ಜಿಲ್ಲೆ

ನೀರು ಸೋರಿಕೆ ತಡೆಗಟ್ಟುವುದೇ ಸವಾಲು ; ತಲೆಕೆಳಗಾದ ನಗರಸಭೆ ಕ್ರಮಗಳು ; ಅಪಾರ ಪ್ರಮಾಣದ ನೀರು ಪೋಲು

Tumakuru

ತಿಪಟೂರು : ಹೊಸ ಪೈಪ್‌ಲೈನ್ ಅಳವಡಿಕೆಗೆ ಉತ್ಸಾಹ ತೋರುವ ಸ್ಥಳೀಯ ಆಡಳಿತ, ಹಳೆಯ ಪೈಪ್‌ಲೈನ್‌ನಲ್ಲಿ ಎರಡ್ಮೂರು ವರ್ಷಗಳಿಂದ ಉಂಟಾಗುತ್ತಿರುವ ಸೋರಿಕೆ ತಡೆಯಲು ಹೆಣಗಾಡುತ್ತಿದ್ದು, ಸಮಸ್ಯೆ ಪರಿಹಾರಕ್ಕೆ ಕೈಗೊಂಡ ಕ್ರಮಗಳೆಲ್ಲ ತಲೆಕೆಳಗಾಗಿವೆ.

ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ, ಹಳೇಪಾಳ್ಯ. ಬಸ್ ಡಿಪೋ, ಎಪಿಎಂಸಿ, ತರಕಾರಿ ಮಾರುಕಟ್ಟೆಗೆ ಸಂಪರ್ಕ ಕಲ್ಪಿಸುವ ರಸ್ತೆ ಮಧ್ಯೆ ಹಾದು ಹೋಗಿರುವ ಕುಡಿಯುವ ನೀರಿನ ಪೈಪ್ ಹಳೆಯದಾಗಿದೆ. 2-3 ವರ್ಷಗಳಿಂದ ಅಪಾರ ಪ್ರಮಾಣದ ನೀರು ಪೋಲಾಗುವ ಜತೆಗೆ ಇದರಿಂದ ನಿರ್ಮಾಣವಾಗಿರುವ ಗುಂಡಿಯಲ್ಲಿ ವಾಹನ ಸವಾರರು ಬಿದ್ದು, ಕೈ, ಕಾಲು ಮುರಿದುಕೊಂಡ ಪ್ರಕರಣಗಳು ಸಾಕಷ್ಟಿವೆ.

ಹಳೆಯ ಪೈಪುಗಳ ಅಳತೆಯಲ್ಲಿ ವ್ಯತ್ಯಾಸವಾಗಿರುವುದರಿಂದ ಜಾಯಿಂಟ್ ಮಾಡಿದರೂ ಸೋರಿಕೆ ನಿಲ್ಲುತ್ತಿಲ್ಲ, ಹೊಸದಾಗಿ ಪೈಪ್‌ಲೈನ್ ಮಾಡುವುದೇ ಸೂಕ್ತ ಎಂದು ಅಧಿಕಾರಿಗಳು ಹೇಳುತ್ತಾರೆ. ಕಾಲರ್ ಅಳವಡಿಸಿ, ಸಿಮೆಂಟ್ ಕಾಂಕ್ರೀಟ್ ಹಾಕಲಾಗಿದೆ. ಇದು ಸೆಟ್ ಆಗಲು 10-15 ದಿನಬೇಕು, ನಂತರ ಸೋರಿಕೆ ಉಂಟಾಗುವುದಿಲ್ಲ ಎಂದು ಆಯುಕ್ತ ಉಮಾಕಾಂತ್ 2 ತಿಂಗಳ ಹಿಂದೆ ನೀಡಿದ ಭರವಸೆ ಹುಸಿಯಾಗಿದೆ. ಈ ಬಾರಿ ನನ್ನ ಉಸ್ತುವಾರಿಯಲ್ಲಿ ದುರಸ್ತಿ ನಡೆಯುತ್ತಿದೆ. ಇನ್ನು ಮುಂದೆ ಸೋರಿಕೆಯ ಮಾತೇ ಇಲ್ಲ ಎಂದು ಬಡಾಯಿ ಕೊಚ್ಚಿಕೊಂಡ ಮೇಸ್ತ್ರಿಗಳು ಈಗ ನಿರುತ್ತರರಾಗಿದ್ದಾರೆ.

