ಜಿಲ್ಲೆ

ಮರೆಯಾದ ಪುಟಾಣಿಗಳ ಕಲರವ

ಕೋಲಾರ: ಮಕ್ಕಳ ನಲಿದಾಟ, ಶಿಕ್ಷಕರ ಪಾಠ, ಸದಾ ಗಿಜಿಗುಡುವ ಪುಟಾಣಿಗಳ ನಡುವೆ ಅಕ್ಷರ ದೇಗುಲದ ಗಂಟೆ ಶಬ್ದವಿಗ ನೀರವ ಮೌನಕ್ಕೆ ಜಾರಿದೆ. ಬೆಂಚುಗಳು ತುಕ್ಕು ಹಿಡಿದು ಮೂಲೆ ಸೇರಿದ್ದರೆ, ಶಾಲೆಗಳ ತುಂಬೆಲ್ಲ ಧೂಳು ತುಂಬಿ ಮೈದಾನವೆಲ್ಲ ಗಿಡ&ಗಂಟಿ ಬೆಳೆದು ಅದೆಷ್ಟೋ ಮಕ್ಕಳಿಗೆ ಅಕ್ಷರಧಾರೆ ಎರೆದ ದೇಗುಲಗಳೀಗ ಹಳೆಯ ಮನೆಯಂತಾಗಿವೆ.

ಹೌದು, ಇಂಗ್ಲಿಷ್​ ಮಾಧ್ಯಮ ವ್ಯಾಮೋಹ ಮತ್ತು ಕೂಲಿ ಕಾರ್ಮಿಕರು ಉದ್ಯೋಗ ಅರಸಿ ಊರು ಬಿಡುತ್ತಿರುವ ಪರಿಣಾಮ ಜಿಲ್ಲೆಯ ಗಡಿ ಭಾಗದ ಕನ್ನಡ ಮಾಧ್ಯಮದ 30ಕ್ಕೂ ಹೆಚ್ಚು ಶಾಲೆಗಳು 2024 ಮತ್ತು 2025ನೇ ಸಾಲಿನಲ್ಲಿ ಹಾಜರಾತಿ ಕಡಿಮೆಯಾಗಿ ಮುಚ್ಚಲ್ಪಟ್ಟಿವೆ.

ಜಿಲ್ಲೆಯ ಮುಳಬಾಗಿಲು ತಾಲೂಕು ಒಂದರಲ್ಲಿಯೇ ಕಳೆದ ವರ್ಷ 16ಕ್ಕೂ ಹೆಚ್ಚು ಪ್ರಾಥಮಿಕ ಶಾಲೆಗಳು ಬಂದ್​ ಆಗಿವೆ. ಈ ವರ್ಷ ಇನ್ನೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಶೈಕ್ಷಣಿಕ ಸಭೆ ನಡೆಸಿಲ್ಲ. ನಡೆಸಿದರೆ ಮುಚ್ಚಲ್ಪಟ್ಟಿರುವ ಶಾಲೆಗಳು ಎಷ್ಟು ಪ್ರಾರಂಭ ಆಗುತ್ತವೆ ಅಥವಾ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಶಾಲೆಗಳು ಮುಚ್ಚಲ್ಪಡುತ್ತವೆಯೇ ಎಂಬ ಮಾಹಿತಿ ಜಿಲ್ಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಚೇರಿಯಿಂದ ಹೊರಬೀಳಲಿದೆ.

ಮುಚ್ಚಲ್ಪಟ್ಟಿರುವ ಶಾಲೆಗಳಲ್ಲಿ ಪೀಠೋಪಕರಣ ತುಕ್ಕು ಹಿಡಿಯುತ್ತಿದ್ದು, ಕೊಠಡಿಗಳ ನಿರ್ವಹಣೆ ಇಲ್ಲದೆ ಶಿಥಿಲಾವಸ್ಥೆಗೆ ತಲುಪಿವೆ. ಕಾಂಪೌಂಡ್​ ಗೇಟ್​ ತೆರೆದು ಶಾಲಾವರಣವನ್ನು ಅಕ್ರಮ ಪ್ರವೇಶ ಮಾಡಿಕೊಂಡು ಅಕ್ರಮ ಚಟುವಟಿಕೆಗಳ ತಾಣ ಮಾಡಿಕೊಂಡಿರುವ ಉದಾಹರಣೆಗಳೂ ಸಾಕಷ್ಟಿವೆ.

ಜಿಲ್ಲೆಯ ಮುಳಬಾಗಿಲು, ಶ್ರೀನಿವಾಸಪುರ, ಬಂಗಾರಪೇಟೆ ತಾಲೂಕುಗಳ ಗಡಿಭಾಗಗಳಲ್ಲಿರುವ ಕನ್ನಡ ಮಾಧ್ಯಮ ಶಾಲೆಗಳು ಹೆಚ್ಚಾಗಿ ಮುಚ್ಚಲ್ಪಟ್ಟಿವೆ. ನಗರ ಮತ್ತು ಪಟ್ಟಣ ಪ್ರದೇಶದ ಆಜುಬಾಜಿನಲ್ಲಿರುವ ಗ್ರಾಮೀಣ ಭಾಗಗಳ ಕನ್ನಡ ಮಾಧ್ಯಮ ಶಾಲೆಗಳಲ್ಲಿಯು ಮಕ್ಕಳ ಹಾಜರಾತಿ ಣಿಸಿದೆ. ಖಾಸಗಿ ಶಾಲೆಗಳ ಇಂಗ್ಲಿಷ್​ ವ್ಯಾಮೋಹಕ್ಕೆ ಒಳಗಾಗಿ ಕನ್ನಡ ಸರ್ಕಾರಿ ಶಾಲೆಗಳಿಗೆ ಬೀಗ ಬೀಳುವಂತಾಗಿದೆ.

