ಜಿಲ್ಲೆ

ಜಿಲ್ಲೆಯಲ್ಲಿ ಸಚಿವ ಸ್ಥಾನದ ಕೂಗು ಜೋರು

ಶಾಸಕ ಸುಬ್ಬಾರೆಡ್ಡಿಗೆ ಒಲಿಯುವುದೇ ಅಧಿಕಾರ? ನಾನು ಆಕಾಂಕ್ಷಿಯಲ್ಲ ಎಂದ ಪ್ರದೀಪ್ ಈಶ್ವರ್

ಚಿಕ್ಕಬಳ್ಳಾಪುರ: ರಾಜ್ಯದ ಸಚಿವ ಸಂಪುಟದ ಪುನಾರಚನೆಯ ಚರ್ಚೆ ನಡುವೆ ಬಾಗೇಪಲ್ಲಿ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಸಚಿವ ಗಾದಿ ದಕ್ಕಿಸಿಕೊಳ್ಳುವ ರಾಗ ಶುರುಮಾಡಿಕೊಂಡಿದ್ದಾರೆ.

ಪ್ರಸ್ತುತ ರಾಜ್ಯದಲ್ಲಿ ಅಧಿಕಾರ ಹಂಚಿಕೆಗೆ ಸಂಬಂಧಿಸಿದಂತೆ ಹೈಕಮಾಂಡ್‌ನಲ್ಲಿ ಒಪ್ಪಂದವಾಗಿದೆ ಎಂಬ ಮಾತು ಚರ್ಚೆಯಾಗುತ್ತಿದೆ. ಹಾಗೆಯೇ ಕರಾರಿನ ನಿರಾಕರಣೆಯಾಗುತ್ತಿದೆ. ಇದರ ನಡುವೆ ಸಚಿವ ಸಂಪುಟ ಪುನಾರಚನೆಯ ಬೆಳವಣಿಗೆಗಳು ನಡೆದಿದ್ದು, ಉನ್ನತ ಶಿಕ್ಷಣ ಸಚಿವ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಸ್ಥಾನದ ಬದಲಾವಣೆಯ ಕೂಗು ಎದ್ದಿದೆ. ಇದೇ ವೇಳೆ ಸಚಿವ ಸ್ಥಾನವನ್ನು ನೀಡಲೇಬೇಕೆಂದು ಎಸ್.ಎನ್.ಸುಬ್ಬಾರೆಡ್ಡಿ ವರಿಷ್ಠರ ಮೇಲೆ ಒತ್ತಡ ಹೇರುತ್ತಿದ್ದಾರೆ. ಇದು ಬಹಿರಂಗ ಚರ್ಚೆಯಾಗುತ್ತಿದ್ದು, ಮುಂದಿನ ಬೆಳವಣಿಗೆಗಳು ಕುತೂಹಲ ಮೂಡಿಸಿವೆ.

ನಾಯಕರ ಮೌಲ್ಯಾಂಕನ

ಈಗಾಗಲೇ ವರಿಷ್ಠರ ಸೂಚನೆ ಹಿನ್ನೆಲೆಯಲ್ಲಿ ಕೆಪಿಸಿಸಿ ಸಚಿವರು ಇಲಾಖಾವಾರು ಸಾಧಿಸಿದ ಪ್ರಗತಿ, ಅಭಿವೃದ್ಧಿ ಯೋಜನೆಗಳು, ಜನರ ಒಲವು, ಪಕ್ಷದ ಸಂಘಟನೆ ಮತ್ತು ಸ್ಪಂದನೆ ಸೇರಿ ನಾನಾ ಅಂಶಗಳನ್ನೊಳಗೊಂಡಂತೆ ಮೌಲ್ಯಮಾಪನ ಮಾಡಲಾಗುತ್ತಿದೆ. ದಕ್ಷತೆ ಮತ್ತು ಪಾರದರ್ಶಕತೆಯನ್ನು ಕಾಪಾಡಿಕೊಂಡವರನ್ನು ಉಳಿಸಿಕೊಂಡು ಸರ್ಕಾರಕ್ಕೆ ಕಳಂಕ ತಂದಿರುವ, ತಟಸ್ಥ ಧೋರಣೆಯ ಕೆಲಸಗಳಿಗೆ ಹೆಸರುವಾಸಿಯಾಗಿರುವ, ಎರಡೂವರೆ ವರ್ಷ ಅಧಿಕಾರ ಅನುಭವಿಸಿದ ಕೆಲವರನ್ನು ಸಚಿವ ಸ್ಥಾನದಿಂದ ಬಿಡುಗಡೆಗೊಳಿಸಿ, ಬೇರೆಯವರಿಗೆ ಅವಕಾಶ ನೀಡುವ ಸಾಧ್ಯತೆಯ ಮಾತುಗಳು ಕೇಳಿ ಬರುತ್ತಿದ್ದು, ಇದರಿಂದ ಗಾದಿಗಾಗಿ ಎದುರು ನೋಡುತ್ತಿರುವ ಆಕಾಂಕ್ಷಿಗಳು ಕಾಂಗ್ರೆಸ್ ವರಿಷ್ಠರ ಮೇಲೆ ಒತ್ತಡ ಹೆಚ್ಚಿಸಿದ್ದಾರೆ. ಇದರಲ್ಲಿ ಎಸ್.ಎನ್.ಸುಬ್ಬಾರೆಡ್ಡಿ ಸಹ ಒಬ್ಬರು ಎನ್ನಲಾಗಿದೆ.

