ಜಿಲ್ಲೆ

ಸೆಂಟ್ರಲ್ ಕ್ಷೇತ್ರದ ಐದು ಬೇಡಿಕೆಗಳಿಗೆ ಸ್ಪಂಧಿಸಿದ ಸಮಿತಿ

ಹುಬ್ಬಳ್ಳಿ : ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ವಿಧಾನಸಭೆ ಕ್ಷೇತ್ರದ ಐದು ಪ್ರಮುಖ ಬೇಡಿಕೆಗಳ ಬಗ್ಗೆ ಕರ್ನಾಟಕ ವಿಧಾನಸಭೆ ಅರ್ಜಿ ಸಮಿತಿಯೊಂದಿಗೆ ರ್ಚಚಿಸಿದ್ದು, ಉತ್ತಮ ಸ್ಪಂಧನೆ ದೊರಕಿರುವುದಾಗಿ ಶಾಸಕ ಹಾಗೂ ಸಮಿತಿ ಸದಸ್ಯ ಮಹೇಶ ಟೆಂಗಿನಕಾಯಿ ತಿಳಿಸಿದ್ದಾರೆ.

ಇವುಗಳಲ್ಲಿ ಚಂದ್ರಮೌಳೇಶ್ವರ ದೇವಸ್ಥಾನದ ಅಭಿವೃದ್ಧಿಗೆ 25 ಕೋಟಿ ರೂ.ಗಳನ್ನು ಸರ್ಕಾರದಿಂದ ಬಿಡುಗಡೆಗೊಳಿಸುವ ಜವಾಬ್ದಾರಿಯನ್ನು ಸಮಿತಿ ವಹಿಸಿಕೊಂಡಿದೆ. ಇದರಲ್ಲಿ 17 ರಿಂದ 18 ಕೋಟಿ ರೂ.ಗಳನ್ನು ಪರಿಹಾರ ನೀಡಲು ಹಾಗೂ 7 ಕೋಟಿ ರೂ. ದೇವಸ್ಥಾನದ ಅಭಿವೃದ್ಧಿಗೆ ಬಳಸುವ ಉದ್ದೇಶ ಇದೆ ಎಂದರು.

ಕೊಳಗೇರಿ ಪ್ರದೇಶದ 650 ರಿಂದ 700 ಮನೆಗಳಿಗೆ ಹಕ್ಕುಪತ್ರಗಳನ್ನು ನೀಡುವ ಬಗ್ಗೆಯೂ ರ್ಚಚಿಸಲಾಗಿದೆ ಎಂದು ಹೇಳಿದರು.

ಜೈ ಹನುಮಾನ ನಗರದಲ್ಲಿ 128 ಹಾಗೂ ಶಿರಡಿನಗರದಲ್ಲಿ 124 ಮನೆಗಳ ನಿರ್ವಣಕ್ಕೆ ವೇಗ ನೀಡಲಾಗುವುದು. ಜೈ ಹನುಮಾನ ನಗರದಲ್ಲಿ ಮನೆಗಳ ನಿರ್ಮಾಣಕ್ಕೆ ಕೆಲವರು ಅಡ್ಡಿಪಡಿಸುತ್ತಿದ್ದಾರೆ. ಇದಕ್ಕಾಗಿ ಡಾ. ಅಂಬೇಡ್ಕರ ಪುತ್ಥಳಿ ಸ್ಥಾಪಿಸಿದ್ದಾರೆ. ಡಾ. ಅಂಬೇಡ್ಕರ ಅವರ ಬಗ್ಗೆ ನಮಗೂ ಗೌರವ ಇದೆ. ಆದರೆ, ಮನೆಗಳ ನಿರ್ವಣಕ್ಕೆ ಅಡ್ಡಿಪಡಿಸುವ ಉದ್ದೇಶದಿಂದ ಪುತ್ಥಳಿ ಸ್ಥಾಪಿಸಿರುವುದರಿಂದ ಪೊಲೀಸ್ ಬಂದೋಬಸ್ತನಲ್ಲಿ ಪುತ್ಥಳಿ ತೆರವುಗೊಳಿಸಿ, ಮನೆಗಳನ್ನು ನಿರ್ವಿುಸುವಂತೆ ಸಮಿತಿ ಜಿಲ್ಲಾಧಿಕಾರಿಯವರಿಗೆ ಸೂಚನೆ ನೀಡಿದೆ ಎಂದರು.

ಡಾ. ಗಂಗೂಬಾಯಿ ಹಾನಗಲ್ ಹಿಂದುಸ್ತಾನಿ ಶಾಸ್ತ್ರಿಯ ಸಂಗೀತ ತರಬೇತಿ ಕೇಂದ್ರದ ಬಳಿಯ ರಸ್ತೆ ಅಭಿವೃದ್ಧಿ ಪಡಿಸುವ ಬಗ್ಗೆ ಸಮಿತಿ ಗಮನ ಸೆಳೆಯಲಾಗಿದೆ. ಸೆಂಟ್ರಲ್ ಕ್ಷೇತ್ರದ ಉಣಕಲ್ಲ ಕೆರೆ, ನಾಗಶೆಟ್ಟಿಕೊಪ್ಪ ಕೆರೆ, ಸಂತೋಷ ನಗರ ಕೆರೆ ಸೇರಿದಂತೆ 7 ಕೆರೆಗಳ ಅಭಿವೃದ್ಧಿ ಬಗ್ಗೆ ರ್ಚಚಿಸಿದ್ದು, ತುರ್ತಾಗಿ ಉಣಕಲ್ಲ, ಸಂತೋಷ ನಗರ ಹಾಗೂ ನಾಗಶೆಟ್ಟಿಕೊಪ್ಪ ಕೆರೆಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಹೇಳಿದರು.

ಎಎಸ್​ಐ ಅಧಿಕಾರಿಗಳೊಂದಿಗೆ ಸಭೆ : ಚಂದ್ರಮೌಳೇಶ್ವರ ದೇವಸ್ಥಾನದ ಅಭಿವೃದ್ಧಿಗೆ ಸಂಬಂಧಿಸಿದಂತೆ ನ. 10ರಂದು ಬೆಂಗಳೂರಿನಲ್ಲಿ ಅರ್ಕಾಲಜಿ ಸರ್ವೆ ಆಫ್ ಇಂಡಿಯಾ (ಎಎಸ್​ಐ)ದ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಿಗದಿಯಾಗಿದೆ ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು.

ದೇವಸ್ಥಾನದ ಕಾರಿಡಾರ್ ಯೋಜನೆ ನಿರ್ವಣದಲ್ಲಿ ಎಎಸ್​ಐ ಸಲಹೆಗಳನ್ನು ಸಹ ಪರಿಗಣಿಸಲಾಗಿದೆ. ಎಎಸ್​ಐನಿಂದ ಅನುಮತಿ ದೊರೆತ ತಕ್ಷಣ ದೇವಸ್ಥಾನದ ಅಭಿವೃದ್ಧಿಗೆ ಚಾಲನೆ ನೀಡಲಾಗುವುದು. ಈಗಾಗಲೇ ಡಿಪಿಆರ್ ಸಿದ್ದಗೊಂಡಿದೆ ಎಂದು ತಿಳಿಸಿದರು.