ಮೈಸೂರು: ಕೇಂದ್ರ ಬಜೆಟ್ ಪೂರ್ವ ಸಭೆಯಲ್ಲಿ ನಾವಿಟ್ಟ ಬೇಡಿಕೆಗಳಲ್ಲಿ ಒಂದನ್ನೂ ಈಡೇರಿಸಿಲ್ಲ, ರಾಜ್ಯದ ಜನರಿಗೆ ಚೊಂಬು ಕೊಡುವ ಅಭಿಯಾನವನ್ನು ಕೇಂದ್ರ ಮುಂದುವರೆಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದರು.
ದೆಹಲಿಯಲ್ಲೇ ರೈತರ ಪ್ರತಿಭಟನೆ ನಡೆಯುತ್ತಿದ್ದರೂ ಬಜೆಟ್‌ನಲ್ಲಿ ಎಂಎಸ್‌ಪಿ ಬಗ್ಗೆ ಉಸಿರೇ ಬಿಟ್ಟಿಲ್ಲ. ರಾಜ್ಯವನ್ನು ಪ್ರತಿನಿಧಿಸುವ ಕೇಂದ್ರದ ಸಚಿವರಲ್ಲಿ ಒಬ್ಬರೂ ರಾಜ್ಯದ ಹಿತಾಸಕ್ತಿ ಬಗ್ಗೆ ನೆಪಕ್ಕೂ ಬಾಯಿ ಬಿಟ್ಟಿಲ್ಲ. ರಾಜ್ಯಕ್ಕೆ ಏಕೆ ಚೊಂಬು ಕೊಟ್ಟಿದ್ದೀರಿ ಎಂದು ಬಿಜೆಪಿ, ಜೆಡಿಎಸ್ ಸಂಸದರು ಮತ್ತು ಕೇಂದ್ರ ಸಚಿವರು ಪ್ರಧಾನಿ ಮೋದಿ ಬಳಿ ಕೇಳಬೇಕು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ಆಂಧ್ರಪ್ರದೇಶ, ಬಿಹಾರ ಬಿಟ್ಟು ಎಲ್ಲ ರಾಜ್ಯಗಳಿಗೂ ಅನ್ಯಾಯವಾಗಿದೆ. ಜೆಡಿಎಸ್-ಬಿಜೆಪಿ ದೋಸ್ತಿಯಿದ್ದರೂ ರಾಜ್ಯಕ್ಕೆ ಚೊಂಬು ಸಿಕ್ಕಿದೆ. ಮನುಸ್ಮೃತಿ ವಿರೋಧಿಸಿ, ಸಂವಿಧಾನ ಪರವಾಗಿರುವ ರಾಜ್ಯಗಳ ವಿರುದ್ಧ ಬಿಜೆಪಿ ಸರ್ಕಾರ ಸೇಡು ತೀರಿಸಿಕೊಳ್ಳುತ್ತಿದೆ. ಆದಾಯ ತೆರಿಗೆಯ ಮಿತಿ 12 ಲಕ್ಷ ರೂಪಾಯಿಗಳಿಗೆ ಏರಿಸಿರುವುದನ್ನು ಕೊಂಡಾಡಲಾಗುತ್ತಿದೆ. ನಮ್ಮಲ್ಲಿ ಕಳೆದ ಹಣಕಾಸು ವರ್ಷದಲ್ಲಿ ಆದಾಯ ತೆರಿಗೆ ಪಾವತಿ ಮಾಡಿದವರು ಕೇವಲ 8.09 ಕೋಟಿ ಜನ. ಇದು ನಮ್ಮ ಒಟ್ಟು ಜನಸಂಖ್ಯೆಯ ಶೇ.6.64ರಷ್ಟಾಗತ್ತದೆ. ಅವರಲ್ಲಿ 4.90 ಕೋಟಿ ಜನ ಸೊನ್ನೆ ತೆರಿಗೆ ಪಾವತಿದಾರರು. ಆದ್ದರಿಂದ ಆದಾಯ ತೆರಿಗೆ ಮಿತಿಯ ಹೆಚ್ಚಳ ಮೇಲು ಮಧ್ಯಮ ವರ್ಗದ ಕೆಲವೇ ಕುಟುಂಬಗಳಿಗೆ ನೆರವಾಗಬಹುದೇ ವಿನಹ ದಿನದ ಆದಾಯ 100-150 ರೂಪಾಯಿಯಷ್ಟೆ ಹೊಂದಿದ ಶೇ.70ರಷ್ಟು ಜನಸಂಖ್ಯೆಗೆ ಇದರಿಂದ ಯಾವ ಲಾಭವೂ ಇಲ್ಲ ಎಂದು ವಿಶ್ಲೇಷಿಸಿದರು.