ಜಿಲ್ಲೆಯಲ್ಲಿ ಕೈ ಬಲ

5 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಜಿಲ್ಲೆಯಲ್ಲಿ ಕಾಂಗ್ರೆಸ್ 3, ಜೆಡಿಎಸ್ ಮತ್ತು ಪಕ್ಷೇತರ ಒಬ್ಬರು ಶಾಸಕರಿದ್ದಾರೆ. ಸ್ವಪಕ್ಷೀಯ ಸರ್ಕಾರದಲ್ಲಿ ಮೂವರ ಪೈಕಿ ಒಬ್ಬರಿಗೆ (ಡಾ.ಎಂ.ಸಿ.ಸುಧಾಕರ್) ಮಹತ್ವದ ಜವಾಬ್ದಾರಿ ಸಿಕ್ಕಿದೆ. ಸತತವಾಗಿ ಬಾಗೇಪಲ್ಲಿ ಕ್ಷೇತ್ರದಿಂದ ಮೂರು ಬಾರಿ ಆಯ್ಕೆಯಾಗಿರುವ ಸುಬ್ಬಾರೆಡ್ಡಿ ಸಚಿವ ಸ್ಥಾನಕ್ಕೆ ಎದುರು ನೋಡುತ್ತಿದ್ದಾರೆ. ಇದರ ನಡುವೆ ಮೊದಲ ಬಾರಿಗೆ ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಗೆದ್ದ ಶಾಸಕ ಪ್ರದೀಪ್ ಈಶ್ವರ್ ಅಯ್ಯರ್‌ಗೆ ಬಲಿಜ ಸಮುದಾಯದ ಆದ್ಯತೆಯ ಸೂಚಕವಾಗಿ ಸಚಿವರನ್ನಾಗಿಸಲು ಬೆಂಬಲಿಗರು ಒತ್ತಾಯಿಸುತ್ತಿದ್ದಾರೆ.

ಪೈಪೋಟಿ ತೀವ್ರ

ಕಳೆದ 2023ರಲ್ಲಿ ರಾಜ್ಯದಲ್ಲಿ ಸ್ಪಷ್ಟ ಬಹುಮತದೊಂದಿಗೆ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿದ್ದಂತೆ ಜಿಲ್ಲೆಯಲ್ಲಿನ ಸ್ವಪಕ್ಷೀಯ ಶಾಸಕರ ನಡುವೆ ಸಚಿವ ಸ್ಥಾನಕ್ಕೆ ಪೈಪೋಟಿ ಕಂಡು ಬಂದಿತ್ತು. ದಿಲ್ಲಿ ಮತ್ತು ಬೆಂಗಳೂರಿನಲ್ಲಿ ಹಗ್ಗಜಗ್ಗಾಟದ ನಡುವೆ ಉನ್ನತ ಶಿಕ್ಷಣ ಸಚಿವರಾಗಿ ಸುಧಾಕರ್ ಪ್ರಮಾಣ ವಚನ ಸ್ವೀಕರಿಸಿದರು. ಇದರ ಮುನಿಸಿನಲ್ಲಿ ಕುದಿಯುತ್ತಿದ್ದಾಗ ರಾಜ್ಯ ಬೀಜ ನಿಗಮ ಮಂಡಳಿ ಅಧ್ಯಕ್ಷ ಸ್ಥಾನವನ್ನು ಘೋಷಿಸಿದರೂ ಸುಬ್ಬಾರೆಡ್ಡಿ ನಿರಾಕರಿಸಿದ್ದು, ಎರಡೂವರೆ ವರ್ಷದ ಬಳಿಕ ಸಚಿವ ಸಂಪುಟ ಪುನಾರಚ ವೇಳೆ ಬಯಸಿದ ಜವಾಬ್ದಾರಿಯನ್ನು ವಹಿಸಲಾಗುತ್ತದೆ ಎಂಬ ನಾಯಕರ ಭರವಸೆಯಿಂದ ಸುಮ್ಮನಾಗಿದ್ದರು. ಈಗ ಧ್ವನಿ ಎತ್ತುತ್ತಿದ್ದಾರೆ.

"ಸಚಿವ ಸ್ಥಾನಕ್ಕಾಗಿ ತಾಳ್ಮೆಯಿಂದ ಎದುರು ನೋಡುತ್ತಿದ್ದೇನೆ. ಮೊದಲಿನಿಂದಲೂ ಕಾಂಗ್ರೆಸ್‌ನಲ್ಲಿ ನಿಷ್ಠೆಯಿಂದ ಇರುವೆ. ಈ ಬಾರಿ ಸಿಕ್ಕೇ ಸಿಗುತ್ತದೆ ಎಂಬ ನಿರೀಕ್ಷೆ ಇದೆ." - ಎಸ್.ಎನ್.ಸುಬ್ಬಾರೆಡ್ಡಿ ಬಾಗೇಪಲ್ಲಿ ಶಾಸಕ "ನಾನಂತೂ ಸಚಿವ ಸ್ಥಾನದ ಆಕಾಂಕ್ಷಿಯಲ್ಲ. ಇದರಲ್ಲಿ ಯಾವುದೇ ಅನುಮಾನವಿಲ್ಲ. ಒಂದು ವೇಳೆ ಹಣೆಬರಹದಲ್ಲಿ ಬರೆದಿದ್ದರೆ ಸಿಗಬಹುದು." - ಪ್ರದೀಪ್ ಈಶ್ವರ್ ಚಿಕ್ಕಬಳ್ಳಾಪುರ ಶಾಸಕ