ಸರಗೂರು: ಒಂದು ರಥ ಸಾಗಲು ಎರಡು ಚಕ್ರ ಹೇಗೆ ಮುಖ್ಯವೋ ಹಾಗೆ ಜೀವನದ ರಥ ಸಾಗಬೇಕಾದರೆ ಗಂಡ, ಹೆಂಡತಿ ಎಂಬ ಎರಡು ಚಕ್ರಗಳು ತುಂಬ ಮುಖ್ಯ. ಒಬ್ಬರು ದುಡಿದರೆ ಉತ್ತಮ ಜೀವನ ನಡೆಸಲು ಸಾಧ್ಯವಿಲ್ಲ. ಮಹಿಳೆಯರ ಸಹಕಾರವೂ ಅಗತ್ಯ ಎಂದು ಸ್ನೇಹ ಸ್ತ್ರೀ ಸಮಾಜದ ಅಧ್ಯಕ್ಷೆ ಸುಧಾ ಮೃತ್ಯುಂಜಯಪ್ಪ ತಿಳಿಸಿದರು.
ಪಟ್ಟಣದ ಶಿವರಾತ್ರಿ ಶಿವಾನುಭವ ಮಂದಿರದಲ್ಲಿ ಬುಧವಾರ ಜೆಎಸ್‌ಎಸ್ ಮಹಾವಿದ್ಯಾಪೀಠ, ಜೆಎಸ್‌ಎಸ್ ಜನ ಶಿಕ್ಷಣ ಸಂಸ್ಥೆ, ಸರಗೂರು ಸ್ನೇಹ ಸ್ತ್ರೀ ಸಮಾಜದ ಸಹಯೋಗದಲ್ಲಿ ವೃತ್ತಿ ಕೌಶಲ ತರಬೇತಿ ಪಡೆದವರಿಗೆ ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಳೆದ 33 ವರ್ಷಗಳಿಂದ ಸುತ್ತೂರು ಮಠದ ಶ್ರೀಗಳ ಆಶೀರ್ವಾದದೊಂದಿಗೆ ಜೆಎಸ್‌ಎಸ್ ಜನ ಶಿಕ್ಷಣ ಸಂಸ್ಥೆಯ ಸಹಯೋಗದಲ್ಲಿ ಕಂಪ್ಯೂಟರ್, ಬ್ಯೂಟಿಷಿಯನ್, ಹೊಲಿಗೆ ಹಾಗೂ ಹ್ಯಾಂಡ್ ಎಂಬ್ರಾಯಿಡರಿ ತರಬೇತಿಗಳನ್ನು ನಡೆಸಿಕೊಂಡು ಬರಲಾಗುತ್ತಿದೆ.
ಮಹಿಳೆಯರು ಸಮಾಜದಲ್ಲಿ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗಿದೆ. ಈ ತರಬೇತಿಯ ಸದುಪಯೋಗ ಪಡಿಸಿಕೊಂಡು ನಿಮ್ಮ ಮಕ್ಕಳನ್ನು ಸಮಾಜದ ಆಸ್ತಿಯನ್ನಾಗಿ ಮಾಡಿ ಎಂದು ತಿಳಿಸಿ ಶುಭ ಹಾರೈಸಿದರು.
ದಡದಹಳ್ಳಿ ಪಟ್ಟದ ಮಠದ ಷಡಾಕ್ಷರ ಸ್ವಾಮಿ ಮಾತನಾಡಿ, ಸ್ನೇಹ ಸ್ತ್ರೀ ಸಮಾಜದ ಉದ್ದೇಶಗಳು ಹಾಗೂ ನಿರ್ವಹಿಸುತ್ತಿರುವ ಕಾರ್ಯಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಜೆಎಸ್‌ಎಸ್ ಜನ ಶಿಕ್ಷಣ ಸಂಸ್ಥೆಯ ತರಬೇತಿಗಳನ್ನು ಸದುಪಯೋಗ ಪಡಿಸಿಕೊಂಡು ಎಲ್ಲರೂ ಸ್ವಾವಲಂಬಿ ಜೀವನ ನಡೆಸಬೇಕೆಂದು ತಿಳಿಸಿದರು.
ಅಖಿಲ ಭಾರತ ವೀರಶೈವ ಸಮಾಜದ ಅಧ್ಯಕ್ಷ ವೀರಭದ್ರಪ್ಪ ಮಾತನಾಡಿ ಎರಡೂ ಸಂಸ್ಥೆಗಳ ಸಹಯೋಗದಲ್ಲಿ ನೀಡಿರುವ ತರಬೇತಿಗಳ ಮೂಲಕ ನಿಮ್ಮ ಜೀವನವನ್ನು ಸ್ವಾವಲಂಬಿಯನ್ನಾಗಿ ಮಾಡುವ ಮೂಲಕ ನಮ್ಮ ದೇಶದ ಆರ್ಥಿಕ ಅಭಿವೃದ್ಧಿಗೆ ಕಾರಣರಾಗಬೇಕೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ತರಬೇತಿ ಪಡೆದ ಫಲಾನುಭವಿಗಳಿಗೆ ಪ್ರಮಾಣ ಪತ್ರವನ್ನು ವಿತರಣೆ ಮಾಡಲಾಯಿತು.
ಬಸವ ಬಳಗದ ಅಧ್ಯಕ್ಷ ಹಂಚೀಪುರ ಗಣಪತಿ, ಜೆಎಸ್‌ಎಸ್ ಜನ ಶಿಕ್ಷಣ ಸಂಸ್ಥೆಯ ಕಾರ್ಯಕ್ರಮ ಅಧಿಕಾರಿ ಸೌಭಾಗ್ಯಾ, ಸಹಾಯಕ ಕಾರ್ಯಕ್ರಮಾಧಿಕಾರಿ ಸುರೇಶ್ ಕುಮಾರ್, ವೃತ್ತಿ ಬೋಧಕಿ ಲಕ್ಷ್ಮೀ, ವೇದಾವತಿ, ಗೀತಾ, ಜಯಶ್ರೀ, ರವಿಕುಮಾರ್, ಸ್ನೇಹ ಸ್ತ್ರೀ ಸಮಾಜದ ಮಂಗಳಾ, ಜನಶಿಕ್ಷಣ ಸಂಸ್ಥೆಯ ಸಿಬ್ಬಂದಿ ಇದ್ದರು.