ಮಾಗಡಿ : ಸಿಎಂ ಬದಲಾವಣೆ ಕೂಗು ಅಪ್ರಸ್ತುತ, ಯಾರೋ ಬಾಯಿ ಚಪಲಕ್ಕೆ ಆಡುತ್ತಿರುವ ಮಾತು ಎಂದು ಶಾಸಕ ಎಚ್.ಸಿ.ಬಾಲಕೃಷ್ಣ ಲೇವಡಿ ಮಾಡಿದರು.
ತಾಲೂಕಿನ ಮಠದ ಗ್ರಾಮದ ರಸ್ತೆ ಕಾಮಗಾರಿಗೆ ಸೋಮವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿ, ಡಿ.ಕೆ. ಶಿವಕುಮಾರ್ ಮುಂದೆ ಮುಖ್ಯಮಂತ್ರಿ ಆಗಬೇಕಿರುವ ಬಗ್ಗೆ ಹೈಕಮಾಂಡ್ ತೀರ್ಮಾನಿಸುತ್ತದೆ. ಯಾರೋ ಶಾಸಕರು, ಬೀದಿಯಲ್ಲಿ ಹೋಗುವರು ಈ ಬಗ್ಗೆ ಮಾತನಾಡಬಾರದು ಎಂದರು.
ಕಾಂಗ್ರೆಸ್ ಶಿಸ್ತಿನಿಂದ ನಡೆಯಬೇಕು. ಕಾರ್ಯಕರ್ತರ ಅಭಿಪ್ರಾಯಕ್ಕೆ ಗೌರವ ನೀಡಬೇಕು. ನಾನು ಯಾರನ್ನೂ ಮುಖ್ಯಮಂತ್ರಿ ಮಾಡೋಕೂ ಆಗಲ್ಲ, ಕೆಳಗಿಳಿಸಲೂ ಸಾಧ್ಯವಿಲ್ಲ. ಅದಕ್ಕೆ ಹೈಕಮಾಂಡ್ ಇದೆ. ಅವರೇ ತೀರ್ಮಾನಿಸುತ್ತಾರೆ ಎಂದರು.
ಸ್ವಾಮೀಜಿಗಳು ಅವರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ರಾಜಕಾರಣಿಗಳು ಮಾತನಾಡಬಾರದು, ರಾಜಕಾರಣಿಗಳು ಮಾತನಾಡಿದರೆ ಆ ಬಗ್ಗೆ ಸುದ್ದಿಯಾಗುತ್ತದೆ. ಅದಕ್ಕೆ ಅವಕಾಶ ಕೊಡಬಾರದು ಎಂದರು.
ಟೀಕೆ ಸರಿಯಲ್ಲ : ಎಲ್ಲ ಜನಾಂಗದ ಸ್ವಾಮೀಜಿಗಳು ಆ ಸಮುದಾಯದ ನಾಯಕರು ಮುಖ್ಯಮಂತ್ರಿಯಾಗಬೇಕು ಎನ್ನುವುದು ಸಹಜ. ಹಾಗಂತ ರಾಜಕಾರಣಿಗಳಾದ ನಾವು ಇತಿಮಿತಿಯಲ್ಲಿ ವರ್ತಿಸಬೇಕು ಎಂದು ಸಚಿವ ರಾಜಣ್ಣ ಅವರ ಹೆಸರು ಪ್ರಸ್ತಾಪಿಸದೆ ಬಾಲಕೃಷ್ಣ ವಾಗ್ದಾಳಿ ನಡೆಸಿದರು.
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಮಾಧ್ಯಮಗಳ ಕಪೋಕಲ್ಪಿತ ವರದಿ ಅಷ್ಟೆ. ಈ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ. ಪಕ್ಷ ಬಲವರ್ಧನೆ ಬಗ್ಗೆ ಚರ್ಚೆಯಾಗಬೇಕು, ನಮ್ಮ ಹೈಕಮಾಂಡ್ ಶಕ್ತಿಯುತವಾಗಿದೆ. ಆ ಬಗ್ಗೆ ಅಲ್ಲಿ ತೀರ್ಮಾನಿಸುತ್ತದೆ. ಮಾಧ್ಯಮಗಳು ಸೃಷ್ಟಿಮಾಡುವುದು ಬೇಡ. ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿದರೆ ಒಂದೊಂದು ವ್ಯಾಖ್ಯಾನ ಮಾಡುವುದು ಸರಿಯಲ್ಲ ಎಂದರು.
ನಾನು 5 ಬಾರಿ ಶಾಸಕನಾಗಿದ್ದೇನೆ. ಸಚಿವ ಸ್ಥಾನ ಕೊಡಲೇ ಬೇಕು. ಈ ಜಿಲ್ಲೆಯಿಂದ ಮುಂದೆ ಸಚಿವ ಸ್ಥಾನ ನೀಡಲಿದ್ದಾರೆ ಎಂಬ ಆತ್ಮವಿಶ್ವಾಸವಿದೆೆ. ಆ ನಿಟ್ಟಿನಲ್ಲಿ ಸಿಎಂ, ಹಾಗೂ ಹೈಕಮಾಂಡ್ ಸೂಕ್ತ ತೀರ್ಮಾನ ಕೈಗೊಳ್ಳುತ್ತಾರೆ ಎಂದರು.
ಬಮುಲ್ ನಿರ್ದೇಶಕ ನರಸಿಂಹಮೂರ್ತಿ, ಬಿಎಂಆರ್‌ಡಿಎ ಮಾಜಿ ಅಧ್ಯಕ್ಷ ಕೆ. ಕೃಷ್ಣಮೂರ್ತಿ, ತಾಪಂ ಮಾಜಿ ಸದಸ್ಯ ಸುಮಾ ರಮೇಶ್, ದಿಶಾ ಸಮಿತಿ ಸದಸ್ಯ ಜೆ.ಪಿ ಚಂದ್ರೇಗೌಡ, ಗ್ರಾಪಂ ಅಧ್ಯಕ್ಷ ಮಲ್ಲಿಕಾರ್ಜುನ, ಕೆಂಪಣ್ಣ ಇದ್ದರು.