ಈ ಸಾಲಿನ 50,65,345 ಕೋಟಿ ಬಜೆಟ್ ಗಾತ್ರದಲ್ಲಿ ಸಾಲದ ಪ್ರಮಾಣವೇ 15,68,936 ಕೋಟಿ ರೂ.ಗಳಷ್ಟಿದ್ದು, ಇದರಲ್ಲಿ ಬಡ್ಡಿಗೆ 12,70000 ಕೋಟಿ ಹೋಗುತ್ತಿದೆ. ನನ್ನ ಅಂದಾಜಿನ ಪ್ರಕಾರ 2026ರ ಮಾರ್ಚ್ ವೇಳೆಗೆ ದೇಶದ ಸಾಲ 202 ರಿಂದ 205 ಲಕ್ಷ ಕೋಟಿ ರೂಪಾಯಿಗಳನ್ನು ಮುಟ್ಟಬಹುದು ಎಂದರು.
ಅತಿ ಹೆಚ್ಚು ತೆರಿಗೆ ಪಾವತಿಸುವ ರಾಜ್ಯಗಳಲ್ಲಿ ಎರಡನೇ ಸ್ಥಾನದಲ್ಲಿರುವ ಕರ್ನಾಟಕ ರಾಜ್ಯಕ್ಕೆ ಈ ಬಜೆಟ್‌ನಲ್ಲಿ ಯಾವುದೇ ಹೊಸ ಘೋಷಣೆ ಇಲ್ಲ. ದಕ್ಷಿಣ ಭಾರತದ ರಾಜ್ಯಗಳಲ್ಲಿ ಸಣ್ಣ ಪ್ರಮಾಣದಲ್ಲಿ ಆಂಧ್ರ ಪ್ರದೇಶ ಬಿಟ್ಟರೆ ಉಳಿದ ಯಾವ ರಾಜ್ಯಗಳಿಗೂ ಯಾವುದೇ ಯೋಜನೆ ಘೋಷಣೆ ಮಾಡಿಲ್ಲ. ಪ್ರಧಾನಿ ನರೇಂದ್ರ ಮೋದಿ ಆಗಾಗ ಹೇಳಿಕೊಳ್ಳುತ್ತಿರುವ ವಿಕಸಿತ ಭಾರತದ ಬಜೆಟ್ ಅಲ್ಲ ಇದು ‘ಅವನತಿ ಭಾರತ’ದ ಬಜೆಟ್. ಅಭಿವೃದ್ದಿಯ ಪಥದಲ್ಲಿ ಮುನ್ನಡೆಯುತ್ತಿದ್ದ ಭಾರತವನ್ನು ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಹಿಂದಕ್ಕೆ ಎಳೆದೊಯ್ಯುತ್ತಿದೆ. ಇದು ಯಥಾಪ್ರಕಾರ ಕರ್ನಾಟಕದ ಪಾಲಿಗೆ ಮಾತ್ರವಲ್ಲ ಇಡೀ ದೇಶಕ್ಕೆ ನಿರಾಶದಾಯಕ, ನಷ್ಟದಾಯಕ ಮತ್ತು ಹಾನಿಕಾರಕ ಬಜೆಟ್ ಎಂದು ಟೀಕಿಸಿದರು.
