ಗಂಗಾವತಿ ಸಿಪಿಐ(ಎಂ) ತಾಲೂಕು ಸಮಿತಿ ಕಚೇರಿಯಲ್ಲಿ ಮಹಾಅಧಿವೇಶನದ ನಿಮಿತ್ತ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಪೂರ್ವಭಾವಿ ಸಭೆಯಲ್ಲಿ ಮಹಾ ಅಧಿವೇಶನದಲ್ಲಿ ಚರ್ಚಿಸುವ ಕುರಿತಾದ ವಿಮರ್ಶಾ ವರದಿಯ ಕಿರುಹೊತ್ತಿಗೆಯನ್ನು ಪಕ್ಷದ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಚಂದ್ರಪ್ಪ ಹೊಸ್ಕೇರಾ ಬಿಡುಗಡೆಗೊಳಿಸಿದರು. ಜಿಲ್ಲಾ ಕಾರ್ಯದರ್ಶಿ ನಿರುಪಾದಿ ಬೆಣಕಲ್, ಪದಾಧಿಕಾರಿಗಳಾದ ಕೆ.ಹುಸೇನಪ್ಪ, ಬಾಳಪ್ಪ ಹುಲಿಹೈದರ್, ಸುಂಕಪ್ಪಗದಗ್ ಇತರರಿದ್ದರು. 
ಜಿಲ್ಲೆ

ಕೇಂದ್ರ ಸರ್ಕಾರ ಸರ್ವಾಧಿಕಾರ ಧೋರಣೆ ಕೈಬಿಡಲಿ

ರುದ್ರಪ್ಪ ವಾಲಿ

ಗಂಗಾವತಿ: ರೈತರು ಮತ್ತು ಕೃಷಿ ಕೂಲಿಕಾರ್ಮಿಕರ ಸಮಸ್ಯೆಗಳ ಬಗ್ಗೆ ಮಹಾ ಅಧಿವೇಶನದಲ್ಲಿ ಚರ್ಚಿಸಲಾಗುತ್ತಿದ್ದು, ಸ್ಥಳೀಯ ಸಮಸ್ಯೆಗಳನ್ನು ಗಮನಸೆಳೆಯಲಾಗುವುದು ಎಂದು ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಚಂದ್ರಪ್ಪ ಹೊಸ್ಕೇರಾ ಹೇಳಿದರು.

ನಗರದ ಸಿಪಿಐ(ಎಂ) ತಾಲೂಕು ಸಮಿತಿ ಕಚೇರಿಯಲ್ಲಿ ಮಹಾ ಅಧಿವೇಶನದ ನಿಮಿತ್ತ ಮಂಗಳವಾರ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

ನರೇಂದ್ರ ಮೋದಿ ಸರ್ಕಾರ, ಸರ್ವಾಧಿಕಾರ ಧೋರಣೆ ಅನುಸರಿಸುತ್ತಿದೆ. ಪ್ರಾದೇಶಿಕ ಪಕ್ಷಗಳ ನಾಶದ ಜತೆಗೆ ಒಂದೇ ಭಾಷೆ, ಒಂದೇ ಧರ್ಮದ ಗುರಿಯಾಗಿಟ್ಟುಕೊಂಡಿದೆ. ಐಎನ್‌ಡಿಐಎ ಒಕ್ಕೂಟ ರಚನೆಯಿಂದ ಮೋದಿ ಸರ್ಕಾರಕ್ಕೆ ಬಲವಾದ ಪೆಟ್ಟು ಬಿದ್ದಿದೆ. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕಿದ್ದು, ದುಡಿವ ವರ್ಗದ ಜನರಿಗೆ ರಾಜಕೀಯ ತಿಳಿವಳಿಕೆ ನೀಡಬೇಕಿದೆ ಎಂದರು.

ಜಿಲ್ಲಾ ಕಾರ್ಯದರ್ಶಿ ನಿರುಪಾದಿ ಬೆಣಕಲ್ ಮಾತನಾಡಿ, ಹಿಂದುತ್ವದ ಹೆಸರಿನಲ್ಲಿ ಕೇಂದ್ರ ಸರ್ಕಾರ ರಾಜಕೀಯ ಮಾಡುತ್ತಿದ್ದು, ಒಂದು ರಾಷ್ಟ್ರ, ಒಂದು ಚುನಾವಣೆ ಪರಿಕಲ್ಪನೆ ದುರುದ್ದೇಶದಿಂದ ಕೂಡಿದೆ ಎಂದರು. ಮಹಾಅಧಿವೇಶನದಲ್ಲಿ ಚರ್ಚಿಸುವ ಕುರಿತಾದ ವಿಮರ್ಶಾ ವರದಿಯ ಕಿರುಹೊತ್ತಿಗೆಯನ್ನು ಬಿಡುಗಡೆಗೊಳಿಸಲಾಯಿತು.