ಮೈಸೂರು: ಅಲ್ಪಸಂಖ್ಯಾತರ ಅಭಿವೃದ್ಧಿಗೆ ಪೂರಕವಾದ ಅಂಶಗಳನ್ನು ಬಜೆಟ್‌ನಲ್ಲಿ ಘೋಷಣೆ ಮಾಡುವ ಸಲುವಾಗಿ ರಾಜ್ಯ ಅಲ್ಪಸಂಖ್ಯಾತರ ಆಯೋಗ ಮಂಗಳವಾರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸಭೆ ನಡೆಸುವ ಮೂಲಕ ಅಲ್ಪಸಂಖ್ಯಾತರ ಮುಖಂಡರುಗಳಿಂದ ಸಲಹೆಗಳನ್ನು ಸ್ವೀಕರಿಸಿತು.
ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ನಿಸಾರ್ ಅಹಮ್ಮದ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮುಸ್ಲಿಂ, ಕ್ರೈಸ್ತ, ಬೌದ್ಧ ಧರ್ಮದವರು ತಮ್ಮ ಸಮುದಾಯಕ್ಕೆ ಅವಶ್ಯಕವಾದ ಅಂಶಗಳ ಕುರಿತು ಆಯೋಗದ ಗಮನ ಸೆಳೆದರು. ಸಭೆಯಲ್ಲಿ ಸ್ವೀಕರವಾದ ಅಂಶವನ್ನು ಬಜೆಟ್ ನಲ್ಲಿ ಘೋಷಣೆ ಮಾಡುವಂತೆ ಸರ್ಕಾರದ ಗಮನ ಸೆಳೆಯಲಾಗುವುದು ಎಂದು ನಿಸಾರ್ ಅಹಮ್ಮದ್ ಭರವಸೆ ನೀಡಿದರು.
ಜೈನ ಸಮುದಾಯದ ಮುಖಂಡ ಸುರೇಶ್ ಕುಮಾರ್ ಜೈನ್ ಮಾತನಾಡಿ, ಅಗತ್ಯ ಇರುವ ಕಡೆಗಳಲ್ಲಿ ಜೈನ ವಿದ್ಯಾರ್ಥಿ ನಿಲಯ ನಿರ್ಮಾಣ ಮಾಡಬೇಕು, ಜೈನ ಅಭಿವೃದ್ಧಿ ನಿಗಮ ಸ್ಥಾಪಿಸಿ ಕನಿಷ್ಠ 100 ಕೋಟಿ ರೂ. ಕಾಯ್ದಿರಿಸಬೇಕು, 1000 ವರ್ಷ ಪುರಾತನ ಹುಣಸೂರು ತಾಲೂಕು ಬಿಳಿಕೆರೆ ಗೊಮ್ಮಟಗಿರಿ ಸಮಗ್ರ ಅಭಿವೃದ್ಧಿಗಾಗಿ ಕನಿಷ್ಠ ಎರಡು ಕೋಟಿ ರೂ.ಗಳನ್ನು ಬಜೆಟ್‌ನಲ್ಲಿ ಒದಗಿಸಬೇಕು, ಗೊಮ್ಮಟಗಿರಿ ಕ್ಷೇತ್ರಕ್ಕೆ ಬರುವ ಪ್ರವಾಸಿಗರಿಗಾಗಿ ಪ್ರವಾಸೋದ್ಯಮ ಇಲಾಖೆಯಿಂದ ಯಾತ್ರೀನಿವಾಸ, ಸ್ಥಳೀಯ ಸಂಸ್ಥೆಯಿಂದ ಬಸ್ ನಿಲ್ದಾಣ ಮತ್ತು ಓವರ್ ಹೆಡ್ ಟ್ಯಾಂಕ್ ನಿರ್ಮಾಣ ಮಾಡಬೇಕು ಎಂದು ಮನವಿ ಮಾಡಿದರು.
ರಾಜ್ಯದ ಎಲ್ಲ ಜೈನ ಬಸದಿ, ದೇವಸ್ಥಾನಗಳ ಆಸ್ತಿಗಳ ಗಡಿ ಗುರುತಿಸಿ ಸರ್ವೇ ಮಾಡಿ ಒತ್ತುವರಿ ಇದ್ದಲ್ಲಿ ತೆರವು ಗೋಳಿಸಬೇಕು. ಸಾಕಷ್ಟು ಪ್ರಾಚೀನ ಜೈನ ಬಸದಿ ದೇವಸ್ಥಾನಗಳಾಗಿ ರೂಪಾಂತರವಾಗಿವೆ. ಇವುಗಳ ಸರ್ವೇ ನಡೆಸಿ ಮೂಲ ಜೈನ ದೇವಸ್ಥಾನ ಆಗುವಂತೆ ಕ್ರಮ ಕೈಗೊಳ್ಳಬೇಕು, ಜೈನ ಸಮಾಜದ ಎಲ್ಲ ಪಂಗಡಗಳಿಗೆ ಜಿಲ್ಲೆ ಮತ್ತು ತಾಲೂಕು ಮಟ್ಟದಲ್ಲಿ ಪ್ರತ್ಯೇಕ ಸ್ಮಶಾನ ಒದಗಿಸಬೇಕು ಎಂದು ಆಯೋಗದ ಗಮನ ಸೆಳೆದರು.