ಹಾಜರಾತಿ ಣಿಸಲು ಕಾರಣವೇನು?

ಗಡಿಭಾಗದಲ್ಲಿ ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಹೆಚ್ಚಾಗಿ ಕೂಲಿ ಕಾರ್ಮಿಕರ ಮಕ್ಕಳೇ ಸೇರುತ್ತಿರುವುದರಿಂದ ಕೂಲಿ ಕಾರ್ಮಿಕರಿಗೆ ಕೆಲಸ ಸಿಗದ ಕಾರಣ ಬೆಂಗಳೂರಿನಂತಹ ದೊಡ್ಡ ದೊಡ್ಡ ಮಹಾಮನಗರ ಪಾಲಿಕೆಗಳಿಗೆ ಕೆಲಸ ಹುಡುಕಿ ಹೋಗುತ್ತಿರುವವರು ಮಕ್ಕಳನ್ನು ಜತೆಯಲ್ಲಿ ಕರೆದೊಯ್ಯುತ್ತಿರುವ ಹಿನ್ನಲೆಯಲ್ಲಿ ಹಾಜರಾತಿ ಕಡಿಮೆಯಾಗಿದೆ. ಹಲವರು ಮಕ್ಕಳನ್ನು ಇಂಗ್ಲಿಷ್​ ಮಾಧ್ಯಮ ಶಾಲೆಗಳಿಗೆ ಸೇರಿಸುತ್ತಿರುವುದರಿಂದ ಕನ್ನಡ ಮಾಧ್ಯಮ ಶಾಲೆಗಳಿಗೆ ಹಾಜರಾತಿ ದಿನೇದಿನೆ ಕುಸಿದು ಮುಚ್ಚುವ ಹಂತಕ್ಕೆ ತಲುಪಿವೆ.

ಕಳೆದ ವರ್ಷ ಮುಚ್ಚಲ್ಪಟ್ಟಿರುವ ಶಾಲೆಗಳು ಈ ವರ್ಷದಿಂದ ಪ್ರಾರಂಭಗೊಳ್ಳುವ ಸಾಧ್ಯತೆ ಇದೆ. ಮಕ್ಕಳ ಹಾಜರಾತಿಗೆ ಅನುಗುಣವಾಗಿ ಶಾಲೆಗಳನ್ನು ಪ್ರಾರಂಭಿಸುತ್ತೇವೆ. ಒಂದು ವಾರದಲ್ಲಿ ಎಲ್ಲ ಶಿಕ್ಷಣಾಧಿಕಾರಿಗಳ ಸಭೆ ಕರೆದು ಮಾಹಿತಿ ಪಡೆಯಲಾಗುವುದು. ಆಗ ಈ ವರ್ಷ ಪ್ರಾರಂಭವಾಗುವ ಶಾಲೆಗಳ ಸಂಖ್ಯೆ ಎಷ್ಟು ಮತ್ತು ಮುಚ್ಚುವ ಶಾಲೆಗಳ ಸಂಖ್ಯೆಯೆಷ್ಟು ಎಂಬ ಮಾಹಿತಿ ಸಿಗಲಿದೆ. ಮುಚ್ಚಲ್ಪಟ್ಟಿರುವ ಶಾಲೆಗಳಲ್ಲಿರುವ ಪೀಠೋಪಕರಣಗಳನ್ನು ಅಗತ್ಯತೆಗೆ ಅನುಗುಣವಾಗಿ ಬೇರೆ ಶಾಲೆಗಳಿಗೆ ವರ್ಗಾವಣೆ ಮಾಡಿಸಲಾಗುವುದು.

> ಕೃಷ್ಣಮೂರ್ತಿ

ಶಿಕ್ಷಣ ಇಲಾಖೆಯ ಉಪನಿರ್ದೇಶಕ, ಕೋಲಾರ

ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್​ ಕಲಿಕೆ ಮುಂದುವರಿಸಿದರೆ ಸರ್ಕಾರಿ ಶಾಲೆಗಳು ಉಳಿಯುತ್ತವೆ. ಶ್ರೀಮಂತರು ಖಾಸಗಿ ಶಾಲೆಗಳಿಗೆ ಮಕ್ಕಳನ್ನು ಸೇರಿಸುತ್ತಾರೆ. ಬಡವರು ಎಲ್ಲಿ ಹೋಗುವುದು. ಬಡವರು ಇತ್ತೀಚೆಗೆ ತಮ್ಮ ಮಕ್ಕಳಿಗೆ ಇಂಗ್ಲಿಷ್​ ಕಲಿಸಬೇಕೆಂಬ ಉದ್ದೇಶದಿಂದ ಖಾಸಗಿ ಶಾಲೆಗಳಿಗೆ ಹೆಚ್ಚು ಡೊನೇಷನ್​ ನೀಡಿ ಮಕ್ಕಳನ್ನು ಸೇರಿಸಿ ಬಡವರು ಸಾಲಗಾರರಾಗುತ್ತಿದ್ದಾರೆ. ಸರ್ಕಾರ ಕೂಡಲೇ ಎಲ್ಲ ಸರ್ಕಾರಿ ಪ್ರಾಥಮಿಕ ಶಾಲೆಗಳಿಂದಲೇ ಕನ್ನಡ ಕಡ್ಡಾಯ ಜತೆಗೆ ಇಂಗ್ಲಿಷ್​ ಕಲಿಸುವ ಕೆಲಸ ಮಾಡಬೇಕಿದೆ.

> -ಪಿ.ಆರ್​.ಸೂರ್ಯನಾರಾಯಣ

ಜಿಲ್ಲಾ ಕಾರ್ಯದರ್ಶಿ ಪ್ರಾಂತ ರೈತಸಂಘ