ಜಿಲ್ಲೆ

ಹುಬ್ಬಳ್ಳಿಗೆ ಆಗಮಿಸಿದ ಸಿಐಡಿ ತಂಡ

ಮರಿದೇವ ಹೂಗಾರ

ಹುಬ್ಬಳ್ಳಿ: ಹತ್ಯೆಯಾದ ಅಂಜಲಿ ಅಂಬಿಗೇರ ಪ್ರಕರವನ್ನು ರಾಜ್ಯ ಸರ್ಕಾರವು ಸಿಐಡಿಗೆ ವಹಿಸಿದ್ದು, ಈ ಹಿನ್ನೆಲೆಯಲ್ಲಿ ಸಿಐಡಿ ಎಸ್‌ಪಿ ವೆಂಕಟೇಶ ಹಾಗೂ ಡಿವೈಎಸ್‌ಪಿ ಉಮೇಶ ನೇತೃತ್ವದ ತಂಡ ಮಂಗಳವಾರ ನಗರಕ್ಕೆ ಆಗಮಿಸಿದೆ.
ಗೃಹ ಸಚಿವ ಡಾ.ಜಿ. ಪರಮೇಶ್ವರ ಅವರು ಸೋಮವಾರ ಹತ್ಯೆಯಾದ ಅಂಜಲಿ ಅಂಬಿಗೇರ ಅವರ ಮನೆಗೆ ಭೇಟಿ ನೀಡಿದ್ದರು. ನಂತರ ಹೋಟೆಲ್ ಡೆನಿಸನ್ಸ್‌ನಲ್ಲಿ ಸುದ್ದಿಗೋಷ್ಠಿ ನಡೆಸಿದ ಸಚಿವರು, ನೇಹಾ ಹಿರೇಮಠ ಹತ್ಯೆ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಿದಂತೆ ಅಂಜಲಿ ಹತ್ಯೆ ಪ್ರಕರಣವನ್ನೂ ಕೂಡ ವಹಿಸಲಿದ್ದೇವೆ ಎಂದಿದ್ದರು.
ಮಂಗಳವಾರ ರಾಜ್ಯ ಸರ್ಕಾರ ಆದೇಶ ಹೊರಡಿಸುತ್ತಿದ್ದಂತೆಯೇ ಆಗಮಿಸಿದ ಸಿಐಡಿ ಅಧಿಕಾರಿಗಳು ಹುಬ್ಬಳ್ಳಿಯಲ್ಲಿಯೇ ಮೊಕ್ಕಾಂ ಹೂಡಿದ್ದಾರೆ. ಬುಧವಾರ ಬೆಳಗ್ಗೆಯಿಂದ ತನಿಖೆ ಚುರುಕುಗೊಳಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಅಂಜಲಿ ಅಂಬಿಗೇರ ಪ್ರಕರಣದಲ್ಲಿ ಸ್ಥಳೀಯ ಪೊಲೀಸರು ಈಗಾಗಲೇ ಮಾಹಿತಿ ಸಂಗ್ರಹಿಸಿದ್ದಲ್ಲದೇ ಹಂತಕ ವಿಶ್ವನಾಥ ಅಲಿಯಾಸ್ ಗಿರೀಶ ಸಾವಂತನನ್ನು ದಾವಣಗೆರೆಯಲ್ಲಿ ಬಂಧಿಸಿದ್ದರು. ರಾಜ್ಯ ಸರ್ಕಾರ ಸಿಐಡಿಗೆ ಈ ಪ್ರಕರಣವನ್ನು ವಹಿಸುತ್ತಿದ್ದಂತೆಯೇ ಪೊಲೀಸರು ಸಿಐಡಿ ಅಧಿಕಾರಿಗಳಿಗೆ ಮಾಹಿತಿ ಹಸ್ತಾಂತರ ಮಾಡಲಿದ್ದಾರೆ.
ದಾಖಲೆಗಳ ಸಂಗ್ರಹ: ನೇಹಾ ಹಿರೇಮಠ ಹತ್ಯೆ ಪ್ರಕರಣವನ್ನು ಇದೇ ಸಿಐಡಿ ಎಸ್‌ಪಿ ವೆಂಕಟೇಶ ಅವರ ನೇತೃತ್ವದ ತಂಡ ತನಿಖೆ ಮಾಡುತ್ತಿದೆ. ಪ್ರಕರಣದ ತನಿಖೆಯು ಅಂತಿಮ ಹಂತಕ್ಕೆ ಬಂದಿದೆ. ವಿಧಿವಿಜ್ಞಾನ ಪ್ರಯೋಗಾಲಯ ಸೇರಿದಂತೆ ಕೆಲ ಇಲಾಖೆಗಳ ದಾಖಲೆಗಳ ಸಂಗ್ರಹದಲ್ಲಿ ತೊಡಗಿದೆ ಎನ್ನಲಾಗಿದೆ. ಇವೆಲ್ಲ ದಾಖಲಾತಿಗಳ ಸಂಗ್ರಹದ ಬಳಿಕ ದೋಷಾರೋಪ ಪಟ್ಟಿಯನ್ನು ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿದೆ ಎಂಬುದು ಗೊತ್ತಾಗಿದೆ.