ಜಿಲ್ಲೆ

ಮೈ ಕೊರೆಯುವ ಮಾಗಿ ಚಳಿ ಶುರು!

reportermys


ಅವಿನಾಶ್ ಜೈನಹಳ್ಳಿ ಮೈಸೂರು
ಈ ಬಾರಿ 15 ದಿನಗಳ ಮುಂಚೆಯೇ ಮಾಗಿಯ ಚಳಿ ಜನರನ್ನು ಕಾಡಲು ಶುರು ಮಾಡಿದೆ. ಸಾಮಾನ್ಯವಾಗಿ ಪ್ರತಿವರ್ಷ ನವೆಂಬರ್ ಎರಡನೇ ವಾರದಲ್ಲೇ ಆರಂಭವಾಗುತ್ತಿದ್ದ ಚಳಿಗಾಲ, ಈ ಬಾರಿ ಅಕ್ಟೋಬರ್ ಕಡೇ ವಾರದಲ್ಲಿಯೇ ಆರಂಭವಾಗಿದ್ದು, ಮುಂದಿನ ದಿನಗಳಲ್ಲಿ ಚಳಿ ತನ್ನ ತೀವ್ರತೆಯನ್ನು ಹೆಚ್ಚಿಸುವ ನಿರೀಕ್ಷೆ ಇದೆ.


ಜಿಲ್ಲೆಯಲ್ಲಿ ವಾರದ ಹಿಂದೆ ಗರಿಷ್ಠ ಉಷ್ಣಾಂಶ 30 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ ಉಷ್ಣಾಂಶ 23 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. ಭಾನುವಾರ ನಗರ ಪ್ರದೇಶದಲ್ಲಿ ಕನಿಷ್ಠ 19, ಗರಿಷ್ಠ 28 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಇನ್ನು ಗ್ರಾಮಾಂತರ ಭಾಗದಲ್ಲಿ ಕನಿಷ್ಠ 18, ಗರಿಷ್ಠ 28 ಡಿಗ್ರಿ ಸೆಲ್ಸಿಯಸ್ ದಾಖಲಾಗಿ ಮೈ ನಡುಗಿಸಿದೆ. ಕಳೆದ ಎರಡು ವರ್ಷಗಳಿಂದ ಉತ್ತಮವಾಗಿ ಮಳೆ ಬಿದ್ದಿರುವ ಕಾರಣ ಹಾಗೂ ಕೆಆರ್‌ಎಸ್ ಜಲಾಶಯ ಇನ್ನೂ ತುಂಬಿದ್ದು, ಮುಂದಿನ ದಿನಗಳಲ್ಲಿ ಚಳಿ ಹೆಚ್ಚಾಗಲಿದೆ ಎಂದು ಸಾವಯವ ಕೃಷಿ ಸಂಶೋಧನಾ ಕೇಂದ್ರದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ನಗರದಲ್ಲಿ ಬೆಳಗ್ಗೆ ಸೂರ್ಯನ ಕಿರಣಗಳು ಬೀಳುವವರೆಗೂ ಜನ ಮನೆಯಿಂದ ಹೊರಬರುವುದೇ ಕಷ್ಟವೆನಿಸುತ್ತಿದೆ. ಸಂಜೆಯಾಗುತ್ತಿದ್ದಂತೆ ಶೀತಗಾಳಿಯೊಂದಿಗೆ ನಿಧಾನವಾಗಿ ಮೈ ಕೊರೆಯುವ ಚಳಿ ಶುರುವಾಗುತ್ತಿದೆ. ಹಗಲಿನಲ್ಲಿ ಸುಡುವ ಬಿಸಿಲು, ರಾತ್ರಿ ಮೈ ಕೊರೆಯುವ ಚಳಿ. ಇದು ಈಗಿನ ವಾತಾವರಣ.