ಪ್ರಧಾನಿ ಮೋದಿ ನಮ್ಮದು ಒಕ್ಕೂಟ ವ್ಯವಸ್ಥೆಯ ಭಾರತ ಎನ್ನುವುದನ್ನು ಮರೆತೇ ಬಿಟ್ಟಿದ್ದಾರೆ. ಕೇಂದ್ರ ಸರ್ಕಾರದ ಬಜೆಟ್ ಎಂದಾಕ್ಷಣ ಪ್ರತಿಯೊಂದು ರಾಜ್ಯದ ಜನತೆ ತಮ್ಮ ರಾಜ್ಯಕ್ಕೆ ಏನಾದರೂ ಕೊಡುಗೆಗಳಿರಬಹುದೇ ಎಂದು ಆಸೆಕಂಗಳಿಂದ ನೋಡುತ್ತಾರೆ. ಇಂದು ಮಂಡಿಸಿದ ಬಜೆಟ್‌ನಲ್ಲಿ ಒಂದೆಡೆ ಬಿಹಾರ ಇನ್ನೊಂದೆಡೆ ಆಂಧ್ರಪ್ರದೇಶ ಬಿಟ್ಟರೆ ಬೇರೆ ರಾಜ್ಯಗಳ ಪ್ರಸ್ತಾವವೂ ಇಲ್ಲ, ಆ ರಾಜ್ಯಗಳಿಗೆ ಸಂಬಂಧಿಸಿದ ಯೋಜನೆಗಳೂ ಇಲ್ಲ. ಈ ಬಾರಿಯ ಬಜೆಟ್‌ನಲ್ಲಿ ಕರ್ನಾಟಕದ ಜನತೆ ಏನನ್ನು ನಿರೀಕ್ಷಿಸುತ್ತಿದ್ದಾರೆ ಎಂಬ ವಿವರವಾದ ಬೇಡಿಕೆಯ ಪಟ್ಟಿಯನ್ನು ಹಣಕಾಸು ಖಾತೆ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಸಲ್ಲಿಸಿದ್ದೆ. ಬಹುಷ: ಆ ಬೇಡಿಕೆಯ ಪಟ್ಟಿಯನ್ನು ಅವರು ಕಣ್ಣೆತ್ತಿ ಕೂಡಾ ನೋಡಿದ ಹಾಗಿಲ್ಲ. ಕಳೆದ ವಿಧಾನಸಭಾ ಚುನಾವಣೆಯ ಕಾಲದಲ್ಲಿ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ರಾಜ್ಯದ ಜನ ಬಿಜೆಪಿಯನ್ನು ಗೆಲ್ಲಿಸದಿದ್ದರೆ ನರೇಂದ್ರ ಮೋದಿ ಆಶೀರ್ವಾದ ನಿಮಗೆ ಇರುವುದಿಲ್ಲ ಎಂದು ಬೆದರಿಕೆ ಹಾಕಿದ್ದರು. ಕರ್ನಾಟಕದ ಸ್ವಾಭಿಮಾನಿ ಜನತೆ ಆ ಬೆದರಿಕಗೆ ಜಗ್ಗದೆ ಬಿಜೆಪಿಯನ್ನು ಸೋಲಿಸಿದ್ದರು. ಅದರಂತೆ ನರೇಂದ್ರ ಮೋದಿ ಕರ್ನಾಟಕದ ವಿರುದ್ಧ ಸೇಡು ತೀರಿಸಿಕೊಳ್ಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದಲ್ಲಿರುವವರೆಲ್ಲೂ ಕಾಂಗ್ರೆಸ್ ಪಕ್ಷದ ಮತದಾರರಲ್ಲ, ಕಳೆದ ಲೋಕಸಭಾ ಚುನಾವಣೆಯಲ್ಲಿ ಶೇ.46 ಜನ ಬಿಜೆಪಿ ಪಕ್ಷಕ್ಕೂ ಮತಚಲಾಯಿಸಿದ್ದಾರೆ. ನರೇಂದ್ರಮೋದಿ ರಾಜ್ಯದ ವಿರುದ್ಧ್ದ ಸೇಡು ತೀರಿಸಿಕೊಳ್ಳುವ ಭರದಲ್ಲಿ ತಮ್ಮ ಪಕ್ಷಕ್ಕೆ ಮತಹಾಕಿದವರ ವಿರುದ್ಧ್ದವೂ ಸೇಡು ತೀರಿಸಿಕೊಳ್ಳುತ್ತಿದ್ದಾರೆ. 