ಗುಂಡ್ಲುಪೇಟೆ: ಮೂರು ವಾರಗಳಿಂದ ನಿರಂತರವಾಗಿ ಬೀಳುತ್ತಿರುವ ಮಳೆಯಿಂದ ಜಾನುವಾರುಗಳ ಮೇವಿಗೆ ತೊಂದರೆಯಾಗಿದ್ದು, ರಾಸುಗಳಿಗೆ ಆಹಾರ ಪೂರೈಸುವುದು ಹೈನುಗಾರರಿಗೆ ಭಾರಿ ಸವಾಲಾಗಿ ಪರಿಣಮಿಸಿದೆ.
ರೈತರು ಜೀವನೋಪಾಯಕ್ಕೆ ಹೈನುಗಾರಿಕೆಯನ್ನೇ ಅವಲಂಬಿಸಿದ್ದಾರೆ. ಮಹಿಳಾ ಸ್ವಸಹಾಯ ಸಂಘಗಳು ಹಾಗೂ ಬ್ಯಾಂಕ್‌ಗಳಲ್ಲಿ ಸಾಲ ಪಡೆದು ಹಸುಗಳನ್ನು ಖರಿದಿಸಿ ಹಾಲು ಉತ್ಪಾದನೆ ಮಾಡಿ ಡೇರಿಗಳಿಗೆ ಮಾರಾಟ ಮಾಡುವ ಮೂಲಕ ಜೀವನ ನಿರ್ವಹಣೆ ಮಾಡುತ್ತಿದ್ದಾರೆ. ಆದರೆ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ರೈತರು ತಮ್ಮ ಜಾನುವಾರುಗಳನ್ನು ಹೊರಗೆ ಬಿಡಲು ಸಾಧ್ಯವಾಗದಂತಾಗಿದ್ದು, ಕೊಟ್ಟಿಗೆಯಲ್ಲಿ ಕಟ್ಟಿಹಾಕಿ ಮೇವು ನೀಡಬೇಕಾದ ಅನಿವಾರ್ಯತೆ ಎದುರಾಗಿದೆ. ಕಳೆದ ವರ್ಷ ಮಳೆ ಬೀಳದೆ ಎಲ್ಲ ಬೆಳೆಗಳೂ ಹಾಳಾಗಿದ್ದರಿಂದ ರಾಸುಗಳಿಗೆ ಒಣಮೇವು ಸಂಗ್ರಹವಿಲ್ಲದಂತಾಗಿ, ಹೈನುಗಾರರ ಸಂಕಷ್ಟ ಹೆಚ್ಚಿಸಿದೆ.
ರೈತರ ಜಮೀನುಗಳಲ್ಲಿ ಸಾಕಷ್ಟು ಮೇವಿದ್ದರೂ ಅದನ್ನು ತರಲು ಮಳೆ ಅವಕಾಶ ನೀಡುತ್ತಿಲ್ಲ. ಅಲ್ಲದೆ ರಾಸುಗಳನ್ನು ಜಮೀನುಗಳಿಗೆ ಮೇಯಲು ಬಿಟ್ಟರೆ ಬೆಳೆಗಳು ಹಾನಿಯಾಗುತ್ತಿವೆ. ಇದರಿಂದ ಬಯಲು ಹಾಗೂ ಗೋಮಾಳಗಳಲ್ಲಿ ಮೇಯಲು ಹೋಗುವ ರಾಸುಗಳು ಹಸಿ ಮೇವನ್ನೇ ತಿನ್ನುತ್ತಿರುವ ಪರಿಣಾಮ ಭೇದಿಯಿಂದ ಬಳಲುತ್ತಿವೆ. ಇದರಿಂದಾಗಿ ಹಾಲು ಕೊಡುವ ತಮ್ಮ ರಾಸುಗಳಿಗೆ ಮೇವು ಪೂರೈಸುವುದು ಹೈನುಗಾರರು ಭಾರಿ ಸವಾಲಾಗಿ ಪರಿಣಮಿಸಿದೆ. ಮಳೆ ಯಾವಾಗ ನಿಲ್ಲುತ್ತದೋ ಎಂದು ಕಾತರದಿಂದ ಕಾಯುವಂತಾಗಿದೆ.