ಸಂಬಂಧಪಟ್ಟವರು ತುರ್ತು ಗಮನಹರಿಸಿ ಸೋರಿಕೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಜತೆಗೆ ರಸ್ತೆ ಮಧ್ಯೆ ನಿರ್ಮಾಣವಾಗಿರುವ ಗುಂಡಿಗೆ ಮುಕ್ತಿ ಕಾಣಿಸಬೇಕಿದೆ. ಜತೆಗೆ ಗುಂಡಿ ದುರಸ್ತಿ ಕೈಗೊಳ್ಳುವವರೆಗೂ ಕನಿಷ್ಠ ಬ್ಯಾರಿಕೇಡ್ ಇಟ್ಟು ಅಪಘಾತ ನಿಯಂತ್ರಿಸಲು ಮುಂದಾಗಬೇಕಿದೆ.

ಇದೇ ರಸ್ತೆಯಲ್ಲಿರುವ ಆರ್‌ಟಿಒ ಕಚೇರಿಗೆ ಡಿಎಲ್ ಟೆಸ್ಟ್ ಡ್ರೈವ್ ಕೊಡಲು ಬರುವ ಅನೇಕರು ಕಚೇರಿ ತಲುಪುವ ಮುಂಚೆಯೇ ಇಲ್ಲಿ ಬಿದ್ದು ಹೋಗುತ್ತಿರುವ ದೃಶ್ಯ ಸಾಮಾನ್ಯವಾಗಿದೆ. ಇನ್ನಾದರೂ ಸಮಸ್ಯೆಗೊಂದು ಪರಿಹಾರ ಹುಡುಕಲಿ. ಡಾ.ನಟರಾಜು, ತಿಪಟೂರು ಸದ್ಯದಲ್ಲೇ ಕುಡಿಯುವ ನೀರಿನ ಪೈಪ್‌ಲೈನ್ ಕಾಮಗಾರಿ ನಡೆಯಲಿದ್ದು, ಹಳೇ ಪೈಪ್‌ಲೈನ್ ಇದಕ್ಕೆ ಜೋಡಣೆ ಮಾಡಲಾಗುವುದು. ಮುಂದಿನ ದಿನಗಳಲ್ಲಿ ಸಮಸ್ಯೆ ಇರಲ್ಲ. ನೀರು ಸರಬರಾಜು ವಿಭಾಗದ ಅಧಿಕಾರಿ, ನಗರಸಭೆ ನೀರು ಸೋರಿಕೆ ತಡೆಗಟ್ಟುವ ನಿಟ್ಟಿನಲ್ಲಿ ಕ್ರಮ ವಹಿಸಲಾಗುತ್ತಿದೆ. ಹಳೇ ಪೈಪ್‌ಲೈನ್‌ಗೆ ಅಗತ್ಯ ಬಿಡಿ ಭಾಗಗಳು ಸಿಗುತ್ತಿಲ್ಲ, ಒಂದು ಕಡೆ ಮುಚ್ಚಿದರೆ ಇನ್ನೊಂದು ಕಡೆ ಸೋರಿಕೆ ಆಗುತ್ತದೆ. ಶ್ರೀ ಸಮಸ್ಯೆ ಬಗೆಹರಿಸಲಾಗುವುದು. ಉಮಾಕಾಂತ್, ಆಯುಕ್ತರು ನಗರಸಭೆ