ಜಿಲ್ಲೆ

ಸರ್ಕಾರಿ ನೌಕರರಿಗೆ ಕೊಟ್ಟ ಭರವಸೆ ಈಡೇರಿಸಿದ ಸಿಎಂ

ಮದ್ದೂರು: ರಾಜ್ಯ ಸರ್ಕಾರಿ ನೌಕರರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ 7ನೇ ವೇತನ ಆಯೋಗ ಜಾರಿ ಮಾಡಿರುವುದರಿಂದ ರಾಜ್ಯ ಸರ್ಕಾರಿ ನೌಕರರಿಂದ ಮುಖ್ಯಮಂತ್ರಿಗೆ ಅಭಿನಂದನೆ ಸಲ್ಲಿಸಲು ಬೆಂಗಳೂರಿಗೆ ತೆರಳುತ್ತಿರುವುದಾಗಿ ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಆಲೂರು ರವಿ ತಿಳಿಸಿದರು.


ಪಟ್ಟಣದ ನೌಕರರ ಸಂಘದ ಕಚೇರಿ ಆವರಣದಲ್ಲಿ ಬೆಂಗಳೂರಿಗೆ ತೆರಳುತ್ತಿರುವ ವಾಹನಗಳಿಗೆ ಶನಿವಾರ ಚಾಲನೆ ನೀಡಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ನೌಕರರಿಗೆ ಕೊಟ್ಟ ಭರವಸೆಯಂತೆ 7ನೇ ವೇತನ ಆಯೋಗ ಜಾರಿ ಮಾಡಿದ್ದು ಮುಂದಿನ ದಿನಗಳಲ್ಲಿ ಮತ್ತಷ್ಟು ಯೋಜನೆಗಳನ್ನು ಕಲ್ಪಿಸಲಿದ್ದಾರೆಂದು ವಿಶ್ವಾಸ ವ್ಯಕ್ತಪಡಿಸಿದರು.


ಬೆಂಗಳೂರಿನಲ್ಲಿ ನಡೆಯುವ ಅಭಿನಂದನಾ ಸಮಾರಂಭದ ವೇಳೆ ನೌಕರರ ಬೇಡಿಕೆಗಳಾದ ಎನ್‌ಪಿಎಸ್ ರದ್ದು ಮಾಡಿ ಒಪಿಎಸ್ ಜಾರಿ ಮಾಡುವಂತೆ ಜ್ಯೋತಿ ಸಂಜೀವಿನಿ ಯೋಜನೆಯನ್ನು ಜಾರಿಗೊಳಿಸಿ ಸಿಡಿಆರ್‌ಐ ಬದಲಾವಣೆ ಮಾಡುವುದರ ಮೂಲಕ ನೌಕರರ ಹಲವು ವರ್ಷಗಳ ಬೇಡಿಕೆಯನ್ನು ಈಡೇರಿಸುವಂತೆ ಒತ್ತಾಯಿಸಲಾಗುವುದು ಎಂದರು.


7ನೇ ವೇತನ ಆಯೋಗವನ್ನು ಜಾರಿ ಮಾಡಿರುವುದರಿಂದ ರಾಜ್ಯ ಸರ್ಕಾರಿ ನೌಕರರು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಅಭಿನಂದನಾ ಸಮಾರಂಭ ಆಯೋಜಿಸಲಾಗಿದ್ದು, ತಾಲೂಕಿನಿಂದ ವಿವಿಧ ಇಲಾಖೆಗಳ ಐನೂರುಕ್ಕೂ ಹೆಚ್ಚು ಸರ್ಕಾರಿ ನೌಕರರು ತೆರಳುತ್ತಿರುವುದಾಗಿ ಹೇಳಿದರು.


ನೌಕರರ ಸಂಘ ಹಿರಿಯ ಉಪಾಧ್ಯಕ್ಷ ಶಿವನಂಜೇಗೌಡ ಉಪಾಧ್ಯಕ್ಷ, ರಾಮಚಂದ್ರು ಕಾರ್ಯದರ್ಶಿ ಶ್ರೀನಿವಾಸ್, ಖಜಾಂಚಿ ಉಮೇಶ್, ರಾಜ್ಯ ಪರಿಷತ್ ಸದಸ್ಯ ಯೋಗಾನಂದ ಜಂಟಿ ಕಾರ್ಯದರ್ಶಿ ಚಂದ್ರಶೇಖರ್ ಇದ್ದರು.