ನಗರದ ಕುಕ್ಕರಹಳ್ಳಿಕೆರೆ, ಮಾನಸಗಂಗೋತ್ರಿ, ಕಾರಂಜಿಕೆರೆ ಸುತ್ತ ವಾಕ್ ಮಾಡುವವರು, ರಾತ್ರಿ ಪಾಳಿಯಲ್ಲಿ ದುಡಿಯುವವರು, ಪೇಪರ್ ಹಾಕುವ ಹುಡುಗರು, ನಗರ ಸ್ವಚ್ಛಗೊಳಿಸುವ ಪೌರಕಾರ್ಮಿಕರು, ಹಾಲು ಹಾಕುವವರು ಮತ್ತಿತರರು ಮಾಗಿಯ ಚಳಿಗೆ ನಲುಗಿಹೋಗಿದ್ದು, ಬೆಚ್ಚನೆ ಉಡುಪುಗಳು ಇಲ್ಲದೆ ಬೀದಿಗಿಳಿಯದಂತಾಗಿದೆ.

ಬೆಚ್ಚನೆ ಉಡುಪುಗಳ ಮೊರೆ!:
ಮೈ ಕೊರೆಯುವ ಚಳಿಗೆ ತತ್ತರಿಸಿರುವ ನಗರದ ಜನರು ಬೆಚ್ಚನೆಯ ಉಡುಪುಗಳಿಗೆ ಮೊರೆ ಹೋಗುತ್ತಿದ್ದಾರೆ. ಚಳಿ ಹೆಚ್ಚುತ್ತಿರುವುದರಿಂದ ಬೆಚ್ಚನೆ ಉಡುಪುಗಳಾದ ಸ್ವೆಟರ್, ಜಾಕೆಟ್, ಶಾಲು, ಕಾಲುಚೀಲ, ಕೈಚೀಲ, ಟೋಪಿ, ಕಿವಿ ಮುಚ್ಚುವ ಬಟ್ಟೆ ಸೇರಿದಂತೆ ದಪ್ಪನೆಯ ಹೊದಿಕೆಗಳಿಗೆ ಈಗ ಬೇಡಿಕೆ ಬಂದಿದೆ. ಅಂತೆಯೆ, ಇವುಗಳ ಬೆಲೆ ತುಸು ದುಬಾರಿಯಾದರೂ ಭರ್ಜರಿಯಾಗಿ ಮಾರಾಟವಾಗುತ್ತಿವೆ. ಕೆಲ ಮಹಿಳೆಯರು ಚೆನ್ನಾಗಿ ಕಾಣಲು ಚಳಿಯಾದರೂ ಪರವಾಗಿಲ್ಲ ಎಂದು ಫ್ಯಾಷನ್ ಉಡುಪುಗಳನ್ನೇ ಧರಿಸುತ್ತಾರೆ. ಅಂಥ ಮಹಿಳೆಯರಿಗಾಗಿ ಚಳಿಗಾಲದ ಫ್ಯಾಷನ್ ಉಡುಪುಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಮುಖ್ಯವಾಗಿ ಈ ಬೆಚ್ಚನೆಯ ಉಡುಪುಗಳು ನಗರದ ಪ್ರಮುಖ ಮಾಲ್‌ಗಳಲ್ಲಿ, ಡಿ.ದೇವರಾಜ ಅರಸು ರಸ್ತೆ, ಸಯ್ಯಜಿರಾವ್ ರಸ್ತೆಗಳಲ್ಲಿರುವ ಬಟ್ಟೆ ಮಳಿಗೆಗಳು, ಗಾಂಧಿಚೌಕದ ಫುಟ್‌ಪಾತ್‌ಗಳಲ್ಲಿ ಹೆಚ್ಚಾಗಿ ವ್ಯಾಪಾರವಾಗುತ್ತಿವೆ.