15ನೇ ಹಣಕಾಸು ಆಯೋಗದ ಶಿಫಾರಸಿನ ಕಾರಣದಿಂದಾಗಿ ತೆರಿಗೆ ಹಂಚಿಕೆಯಲ್ಲಿ ನಮಗಾಗಿರುವ ಅನ್ಯಾಯ, ಜಿಎಸ್‌ಟಿ ಪರಿಹಾರದಲ್ಲಿನ ಮೋಸ, ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಸಿಗದ ಪರಿಹಾರ, ನಮ್ಮ ಪ್ರಮುಖ ನೀರಾವರಿ ಯೋಜನೆಗಳಾದ ಕೃಷ್ಣಾ ಮೇಲ್ದಂಡೆ , ಮಹದಾಯಿ, ಭದ್ರಾ ಮೇಲ್ದಂಡೆ ಮತ್ತು ಮೇಕೆದಾಟು ವಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ನೀಡಬೇಕಾದ ಅಂಗೀಕಾರ ಮತ್ತು ಆರ್ಥಿಕ ನೆರವು, ಬೆಂಗಳೂರು ಮಹಾನಗರದ ಮೂಲಸೌಕರ್ಯಕ್ಕೆ ನೆರವು, ಕೇಂದ್ರ ಪ್ರಾಯೋಜಿತ ಯೋಜನೆಗಳಿಗೆ ಹೆಚ್ಚಿಸಬೇಕಾಗಿರುವ ಕೇಂದ್ರ ಸರ್ಕಾರದ ಪಾಲಿನ ಪ್ರಮಾಣ ಸೇರಿದಂತೆ ವಿವಿಧ ಬೇಡಿಕೆಗಳನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ್ದೆವು. ಇವುಗಳಲ್ಲಿ ಯಾವುದೇ ಒಂದು ಅಂಶದ ಬಗ್ಗೆಯೂ ಬಜೆಟ್‌ನಲ್ಲಿ ಪ್ರಸ್ತಾಪ ಮಾಡಿಲ್ಲ ಎಂದು ಅಸಮಾಧಾನ ಹೊರಹಾಕಿದರು.
ರಾಜ್ಯಕ್ಕೆ 15ನೇ ಹಣಕಾಸು ಆಯೋಗದ ಪ್ರಕಾರವೇ ನೀಡಬೇಕಿರುವ 5495 ಕೋಟಿ ರೂ. ಹಣವನ್ನು ನೀಡುವ ಸುಳಿವು ಕೂಡ ಇಲ್ಲ. ತೆರಿಗೆ ಹೆಚ್ಚು ನೀಡುವ ರಾಜ್ಯಗಳ ಅಭಿವೃದ್ಧಿಗೆ ಅನುದಾನವನ್ನು ಹೆಚ್ಚಿಸುವ ಬಗ್ಗೆ ತುಟಿ ಬಿಚ್ಚಿಲ್ಲ. ಅಂಗನವಾಡಿ ಮತ್ತು ಆಶಾಕಾರ್ಯಕರ್ತರ ಗೌರವ ಧನದಲ್ಲಿ ಕೇಂದ್ರ ಸರ್ಕಾರದ ಪಾಲನ್ನು 5000 ರೂ.ಗೆ ಮತ್ತು ಅಡುಗೆ ಕೆಲಸಗಾರರು ಮತ್ತು ಕಾರ್ಯಕರ್ತರ ಗೌರವ ಧನದಲ್ಲಿ ಕೇಂದ್ರ ಸರ್ಕಾರದ ಪಾಲನ್ನು ಕನಿಷ್ಠ 5000 ರೂ. ಹೆಚ್ಚಿಸಬೇಕು ಎಂಬ ನಮ್ಮ ಬೇಡಿಕೆಯನ್ನು ಪುರಸ್ಕರಿಸಿಲ್ಲ. ಪ್ರಧಾನ ಮಂತ್ರಿ ಆವಾಸ್ ಯೋಜನೆ (ನಗರ)ಯಡಿ ನಿರ್ಮಿಸುವ ಮನೆಗಳಿಗೆ ಕೇಂದ್ರ ಸರ್ಕಾರ ತನ್ನ ಪಾಲನ್ನು ಕನಿಷ್ಠ ಐದು ಲಕ್ಷ ರೂ.ಗೆ ಹೆಚ್ಚಿಸಬೇಕು.ಪ್ರಧಾನ ಮಂತ್ರಿ ಆವಾಸ ಯೋಜನೆ (ಗ್ರಾಮೀಣ) ಯೋಜನೆಯಡಿ ನಿರ್ಮಿಸುವ ಮನೆಗಳಿಗೆ ಕೇಂದ್ರ ಸರ್ಕಾರ ತನ್ನ ಪಾಲನ್ನು ಕನಿಷ್ಠ 3 ಲಕ್ಷ ರೂ.ಗೆ ಹೆಚ್ಚಿಸಬೇಕು ಎಂದು ಕೇಳಿದ್ದೆವು, ಆ ಬೇಡಿಕೆಯನ್ನು ಕೂಡಾ ತಿರಸ್ಕರಿಸಲಾಗಿದೆ ಎಂದು ಅತೃಪ್ತಿ ವ್ಯಕ್ತಪಡಿಸಿದರು.