ಕಳೆದ ವರ್ಷ ಮಳೆ ಕೊರತೆಯಿಂದ ಜಾನುವಾರುಗಳ ಮೇವಿಗೆ ಆಧಾರವಾಗುತ್ತಿದ್ದ ಜೋಳ, ಮುಸುಕಿನಜೋಳ, ನೆಲಗಡಲೆ, ಹುರುಳಿ ಹಾಗೂ ರಾಗಿ ಮುಂತಾದ ಯಾವುದೇ ಬೆಳೆಗಳನ್ನು ಬೆಳೆಯಲಾಗದಂತಾಗಿತ್ತು. ಇದರಿಂದ ಈ ಬಾರಿ ಯಾವ ರೈತರ ಬಳಿಯೂ ಒಣಮೇವಿನ ಸಂಗ್ರಹ ಇಲ್ಲವಾಗಿದ್ದು ಹಸಿಮೇವನ್ನೇ ನೀಡಬೇಕಾಗಿದೆ.
ಎಡಬಿಡದೆ ಸುರಿಯುತ್ತಿರುವ ಮಳೆಯಿಂದ ಜಾನುವಾರುಗಳಿಗೆ ಮೇವಿನ ಪೂರೈಕೆಗೆ ತೊಂದರೆಯಾಗುತ್ತಿದೆ. ಜಮೀನುಗಳಲ್ಲಿ ಮೇವಿದ್ದರೂ ಅದನ್ನು ಕಿತ್ತು ತರಲು ಅವಕಾಶವಾಗುತ್ತಿಲ್ಲ. ಜಾನುವಾರುಗಳು ಓಡಾಡಿದರೆ ಬೆಳೆ ನಾಶವಾಗುವ ಭೀತಿಯಿದೆ. ಆದ್ದರಿಂದ ಗೋಮಾಳಗಳಲ್ಲಿಯೇ ಮೇಯಿಸಬೇಕಾಗಿದೆ. ಹಾಲು ಕೊಡುವ ಹಸುಗಳಿಗೆ ಒಣಮೇವು ನೀಡಬೇಕಾಗಿದ್ದರೂ ಎಲ್ಲಿಯೂ ಸಿಗುತ್ತಿಲ್ಲ. ಇದರಿಂದ ಹಾಲು ಉತ್ಪಾದನೆಯಲ್ಲಿಯೂ ಇಳಿಮುಖವಾಗುತ್ತಿದೆ. ಹಸಿ ಮೇವು ತಿನ್ನುವ ರಾಸುಗಳಿಗೂ ಭೇದಿಯಾಗುತ್ತಿದ್ದು ಇವುಗಳ ಆರೈಕೆ ಮಾಡುವುದೇ ಕಷ್ಟವಾಗಿದೆ.
ಸುರೇಶ್, ರೈತ, ರಂಗೂಪುರ ಗ್ರಾಮ
ಪ್ರತಿ ಬಾರಿ ಮಳೆ ಬಿದ್ದಾಗಲೂ ಹಸಿರು ಚಿಗುರಿನೊಂದಿಗೆ ಹುಳು ಹಾಗೂ ಕ್ರಿಮಿಕೀಟಗಳು ಮೊಟ್ಟೆ ಹಾಕುವುದರಿಂದ ಅಂತಹ ಹುಲ್ಲು ತಿನ್ನುವ ರಾಸುಗಳಿಗೆ ಭೇದಿಯಾಗುತ್ತದೆ. ಅಂತಹ ರಾಸುಗಳಿಗೆ ಕ್ರಿಮಿನಾಶಕ ಔಷಧ ನೀಡಲಾಗುತ್ತಿದೆ. ತಾಲೂಕಿನಲ್ಲಿ ಸುಮಾರು 20 ರಿಂದ 21 ಸಾವಿರ ಹಾಲು ಕೊಡುವ ಹಸುಗಳಿದ್ದು ಗುಣಮಟ್ಟದ ಹಾಲು ಉತ್ಪಾದನೆಗೆಗೆ ಒಣಮೇವನ್ನೂ ನೀಡಬೇಕಾಗಿದೆ.
ಡಾ.ಮೋಹನ್‌ಕುಮಾರ್ ಸಹಾಯಕ ನಿರ್ದೇಶಕ, ಪಶುಪಾಲನಾ ಇಲಾಖೆ