ಜಿಲ್ಲೆ

ಗೊಂದಲದಿಂದ ಆಡಳಿತ ಕುಸಿತ

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:

ಕಾಂಗ್ರೆಸ್ ಪಕ್ಷದಲ್ಲಿನ ಗೊಂದಲದಿಂದ ಆಡಳಿತ ವ್ಯವಸ್ಥೆ ಸಂಪೂರ್ಣ ಕುಸಿದಿದೆ. ಪೊಲೀಸ್ ಇಲಾಖೆಯಲ್ಲಿ ಭ್ರಷ್ಟಾಚಾರ ಮಿತಿ ಮೀರಿದ್ದು, ಅತ್ಯಾಚಾರ ಪ್ರಕರಣಗಳು ಹೆಚ್ಚಲು ಕಾರಣವಾಗಿವೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.

ಹುಬ್ಬಳ್ಳಿಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅತಿವೃಷ್ಟಿಯಿಂದ ರೈತರು ಬೀದಿಗೆ ಬಂದಿದ್ದಾರೆ. ಇಲ್ಲಿಯವರೆಗೂ ರಾಜ್ಯ ಸರ್ಕಾರ ಪರಿಹಾರ ಹಣ ಬಿಡುಗಡೆ ಮಾಡಿಲ್ಲ. ರೈತರ ನೆರವಿಗೆ ಧಾವಿಸುವುದನ್ನು ಬಿಟ್ಟು ಮುಖ್ಯಮಂತ್ರಿಯವರು ತಮಗೆ ಬೇಕಾದವರನ್ನು ಕರೆದು ಡಿನ್ನರ್ ಪಾರ್ಟಿ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ಸಚಿವ ಸಂಪುಟದಲ್ಲಿ ಸ್ಥಾನ ಗಿಟ್ಟಿಸಲು ಹಾಗೂ ಇರುವ ಸಚಿವ ಸ್ಥಾನ ಉಳಿಸಿಕೊಳ್ಳಲು ಕಾಂಗ್ರೆಸ್ಸಿನಲ್ಲಿ ಒಬ್ಬರಿಗೊಬ್ಬರು ಬಡಿದಾಡುವ ಪರಿಸ್ಥಿತಿ ನಿರ್ವಣವಾಗಿದೆ. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ ಕೈ ಕೈ ಮಿಲಾಯಿಸುವ ಹಂತಕ್ಕೆ ಬಂದಿದ್ದಾರೆ. ಜನರೇ ಇವರ ಸೊಕ್ಕು ಅಡಗಿಸುವ ಕೆಲಸ ಮಾಡುತ್ತಾರೆ. ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ ಬರಬೇಕಾದ 350 ಕೋಟಿ ರೂ. ಹಣವನ್ನು ಸರ್ಕಾರ ಬಾಕಿ ಉಳಿಸಿಕೊಂಡಿದೆ. ರಾಜ್ಯ ಸರ್ಕಾರ ದಿವಾಳಿ ಆಗಿದೆ ಎಂದು ಕುಟುಕಿದರು.

ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕರಿ ಟೋಪಿ ಎಂದು ಆರ್​ಎಸ್​ಎಸ್​ಅನ್ನು ಮೂದಲಿಸುತ್ತಾರೆ. ಅವರಿಗೆ ಧೈರ್ಯವಿದ್ದರೆ ಮುಸ್ಲಿಮರು ಧರಿಸುವ ಟೋಪಿಗೆ ಜಾಲರಿ ಟೋಪಿ ಎಂದು ಕರೆಯಲಿ. ಹಾಗೇನಾದರೂ ಹೇಳಿದರೆ ಮುಸ್ಲಿಮರು ಅವರಿಗೆ ಆಡಳಿತ ನಡೆಸಲು ಬಿಡುವುದಿಲ್ಲ. ಕರಿ ಟೋಪಿ ಎಂದು ಆರ್​ಎಸ್​ಎಸ್ ಬಗ್ಗೆ ಮಾತನಾಡಿದ್ದು ಖಂಡನೀಯ.