ಪ್ರಕೃತಿ ವಿಕೋಪಕ್ಕೆ ಪರಿಹಾರ ನೀಡುವ ಎನ್‌ಡಿಆರ್‌ಎಫ್‌ಮತ್ತು ಎಸ್‌ಡಿಆರ್‌ಎಫ್‌ನ ಈಗಿನ ಮಾನದಂಡಗಳಿಂದ ರಾಜ್ಯಗಳಿಗೆ ಅನ್ಯಾಯವಾಗುತ್ತಿದ್ದು, ಅದನ್ನು ಬದಲಾಯಿಸಬೇಕು ಎಂದು ಕೇಳಿದ್ದೆವು. ರೈಲ್ವೆ ಯೋಜನೆಗಳಿಗೆ ಸಂಬಂಧಿಸಿದ ಭೂ ಸ್ವಾಧೀನದ ಅರ್ಧದಷ್ಟು ವೆಚ್ವವನ್ನು ಮತ್ತು ಯೋಜನೆಯ ಪೂರ್ಣ ವೆಚ್ಚವನ್ನು ಕೇಂದ್ರ ಸರ್ಕಾರವೇ ಭರಿಸಬೇಕು ಎಂಬ ಬೇಡಿಕೆ ಕೂಡಸಲ್ಲಿಸಿದ್ದೆವು. ಅದರ ಬಗ್ಗೆ ಬಜೆಟ್‌ನಲ್ಲಿ ಪ್ರಸ್ತಾಪವೇ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಿಸಲಾಗುವುದು ಎಂಬ ಆಶ್ವಾಸನೆಯನ್ನು ಈಡೇರಿಸಿಲ್ಲ. ಕಳಸಾ-ಬಂಡೂರಿ ಯೋಜನೆಗಳಿಗೆ ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣ ಮಂಡಳಿಯ ಅನುಮತಿಯನ್ನೂ ಕೊಟ್ಟಿಲ್ಲ. ಮೇಕೆದಾಟು ಯೋಜನೆಯ ಬಗ್ಗೆಯೂ ಪ್ರಸ್ತಾಪವೇ ಇಲ್ಲ. ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ಕೂಡಾ ರಾಷ್ಟ್ರೀಯ ಯೋಜನೆ ಎಂದು ಘೋಷಿಸಿ ಆರ್ಥಿಕ ನೆರವು ನೀಡಬೇಕೆಂಬ ಬೇಡಿಕೆ ಕೂಡಾ ಇತ್ತು. ಬಜೆಟ್ ನಲ್ಲಿನ ಜಲಸಂಪನ್ಮೂಲ ಇಲಾಖೆ ಗಂಗೆ, ಯಮುನೆ ಬಿಟ್ಟರೆ ಅದಕ್ಕಿಂತ ಕೆಳಗೆ ದಕ್ಷಿಣದ ಕಡೆ ಇಳಿದೇ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಮತ್ತು ಪಶ್ಚಿಮ ಘಟ್ಟ ಪ್ರದೇಶದ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡುವುದು, ರಸ್ತೆ ಮತ್ತು ರೈಲು ಸಂಪರ್ಕ ಯೋಜನೆಗಳಿಗೆ ಹೆಚ್ಚಿನ ಅನುದಾನ ನೀಡುವುದು, ರಾಜ್ಯಕ್ಕೆ ಕೇಂದ್ರ ಹಣಕಾಸು ಆಯೋಗವು ಶಿಫಾರಸ್ಸು ಮಾಡಿದ್ದ ವಿಶೇಷ ಅನುದಾನ 5,495 ಕೋಟಿ ರೂ.ಗಳು ಹಾಗೂ ರಾಜ್ಯ ಕೇಂದ್ರಿತ ಅನುದಾನ 6,000 ಕೋಟಿ ರೂ.ಗಳನ್ನು ಬಿಡುಗಡೆ ಮಾಡುವಂತೆ ಕೋರಲಾಗಿತ್ತು. ವಿಪತ್ತು ಪರಿಹಾರ ಅನುದಾನವನ್ನು ಹೆಚ್ಚಿಸುವಂತೆ ಕೇಳಲಾಗಿತ್ತು. ಆದರೆ ಕೇಂದ್ರ ಸರ್ಕಾರವು ರಾಜ್ಯದ ಯಾವುದೇ ಮನವಿಯನ್ನು ಪುರಸ್ಕರಿಸಿರುವುದಿಲ್ಲ ಎಂದರು.