ಆರೋಗ್ಯದ ಬಗ್ಗೆ ಎಚ್ಚರವಿರಲಿ:
ಚಳಿಗಾಲದಲ್ಲಿ ನೆಗಡಿ, ಕೆಮ್ಮು, ಶೀತ, ಜ್ವರ ಬರುವ ಸಾಧ್ಯತೆಗಳಿವೆ. ದೇಹದ ಕೈ, ಕಾಲುಗಳ ಚರ್ಮ ಒಡೆಯುವ ಸಾಧ್ಯತೆಯಿದ್ದು, ಈ ಬಗ್ಗೆ ಸಾರ್ವಜನಿಕರು ಎಚ್ಚರ ವಹಿಸಬೇಕಾಗಿದೆ. ಕಳೆದ ವಾರದಿಂದ ಮೈ ಕೊರೆಯುವ ಚಳಿಯ ಹೊಡೆತಕ್ಕೆ ಜನ ತತ್ತರಿಸಿದ್ದಾರೆ. ವಾತಾವರಣದ ಬದಲಾವಣೆಯಿಂದಾಗಿ ಮಕ್ಕಳಿಗೆ ನೆಗಡಿ, ಕೆಮ್ಮು, ಶೀತ, ಜ್ವರ ಬಾಧಿಸುವುದು ಉಂಟು. ಹೀಗಾಗಿ ಎಲ್ಲರೂ ಬೆಚ್ಚನೆಯ ಉಡುಪುಗಳನ್ನು ತೊಡಬೇಕು ಎಂದು ವೈದ್ಯರು ಸಲಹೆ ನೀಡಿದ್ದಾರೆ.


ಹೀಗೆ ಮಾಡಿ…

  • ದೇಹವನ್ನು ಬೆಚ್ಚಗಿರಿಸಿಕೊಳ್ಳಲು ಸ್ವೆಟರ್, ಕಿವಿಗೆ ಹತ್ತಿ ಹಾಕಿಕೊಳ್ಳಬೇಕು
  • ಕುದಿಸಿ ಆರಿಸಿದ ನೀರು ಸೇವಿಸಬೇಕು
  • ಬಿಸಿ ಹಾಗೂ ಶುಚಿಯಾದ ಆಹಾರ ತಿನ್ನಬೇಕು
  • ಫ್ರಿಡ್ಜ್‌ನಲ್ಲಿ ಹೆಚ್ಚು ಹೊತ್ತು ಇಟ್ಟ ಆಹಾರ ತಿನ್ನಬಾರದು
  • ಧೂಳಿನಿಂದ ದೂರವಿರಬೇಕು, ಹೊರ ಹೋಗುವಾಗ ಚೆನ್ನಾಗಿ ಒಣಗಿಸಿದ ಬಟ್ಟೆಯನ್ನು ಮೈತುಂಬ ಧರಿಸಬೇಕು
  • ಅಸ್ತಮಾದಿಂದ ಬಳಲುತ್ತಿರುವವರು ಯಾವಾಗಲೂ ಜತೆಯಲ್ಲಿ ತಪ್ಪದೆ ಇನ್ಹೇಲರ್ ಇಟ್ಟುಕೊಳ್ಳಬೇಕು
  • ಮಕ್ಕಳಿಗೆ ಬೆಚ್ಚನೆಯ ಉಡುಪು ತೊಡಿಸಬೇಕು
ಈ ಬಾರಿ 15 ದಿನ ಮುಂಚೆಯೇ ಚಳಿ ಜನರನ್ನು ಕಾಡಲು ಶುರು ಮಾಡಿದೆ. ಎರಡು ವರ್ಷಗಳಿಂದ ಉತ್ತಮ ಮಳೆ ಬಿದ್ದಿರುವ ಹಾಗೂ ಕೆಆರ್‌ಎಸ್ ಜಲಾಶಯ ತುಂಬಿರುವ ಕಾರಣ ಡಿಸೆಂಬರ್ ಹಾಗೂ ಜನವರಿಯಲ್ಲಿ ಚಳಿ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ.ಡಾ.ಸಿ.ಗೋವಿಂದರಾಜು, ಹಿರಿಯ ಕ್ಷೇತ್ರ ಅಧೀಕ್ಷಕ, ನಾಗನಹಳ್ಳಿ ಸಾವಯವ ಕೃಷಿ ಸಂಶೋಧನಾ ಕೇಂದ್ರ