ಕೆರೂರ ಪಟ್ಟಣದ ಮಂಜೂರಾಗಿರುವ ರಸ್ತೆ ಕಾಮಗಾರಿ ಸ್ಥಳವನ್ನು ಪಪಂ ಮುಖ್ಯಾಧಿಕಾರಿ ರಮೇಶ ಮಾಡಬಾಳ ಪರಿಶೀಲಿಸಿದರು. ಪರುಶುರಾಮ ಮಲ್ನಾಡ, ಐ.ಎಂ. ಹೊಸಮನಿ, ಸುರೇಶ ಪುಜಾರಿ, ಹನುಮಂತ ಮತ್ತಿಕಟ್ಟಿ ಇದ್ದಾರೆ. 
ಜಿಲ್ಲೆ

ಕಾಮಗಾರಿ ಪರಿಶೀಲಿಸಿದ ಮುಖ್ಯಾಧಿಕಾರಿ

ವಿನಯ ಆಶೋಕ ನಾಯ್ಕ

ಕೆರೂರ: ಪಟ್ಟಣ ಪಂಚಾಯಿತಿ ವಿವಿಧ ಯೋಜನೆಗಳಡಿ ಹಮ್ಮಿಕೊಂಡಿರುವ ಅಭಿವೃದ್ಧಿ ಕಾಮಗಾರಿಗಳನ್ನು ಪಪಂ ಮುಖ್ಯಾಧಿಕಾರಿ ರಮೇಶ ಮಾಡಬಾಳ ಬುಧವಾರ ಪರಿಶೀಸಿದರು.

ಇತ್ತೀಚೆಗೆ ಭೂಮಿಪೂಜೆ ನೆರವೇರಿಸಲಾಗಿದ್ದ ಜೈ ಭವಾನಿ ಕಾಲನಿಯ ಮುಖ್ಯರಸ್ತೆ ಹಾಗೂ ಹೈಟೆಕ್ ಸಾರ್ವಜನಿಕ ಶೌಚಗೃಹ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ರಸ್ತೆ ಒತ್ತುವರಿ ಮಾಡಿ ನಿರ್ಮಿಸಲಾಗಿರುವ ಕಟ್ಟಡ ತೆರವುಗೊಳಿಸಿ ಗುಣಮಟ್ಟದ ರಸ್ತೆ, ಚರಂಡಿ ನಿರ್ಮಿಸಲು ಕಾಲೋನಿಯ ಜನರು ಸಹಕರಿಸಬೇಕು ಎಂದರು.

ಸ್ಥಳದಲಿದ್ದ ಗುತ್ತಿಗೆದಾರನಿಗೆ ಕಾಮಗಾರಿಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು ಹಾಗೂ ಸಾರ್ವಜನಿಕರಿಗೆ ತೊಂದರೆಯಾಗದಂತೆ ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಬೇಕು. ಪಶು ಆಸ್ಪತ್ರೆ ಆವರಣದ ಮುಂಭಾಗದ ದುರಸ್ತಿ ಕಾರ್ಯ ಪ್ರಾರಂಭಿಸುವಂತೆ ಗುತ್ತಿದಾರನಿಗೆ ಸೂಚಿಸಿದರು.

ಪಟ್ಟಣದ ವಿವಿಧ ವಾರ್ಡ್‌ಗಳಿಗೆ ಭೇಟಿ ನೀಡಿ ರಸ್ತೆ, ಚರಂಡಿ, ಸ್ವಚ್ಛತೆ ಕಾರ್ಯ ಪರಿಶೀಲಿಸಿ, ಬೇಸಿಗೆಯಲ್ಲಿ ಸಾಂಕ್ರಾಮಿಕ ರೋಗಗಳ ಜತೆಗೆ ನೀರಿನ ಅಭಾವ ಕಾಡುತ್ತದೆ. ಈ ಕುರಿತು ಪೌರಕಾರ್ಮಿಕರು ಚರಂಡಿ ಹಾಗೂ ರಸ್ತೆ ಮೇಲಿನ ತಾಜ್ಯ ವಸ್ತುಗಳ ಬಗ್ಗೆ ಹೆಚ್ಚು ಗಮನ ಹರಿಸಬೇಕು ಎಂದರು.

ಪಟ್ಟಣದ 20 ವಾರ್ಡ್‌ಗಳ ಮುಖ್ಯ ರಸ್ತೆ, ಶೌಚಗೃಹ ನಿರ್ಮಾಣ ಹಾಗೂ ಮೂಲಸೌಕರ್ಯಗಳ ಅಭಿವೃದ್ಧಿಗೆ 40 ಕೋಟಿ ರೂ.ಗಳ ವೆಚ್ಚದಲ್ಲಿ ಯೋಜನೆ ಸಿದ್ಧಪಡಿಸಲಾಗಿದ್ದು, ಅನುಮೋದನೆ ಪಡೆದು ಕಾಮಗಾರಿ ಪ್ರಾರಂಭಿಸಲಾಗುವುದು ಎಂದರು.

ಪರುಶುರಾಮ ಮಲ್ನಾಡ, ಇಂಜಿನಿಯರ ಐ.ಎಂ. ಹೊಸಮನಿ, ಸುರೇಶ ಪೂಜಾರಿ, ಹನುಮಂತ ಮತ್ತಿಕಟ್ಟಿ ಮತ್ತಿತರರಿದ್ದರು.