಥೆ ಅಧ್ಯಕ್ಷ ಮಹಾವೀರ ನಿಲಜಗಿ, ಪುರಸಭೆ ಮಾಜಿ ಅಧ್ಯಕ್ಷ ಎ.ಕೆ.ಪಾಟೀಲ, ಪಂಚಮಸಾಲಿ ಸಮುದಾಯದ ತಾಲೂಕು ಘಟಕದ ಅಧ್ಯಕ್ಷ ಭೀಮಪ್ಪ ಚೌಗಲಾ, ಅಪ್ಪುಸ್ ತುಬಚಿ, ಸುರೇಶ ಜಿನರಾಳಿ, ಶಿವಾನಂದ ಜಿರಲಿ, ಶೀತಲ ಮಠಪತಿ, ವೀಣಾ ಬಾಳಿಕಾಯಿ, ಲೀಲಾವತಿ ರಜಪೂತ ಇತರರಿದ್ದರು. ಶಿಕ್ಷಕ ಕೆ.ಎ.ಬಡಿಗೇರ ನಿರೂಪಿಸಿದರು.