ಮೈಸೂರು: ಅನ್ನಭಾಗ್ಯ ಯೋಜನೆಗೆ ಅಕ್ಕಿ ನೀಡುವ ವಿಚಾರದಲ್ಲಿ ಕೇಂದ್ರ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ಶಾಸಕ ಕೆ.ಹರೀಶ್ ಗೌಡ ಅಸಮಾಧಾನ ವ್ಯಕ್ತಪಡಿಸಿದರು.
ನಗರದಲ್ಲಿ ಗುರುವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಭಾರತೀಯ ಅಹಾರ ನಿಗಮ (ಎಫ್‌ಸಿಐ) ರಾಜ್ಯಕ್ಕೆ ಅಕ್ಕಿ ಪೂರೈಕೆ ಮಾಡುವ ಭರವಸೆ ನೀಡಿತ್ತು. ಆದರೆ, ಕೇಂದ್ರ ಸರ್ಕಾರ ಅಕ್ಕಿ ನೀಡುವುದನ್ನು ತಪ್ಪಿಸಿದೆ. ಕೇಂದ್ರ ನಮಗೆ ಉಚಿತವಾಗಿ ಅಕ್ಕಿ ನೀಡುವುದಿಲ್ಲ. ಅಕ್ಕಿಗೆ ನಿಗದಿ ಪಡಿಸಿದ ದರವನ್ನು ರಾಜ್ಯ ಸರ್ಕಾರ ನೀಡುತ್ತದೆ. ಹೀಗಿದ್ದರೂ ಕೇಂದ್ರ ಅಕ್ಕಿ ನೀಡದೆ ಧ್ವೇಷದ ರಾಜಕಾರಣ ಮಾಡುತ್ತಿರುವುದು ಸರಿಯಲ್ಲ. ಇದು ರಾಜ್ಯದ ಬಡ ವರ್ಗದವರಿಗೆ ಕೇಂದ್ರ ಸರ್ಕಾರ ಮಾಡುತ್ತಿರುವ ಅನ್ಯಾಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಅವರು ಸುಮ್ಮನೆ ಭಾರತ ಮಾತಾ ಕೀ ಜೈ ಎನ್ನುತ್ತಾರೆ. ಅವರಿಗೆ ದೇಶದ ಬಗ್ಗೆ ಪ್ರೀತಿ ಇಲ್ಲ. ಒಂದುವೇಳೆ ಪ್ರೀತಿ ಇದ್ದಿದ್ದರೆ ಅವರು ಎಲ್‌ಐಸಿ ಸೇರಿದಂತೆ ವಿವಿಧ ಸಾರ್ವಜನಿಕ ವಲಯದ ಕಂಪನಿಗಳನ್ನು ಖಾಸಗೀಕರಣ ಮಾಡುತ್ತಿರಲಿಲ್ಲ. ಸಾರ್ವಜನಿಕ ವಲಯದಲ್ಲಿ ಉತ್ತಮವಾಗಿ ಮುನ್ನಡೆಯುತ್ತಿರುವ ಕಂಪನಿಗಳು ಕೇಂದ್ರ ಸರ್ಕಾರ ಮಾರಾಟ ಮಾಡುತ್ತಿದ್ದು, ಹೀಗೆ ಮುಂದುವರೆದರೆ ದೇಶವನ್ನೂ ಮಾರಿ ಬಿಡುತ್ತಾರೆ ಎಂದು ವ್ಯಂಗ್ಯವಾಡಿದರು.
ಮಹಾರಾಣಿ ವಿಜ್ಞಾನ ಕಾಲೇಜು ಪ್ರಯೋಗಾಲಯ ಕಟ್ಟಡ ವರ್ಷ ಕಳೆದು ಹೋಗಿದೆ. ಆದರೆ, ದುರಸ್ತಿಗೆ ಹಿಂದಿನ ಬಿಜೆಪಿ ಸರ್ಕಾರ ಅನುದಾನ ಬಿಡುಗಡೆ ಮಾಡಲಿಲ್ಲ. ಕಟ್ಟಡ ದುರಸ್ತಿಗೆ ಸಂಬಂಧಿಸಿದಂತೆ ಅನುದಾನ ಬಿಡುಗಡೆಗೆ ರಾಜ್ಯ ಸರ್ಕಾರದೊಂದಿಗೆ ಮಾತುಕತೆ ನಡೆಸಲಾಗುವುದು ಎಂದರು.
ನಗರದಲ್ಲಿ ಪೇ ಆ್ಯಂಡ್ ಪಾರ್ಕ್ ವ್ಯವಸ್ಥೆ ಜಾರಿಗೆ ನನ್ನ ವಿರೋಧವಿದೆ. ನಗರ ಪಾಲಿಕೆ ಈಗ ಗುರುತಿಸಿರುವ ರಸ್ತೆಗಳಲ್ಲಿ ಪ್ರವಾಸಿಗರು ಬಂದು ದಿನನಿತ್ಯ ವಾಹನ ನಿಲ್ಲಿಸುವುದಿಲ್ಲ. ಅಲ್ಲಿ ವಾಹನ ನಿಲ್ಲಿಸುವವರು ಸ್ಥಳೀಯರು, ಬಡ ಹಾಗೂ ಮಧ್ಯಮ ವರ್ಗದವರು. ಹಾಗಾಗಿ ಶುಲ್ಕ ವಿಧಿಸುವುದಕ್ಕೆ ನನ್ನ ವಿರೋಧವಿದೆ. ಈ ಕುರಿತು ನಗರ ಪಾಲಿಕೆ ಆಯುಕ್ತರು ಮತ್ತು ಮೇಯರ್‌ಗೆ ಪತ್ರ ಬರೆಯಲಾಗುವುದು ಎಂದರು.