ಗುಳೇದಗುಡ್ಡ ಪಟ್ಟಣದಲ್ಲಿನ ನಗರ ಮೋಜಿಣಿ ಕಾರ್ಯಾಲಯದ ಶಿಥಿಲಾವಸ್ಥೆ. 
ಜಿಲ್ಲೆ

ಸಿಟಿ ಸರ್ವೆ ಕಚೇರಿ ಶಿಥಿಲಾವಸ್ಥೆ

ಗುಳೇದಗುಡ್ಡ : ಪಟ್ಟಣದ ನಾಡಕಚೇರಿ ಹತ್ತಿರ ಇರುವ ನಗರ ಮೋಜಿಣಿ ಕಾರ್ಯಾಲಯ (ಸಿಟಿ ಸರ್ವೆ ಕಚೇರಿ) ನಾಲ್ಕು ದಿನಗಳಿಂದ ಸುರಿಯುತ್ತಿರುವ ಜಿಟಿ ಜಿಟಿ ಮಳೆಗೆ ಸಂಪೂರ್ಣ ಸೋರುತ್ತಿದೆ. ಶಿಥಿಲಾವಸ್ಥೆ ತಲುಪಿದ ಕಚೇರಿಯಲ್ಲೇ ಕೆಲಸ ನಿರ್ವಹಣೆ ಮಾಡಬೇಕಾದ ಅನಿವಾರ್ಯತೆ ಎದುರಾಗಿದ್ದು ಮಳೆ ನೀರಿನಿಂದ ದಾಖಲೆ ಹಾಳಾಗುವ ಆತಂಕವಿದೆ.

ಸ್ವಾತಂತ್ರಪೂರ್ವದ ಕಟ್ಟಡ ಇದಾಗಿದ್ದು, ನಾಲ್ಕು ರೂಮ್‌ಗಳಿವೆ. ಮೂರು ರೂಮ್‌ಗಳು ಸಂಪೂರ್ಣವಾಗಿ ಸೋರುತ್ತಿದ್ದು, ಕಿಟಕಿ ಮುಚ್ಚುವ ವ್ಯವಸ್ಥೆ ಇಲ್ಲ, ಕಟ್ಟಡದ ಮಾಳಿಗೆ ಅರ್ಧ ತೆರೆದುಕೊಂಡಿದೆ.

ಒಂದು ರೂಮ್ ಮಾತ್ರ ಸೋರುತ್ತಿಲ್ಲ ಅದರಲ್ಲಿಯೇ ಎಲ್ಲ ದಾಖಲೆಗಳನ್ನು ಪ್ಲಾಸ್ಟಿಕ್ ಹಾಳೆ ಹಾಕಿ ಸಂರಕ್ಷಿಸಲಾಗಿದೆ. ಈ ಕಟ್ಟಡ ಪುರಸಭೆ ವ್ಯಾಪ್ತಿಯಲ್ಲಿದ್ದು 1943 ರಿಂದ 2023ರ ವರೆಗೆ ಅಂದಾಜು 70 ವರ್ಷದ ದಾಖಲೆಗಳನ್ನು ಇಲ್ಲಿಡಲಾಗಿದೆ. ಕಚೇರಿಯಲ್ಲಿ ಎರಡು ವರ್ಷಗಳಿಂದ ಶ್ರೀಕಾಂತ ಹೊಸಮನಿ ಎಂಬುವರು ಸಿಟಿ ಸರ್ವೇಯರ್ ಆಗಿ ಒಬ್ಬರೇ ಕಾರ್ಯನಿರ್ವಹಿಸುತ್ತಿದ್ದಾರೆ.

ಕಚೇರಿಯಲ್ಲಿ ಒಬ್ಬ ಸಿಪಾಯಿ ಕೂಡ ಇಲ್ಲ. ಹೀಗಾಗಿ ಮಳೆ ನೀರು ಬೀಳುವಾಗ ಸರಿ ಮಾಡಲು ಸಾಧ್ಯವಿಲ್ಲದಂಥ ಸ್ಥಿತಿ ಇದೆ. ಮಳೆ ಬಂದರೆ ಕಚೇರಿ ತುಂಬಾ ನೀರು ನಿಲ್ಲುತ್ತದೆ. ಕಟ್ಟಡವನ್ನು ಇದುವರೆಗೆ ಪುರಸಭೆಯವರು ದುರಸ್ತಿ ಮಾಡದೆ ಇರುವುದರಿಂದ ಸಂಪೂರ್ಣ ಶಿಥಿಲಾವಸ್ಥೆ ತಲುಪಿದೆ.

ನಾನು ಇತ್ತೀಚೆಗೆ ಅಧಿಕಾರ ವಹಿಸಿಕೊಂಡಿದ್ದು ಕ್ರಿಯಾಯೋಜನೆಯಲ್ಲಿ ಅನುಮೋದನೆಗೊಂಡ ಮಾಹಿತಿ ಇದೆ. ಅದನ್ನು ನೋಡಿ ಟೆಂಡರ್ ಕರೆದು ದುರಸ್ತಿ ಕಾರ್ಯ ಮಾಡಲಾಗುವುದು.
ಎ.ಎಚ್.ಮುಜಾವರ, ಮುಖ್ಯಾಧಿಕಾರಿ, ಪುರಸಭೆ, ಗುಳೇದಗುಡ್ಡ