ಜೈನ ಗುರುಗಳು ದಿನಕ್ಕೆ ಕನಿಷ್ಠ 15 ರಿಂದ 20 ಕೀ.ಮೀ. ಸಂಚರಿಸುತ್ತಾರೆ. ಆದ್ದರಿಂದ ಮೈಸೂರು ಒಳಗೊಂಡಂತೆ ರಾಜ್ಯದ ಪ್ರಮುಖ ಜೈನ ತೀರ್ಥ ಕ್ಷೇತ್ರ, ಸಮಾಜವನ್ನು ಸಂಪರ್ಕಿಸುವ ಪ್ರಮುಖ ಮಾರ್ಗಗಳಲ್ಲಿ ಕನಿಷ್ಠ 20 ಕೀ.ಮೀ.ಗೆ ಒಂದು ಕಡೆ ಗುರುಗಳ ವಿಹಾರ ಧಾಮಕ್ಕಾಗಿ ಅರ್ಧ ಏಕರೆಯಿಂದ ಒಂದು ಎಕರೆ ಸರ್ಕಾರಿ ಜಮೀನುಗಳನ್ನು ನೀಡಬೇಕು ಎಂದು ಕೋರಿಕೊಂಡರು.
ಬೌದ್ಧ ಧರ್ಮ ಮುಖಂಡ ಕಾಳಸ್ವಾಮಿ ಮಾತನಾಡಿ, ಬೌದ್ಧರ ಅಭಿವೃದ್ಧಿಗೆ ಬೌದ್ಧ ಅಭಿವೃದ್ಧಿ ಪ್ರಾಧಿಕಾರ ರಚಿಸಬೇಕು, ಅಗತ್ಯ ಇರುವ ಕಡೆಗಳಲ್ಲಿ ಬೌದ್ಧ ವಿಹಾರ ನಿರ್ಮಾಣ ಮಾಡಬೇಕು, ರಾಜ್ಯದಲ್ಲಿರುವ 9 ಅಶೋಕನ ಶಾಸನಗಳನ್ನು ಸಂರಕ್ಷಿಸಬೇಕು ಹಾಗೂ ಬೌದ್ಧ ಅಧ್ಯಯನ ಕೇಂದ್ರ ಸ್ಥಾಪಿಸಬೇಕು ಎಂದು ಆಗ್ರಹಿಸಿದರು.
ಮುಸ್ಲಿಂ ಮುಖಂಡ ಮೊಹಮ್ಮದ್ ಮನ್ಸೂರ್ ಅಲಿ ಮಾತನಾಡಿ, ಮುಸ್ಲಿಂ ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಉತ್ತೇಜನ ನೀಡಲು ಬಜೆಟ್‌ನಲ್ಲಿ ಪ್ರೋತ್ಸಾಹ ಧನ ಘೋಷಣೆ ಮಾಡಬೇಕು, ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿ ಡ್ರೈವಿಂಗ್ ಉದ್ಯೋಗದಲ್ಲಿದ್ದು ಅವರಿಗೆ ಉಚಿತವಾಗಿ ಚಾಲನಾ ಪರವಾನಗಿ ಮಾಡಿಸಿಕೊಡಬೇಕು ಎಂದು ಒತ್ತಾಯಿಸಿದರು.
ಕ್ರೈಸ್ತ ಸಮುದಾಯದ ಮುಖಂಡ ಡಾ. ಅನಿಲ್ ಥಾಮಸ್ ಮಾತನಾಡಿ, ಅಲ್ಪಸಂಖ್ಯಾತ ಇಲಾಖೆಯ ಬಹುತೇಕ ಸೌಲಭ್ಯ ಮುಸ್ಲಿಂ ಸಮುದಾಯದವರೇ ಪಡೆದುಕೊಳ್ಳುತ್ತಿದ್ದು, ಇತರೆ ಧಾರ್ಮಿಕ ಅಲ್ಪಸಂಖ್ಯಾತರನ್ನು ಸಹ ಪರಿಗಣಿಸಬೇಕು. ಎಲ್ಲ ಧಾರ್ಮಿಕ ಅಲ್ಪಸಂ ಖ್ಯಾತರ ಅಭಿವೃದ್ಧಿಗೆ ಪೂರಕವಾದ ಯೋಜನೆ ರೂಪಿಸಬೇಕು. ಕ್ರೈಸ್ತರಲ್ಲಿ ಯಾವುದೇ ಜಾತಿ ಇಲ್ಲ. ಹಾಗಾಗಿ ಕ್ರೈಸ್ತರ ಜನಗಣತಿ ಸಂದರ್ಭ ಜಾತಿ ಕಾಲಂ ಅನ್ನು ತೆಗೆದು ಹಾಕಬೇಕು ಎಂದು ಮನವಿ ಮಾಡಿದರು.
ಸಭೆಯಲ್ಲಿ ಜಿಲ್ಲಾ ವಕ್ಫ್ ಬೋರ್ಡ್ ಅಧಿಕಾರಿ ಮೊಹಮ್ಮದ್, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ನಾಗೇಂದ್ರ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಜಯಣ್ಣ ಇದ್ದರು.