ಕೇಂದ್ರ ಸರ್ಕಾರ ಕರ್ನಾಟಕದ ಬಡ ಜನತೆಗೆ ನೀಡಬೇಕಾಗಿರುವ ಅನ್ನವನ್ನು ಕಸಿಯುತ್ತಿದೆ, ಅಕ್ಕಿ ಕದನ ಆರಂಭಿಸಿರುವ ಬಿಜೆಪಿ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿ ಮೈಸೂರು ನಗರ ಮತ್ತು ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ವತಿಯಿಂದ ಪ್ರತಿಭಟನಾ ಧರಣಿ ನಡೆಯಿತು.
ಗಾಂಧಿ ವೃತ್ತದಲ್ಲಿ ಸಮಾವೇಶಗೊಂಡ ಕಾಂಗ್ರೆಸ್ ಕಾರ್ಯಕರ್ತರು, ಕೇಂದ್ರ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಧಿಕ್ಕಾರ ಕೂಗಿದರು. ರಾಜ್ಯದ ಪಾಲು ನೀಡುವಂತೆ ಆಗ್ರಹಿಸಿ, ದ್ವೇಷದ ರಾಜಕಾರಣ ನಿಲ್ಲಿಸುವಂತೆ ಒತ್ತಾಯಿಸಿದರು.
ಶಾಸಕ ದರ್ಶನ್ ಧ್ರುವನಾರಾಯಣ ಮಾತನಾಡಿ, 10 ಕೆಜಿ ಅಕ್ಕಿ ವಿತರಿಸುವ ಗ್ಯಾರಂಟಿ ಯೋಜನೆ ಪ್ರಕಟಿಸಿದ ಮರು ದಿನವೇ ಕೇಂದ್ರ ಸರ್ಕಾರ ಈಶಾನ್ಯ ರಾಜ್ಯಗಳನ್ನು ಹೊರತುಪಡಿಸಿ ಅಕ್ಕಿ, ಗೋಧಿ ಸರಬರಾಜು ಮಾಡಲಾಗುತ್ತಿಲ್ಲ ಎಂದು ಆದೇಶ ಹೊರಡಿಸಿದೆ. ಇದು ರಾಜ್ಯದ ಮೇಲಿನ ದ್ವೇಷ ರಾಜಕಾರಣಕ್ಕೆ ನಿದರ್ಶನ ಎಂದರು.
ಸರ್ಕಾರದ ಗ್ಯಾರಂಟಿ ಯೋಜನೆಗಳಿಗೆ ತೊಂದರೆ ಕೊಡುತ್ತಿದೆ. ಆದರೆ, ಗ್ಯಾರಂಟಿ ಅನುಷ್ಠಾನದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಅಕ್ಕಿ ಸಹಿತವಾಗಿ ಎಲ್ಲ ಗ್ಯಾರಂಟಿಗಳನ್ನು ನೀಡಲು ರಾಜ್ಯ ಸರ್ಕಾರ ಬದ್ಧವಾಗಿದೆ. ಕರ್ನಾಟಕ ಮತ್ತು ಕನ್ನಡಿಗರ ಮೇಲಿನ ಕೇಂದ್ರ ಸರ್ಕಾರದ ದ್ವೇಷ ರಾಜಕಾರಣವನ್ನು ಖಂಡಿಸುತ್ತೇನೆ ಎಂದರು.
ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಮಾತನಾಡಿ, 5 ಗ್ಯಾರಂಟಿಗಳ ಬಗ್ಗೆ ಜನಸಾಮಾನ್ಯರ ಅಭಿಪ್ರಾಯ ಆಲಿಸಬೇಕು. ಬಸ್ ನಿಲ್ದಾಣಗಳಲ್ಲಿ ಮಹಿಳೆಯರ ಸಂಭ್ರಮವನ್ನು ನೋಡಬೇಕು. ಈ ಪ್ರತಿಕ್ರಿಯೆಯನ್ನು ಬಿಜೆಪಿ ನಾಯಕರು ತಡೆದುಕೊಳ್ಳಲು ಆಗದೆ ಮೈ ಮೇಲೆ ಚೇಳು ಬಿಟ್ಟುಕೊಂಡವರಂತೆ ಒದ್ದಾಡುತ್ತಿದ್ದಾರೆ ಎಂದು ಕುಟುಕಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯ್‌ಕುಮಾರ್ ಮಾತನಾಡಿ, ಉಚಿತ ಬಸ್ ಪ್ರಯಾಣ, ಗೃಹಜ್ಯೋತಿ, ಯುವನಿಧಿ ಯೋಜನೆಗಳ ಕುರಿತಂತೆ ಆರ್‌ಎಸ್‌ಎಸ್, ಒಂದು ಜಾತಿ ಜನರಲ್ಲಿ ಕೆಟ್ಟ ಅಭಿಪ್ರಾಯವನ್ನು ರೂಪಿಸಲು ನಿರತವಾಗಿದೆ. ಕಾಂಗ್ರೆಸ್ ಮುಖಂಡರು ತಮ್ಮ ಸರ್ಕಾರಕ್ಕೆ ನೈತಿಕ ಬೆಂಬಲ ಕೊಡದಿದ್ದರೆ ಕೆಟ್ಟ ಹೆಸರು ಬರಲಿದೆ ಎಂದರು.
ನಗರ ಕಾಂಗ್ರೆಸ್ ಅಧ್ಯಕ್ಷ ಆರ್.ಮೂರ್ತಿ, ಮಾಜಿ ಶಾಸಕ ಎಂ.ಕೆ.ಸೋಮಶೇಖರ್, ಕೆಪಿಸಿಸಿ ವಕ್ತಾರ ಎಚ್.ಎ.ವೆಂಕಟೇಶ್, ಮುಡಾ ಮಾಜಿ ಅಧ್ಯಕ್ಷ ಸಿ.ಬಸವೇಗೌಡ, ಮಾಜಿ ಮೇಯರ್‌ಗಳಾದ ಪುರುಷೋತ್ತಮ್, ಟಿ.ಬಿ.ಚಿಕ್ಕಣ್ಣ, ಪುಷ್ಪಲತಾ ಚಿಕ್ಕಣ್ಣ, ನಾರಾಯಣ, ರಾಜೇಶ್ವರಿ, ಮೋದಾಮಣಿ, ಮುಖಂಡರಾದ ಬಿ.ಎಂ.ರಾಮು, ಮಂಜುಳಾ ಮಾನಸ, ಈಶ್ವರ್ ಚಕ್ಕಡಿ, ಗಿರೀಶ್ ಇತರರಿದ್ದರು.