ಲಕ್ಷೆ್ಮೕಶ್ವರ: ನರೇಂದ್ರ ಮೋದಿ ನೇತೃತ್ವದ ಸರ್ಕಾರ ಸುಭದ್ರವಾಗಿದ್ದು, ಉತ್ತಮ ಆಡಳಿತ ನೀಡುತ್ತಿದೆ. ಕೇಂದ್ರ ಸರ್ಕಾರದ ಎಲ್ಲ ನಿರ್ಣಯಗಳು ತ್ವರಿತಗತಿಯಲ್ಲಿ ನಡೆಯುತ್ತಿವೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅವರು ಇನ್ನು ಕೆಲವೇ ದಿನಗಳಲ್ಲಿ ಕೇಂದ್ರ ಸರ್ಕಾರ ಪತನವಾಗುತ್ತದೆ ಎಂದಿರುವ ಇಂಧನ ಸಚಿವ ಕೆ.ಜೆ. ಜಾರ್ಜ್ ಹೇಳಿಕೆ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿ, ಮೊದಲು ತಮ್ಮ ಪಕ್ಷದಲ್ಲಿ ಏನಾಗುತ್ತಿದೆ ಎನ್ನುವುದನ್ನು ನೋಡಿಕೊಳ್ಳಲಿ, ಆಮೇಲೆ ಕೇಂದ್ರ ಸರ್ಕಾರದ ಬಗ್ಗೆ ಮಾತನಾಡಲಿ ಎಂದು ಲೇವಡಿ ಮಾಡಿದರು.
ಮುಡಾ ಹಗರಣ ಕುರಿತು ರಾಜ್ಯಪಾಲರು ಸಂವಿಧಾನಬದ್ಧವಾಗಿ ಪ್ರಾಸಿಕ್ಯೂಷನ್ಗೆ ಅನುಮತಿ ಕೊಟ್ಟಿದ್ದಾರೆ. ಆದರೆ, ಅದನ್ನು ಟೀಕೆ ಮಾಡುತ್ತಿರುವ ಕಾಂಗ್ರೆಸ್ನವರು ತನಿಖೆ ಮಾಡಬಾರದು ಎಂದು ಹೇಳುವುದು ಹಾಸ್ಯಾಸ್ಪದ. ಕಾಂಗ್ರೆಸ್ನವರು ಪ್ರತಿಭಟನೆ ಮಾಡುತ್ತಿರುವುದು ಜನರ ಗಮನ ಬೇರೆಡೆ ಸೆಳೆಯಲು ಎಂದು ಆರೋಪಿಸಿದರು.
ಲೋಕಸಭಾ ಚುನಾವಣೆಯಲ್ಲಿ ನಿಮ್ಮ ಹಾಗೂ ಫಕೀರ ದಿಂಗಾಲೇಶ್ವರ ಶ್ರೀಗಳ ನಡುವೆ ವೈಮನಸಿನ ಬಗ್ಗೆ ಸುದ್ದಿಗಾರರು ಕೇಳಿದಾಗ, ಶ್ರೀಮಠದಲ್ಲಿ ಹಿರಿಯ ಫಕೀರ ಸಿದ್ಧರಾಮ ಶ್ರೀಗಳು ಇದ್ದಾರೆ. ಮೊದಲೆಲ್ಲ ಮಠಕ್ಕೆ ಬಂದು ಹೋಗುತ್ತಿದ್ದೇವು. ಅದರಂತೆ ಶ್ರೀಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆಯಲು ಬಂದಿದ್ದೇನೆ ಎಂದರು.
ಶಾಸಕ ಡಾ. ಚಂದ್ರು ಲಮಾಣಿ, ಎಂ.ಆರ್. ಪಾಟೀಲ, ರವಿ ದಂಡಿನ, ನಾಗರಾಜ ಛಬ್ಬಿ, ಶರಣು ಅಂಗಡಿ, ಶಿರಹಟ್ಟಿ ಮಂಡಳ ಬಿಜೆಪಿ ಅಧ್ಯಕ್ಷ ಸುನೀಲ ಮಹಾಂತಶೆಟ್ಟರ, ನಗರ ಘಟಕದ ಅಧ್ಯಕ್ಷ ನವೀನ ಬೆಳ್ಳಟ್ಟಿ, ಬಸವರಾಜ ಪಲ್ಲೇದ, ಬಸವರಾಜ ಚಕ್ರಸಾಲಿ, ನೀಲಪ್ಪ ಹತ್ತಿ, ಸೋಮೇಶ ಉಪನಾಳ, ಅನೀಲ ಮುಳುಗುಂದ, ಸಂತೋಷ ಜಾವೂರ, ಪ್ರಕಾಶ ಮಾದನೂರ, ಗಿರೀಶ ಚೌರಡ್ಡಿ, ಇತರರಿದ್ದರು.