ಬೆಂಗಳೂರು ಉಪನಗರ ರೈಲು ಯೋಜನೆಗೆ ನೇರ ಅನುದಾನ ಘೋಷಣೆ ಆಗಿಲ್ಲ, ಇದು ಬೆಂಗಳೂರಿನ ಸಾರಿಗೆ ಸಮಸ್ಯೆ ಪರಿಹಾರಕ್ಕೆ ದೊಡ್ಡ ಹಿನ್ನಡೆಯಾಗಿದೆ. ಸ್ಮಾರ್ಟ್ ಸಿಟಿ ಮತ್ತು ಮೆಟ್ರೋ ರೈಲು ವಿಸ್ತರಣೆ,ನಗರಾಭಿವೃದ್ಧಿ ನಿಧಿ ಘೋಷಣೆ ಮಾಡಲಾಗಿದೆ, ಆದರೆ ಬೆಂಗಳೂರು ಮೆಟ್ರೋ ಹಂತ-3 ಮತ್ತು ಫೆರಿಪೆರಲ್ ರಿಂಗ್‌ರೋಡ್ ಕಾಮಗಾರಿಗೆ ಯಾವುದೇ ಅನುದಾನ ಇಲ್ಲ. ಮುಂಬೈ, ದೆಹಲಿ ಮೆಟ್ರೋ ವಿಸ್ತರಣೆಗೆ ಆಯವ್ಯಯದಲ್ಲಿ ಅನುದಾನ ಮೀಸಲಿಡಲಾಗಿದೆ. ಆದರೆ ಬೆಂಗಳೂರು ಮೆಟ್ರೋಗೆ ಯಾವುದೇ ಅನುದಾನ ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಐಟಿ-ಸಾರಿಗೆ ಮೂಲಸೌಕರ್ಯ ಅಭಿವೃದ್ಧಿಗೆ ಸ್ಪಷ್ಟ ಯೋಜನೆಗಳಿಲ್ಲ, ಪ್ರಧಾನಮಂತ್ರಿ ಧನ್-ಧಾನ್ಯ ಕೃಷಿ ಯೋಜನೆ ಕಡಿಮೆ ಉತ್ಪಾದನಾ ಸಾಮರ್ಥ್ಯ ಇರುವ 100 ಕೃಷಿ ಜಿಲ್ಲೆಗಳ ಅಭಿವೃದ್ಧಿಗೆ ಯೋಜನೆ ಘೋಷಿಸಲಾಗಿದೆ. ಆದರೆ, ಕರ್ನಾಟಕದ ಬರಗಾಲ ಪೀಡಿತ ಜಿಲ್ಲೆಗಳಿಗೆ ಯಾವುದೇ ವಿಶೇಷ ಅನುದಾನ ಘೋಷಣೆ ಮಾಡಿರುವುದಿಲ್ಲ.ರಾಜ್ಯವು 2023-24 ಹಾಗು 2024-25ನೇ ಸಾಲಿನಲ್ಲಿ ಅನಾವೃಷ್ಟಿ ಮತ್ತು ಅತಿವೃಷ್ಟಿಯಿಂದ ಪರಿತಪಿಸಬೇಕಾಯಿತು ಆದರೆ ವಿಪತ್ತು ಪರಿಹಾರಕ್ಕೆ ಕೇಂದ್ರ ಸರ್ಕಾರದ ಆಯವ್ಯಯದಲ್ಲಿ ಯಾವುದೇ ಸ್ಪಷ್ಟ ಯೋಜನೆ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.