ಜಿಲ್ಲೆ

ಬಾಲ್ಯದ ಬುತ್ತಿ ಬಿಚ್ಚಿಟ್ಟು ಸಂಭ್ರಮ


ನಂಜನಗೂಡು: ಅಖಿಲ ಭಾರತೀಯ ಸಾಹಿತ್ಯ ಪರಿಷತ್ ವತಿಯಿಂದ ಶನಿವಾರ ಇಲ್ಲಿನ ರಾಮಸ್ವಾಮಿ ಬಡಾವಣೆಯ ಸಾಹಿತ್ಯ ಕೂಟದಲ್ಲಿ ‘ ತಿಂಗಳ ಬೆಳಕು’ ಶೀರ್ಷಿಕೆಯಡಿ ಆಯೋಜಿಸಿದ್ದ ಕಾರ್ಯಕ್ರಮ ಬಾಲ್ಯದ ನೆನಪುಗಳ ಸ್ಮರಣೆಗೆ ಸಾಕ್ಷಿಯಾಯಿತು.


ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದವರು ಒಮ್ಮೆ ತಮ್ಮ ಬಾಲ್ಯದ ದಿನಗಳಿಗೆ ಹೋಗಿ ಬಂದರು. ಸಭೆಯಲ್ಲಿ ನೆರೆದಿದ್ದವರೆಲ್ಲರೂ ಅವರವರ ಬಾಲ್ಯದ ಬುತ್ತಿಯನ್ನು ಬಿಚ್ಚಿಟ್ಟು ಸಂಭ್ರಮಿಸಿದರು.


ಶಿಕ್ಷಣ ಇಲಾಖೆಯ ಸಂಪನ್ಮೂಲ ವ್ಯಕ್ತಿಯೂ ಆದ ಶಿಕ್ಷಕರ ಸಂಘದ ಸಂಚಾಲಕ ಚೇತನ್ ಶರ್ಮ, ಅಜ್ಜಿ ಊರಿಗೆ ಹೋಗಿ ಅಲ್ಲಿನ ಸುಂದರ ವಾತಾವರಣದಲ್ಲಿ ಕಳಿಯುತ್ತಿದ್ದ ಕ್ಷಣಗಳನ್ನು ಸ್ಮರಿಸಿಕೊಂಡರು. ಅಜ್ಜಿ ತಯಾರಿಸಿಕೊಡುತ್ತಿದ್ದ ತಿಂಡಿ, ತೋಟಗಳಲ್ಲಿ ತಾವು ಕಲ್ಲು ಹೊಡೆದು ಬೀಳಿಸುತ್ತಿದ್ದ ಮಾವಿನಕಾಯಿ ಮೊದಲಾದ ಸಿಹಿ ನೆನಪುಗಳನ್ನು ಹಂಚಿಕೊಂಡರು. ಹಾಗೇ ತಾವು ಬರೆದಿದ್ದ ‘ಕಳೆದುಹೋದ ಬಾಲ್ಯ’ ಎನ್ನುವ ಶೀರ್ಷಿಕೆ ಹೊತ್ತ ಕವನ ವಾಚನ ಮಾಡಿದರು.
ನಿವೃತ್ತ ಪೊಲೀಸ್ ಅಧಿಕಾರಿ ಪ್ರಭಾಕರ್ ಅವರು, ತಾವು ಚಿಕ್ಕ ವಯಸ್ಸಿನಲ್ಲಿ 5 ರೂ. ಕದ್ದಿದ್ದಕ್ಕೆ ಅವರ ತಾಯಿ ಅವರನ್ನು ದಂಡಿಸಿ ಸರಿದಾರಿಯಲ್ಲಿ ನಡೆಯುವಂತೆ ಮಾಡಿದ್ದನ್ನು ನೆನಪಿಸಿಕೊಂಡರು. ನಿವೃತ್ತ ಮುಖ್ಯ ಶಿಕ್ಷಕ ಅನಂತರಾಮು ಅವರು, ತಮ್ಮ ಕಷ್ಟದ ಬಾಲ್ಯವನ್ನು ನೆನಪಿಸಿಕೊಂಡು ಆ ಕಷ್ಟದ ಕೆಲಸದಲ್ಲೂ ಖುಷಿ ಕಂಡಿದ್ದನ್ನು ಸ್ಮರಿಸಿದರು.


ಸ್ವಯಂ ಸೇವಕರಾದ ಶ್ರೀಧರ್ ಅವರು ತಮ್ಮ ತಂದೆ, ಗುರು ಸ್ಥಾನದಲ್ಲಿ ನಿಂತು ತಮ್ಮನ್ನು ತಿದ್ದಿ, ತೀಡಿ, ಉತ್ತಮ ಜೀವನವನ್ನು ನಮ್ಮದಾಗಿಸಿದರು ಎಂದು ಕಣ್ಣಂಚಲಿ ನೀರು ತುಂಬಿಕೊಂಡರು.


ಉತ್ತಮ ಶಿಕ್ಷಕ ಪ್ರಶಸ್ತಿ ವಿಜೇತರಾದ ಗೋಪಿನಾಥ್ ಅವರು, ತಮಗೆ ಉಲ್ಟಾ ಮಗ್ಗಿ ಹೇಳಲು ಬರದಿದ್ದಕ್ಕೆ ಮನೆ ಬಿಟ್ಟು ಹೋದ ಸಂದರ್ಭ ನೆನಪಿಸಿಕೊಂಡರು. ಹಾಗೇ ಬಾಲ್ಯದಲ್ಲಿ ಗೆಳೆಯನ ಜತೆ ಆಡುತ್ತಿದ್ದಾಗ ಆದ ಪೆಟ್ಟಿನ ಬಗ್ಗೆ ಗೆಳೆತನದ ಗುರುತಾಗಿ ಹಣೆಯ ಮೇಲೆ ಗಾಯದ ಗುರುತು ಇರುವುದಾಗಿ ಹೇಳಿದರು.
ಶೋಭ ನಾಗಶಯನ ಅವರು, ತಂದೆ, ತಾಯಿಯ ಮಡಿಲಿನಿಂದ ನಮ್ಮ ಜೀವನವನ್ನು ನಾವೇ ಎದುರಿಸುವಾಗ ಎದುರಾಗುವ ಸಮಸ್ಯೆಗಳ ಬಗ್ಗೆ ದೃಷ್ಟಿ ಬೀರಿದರು. ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸತ್ಯನಾರಾಯಣ ಅವರು ತಮ್ಮ ಬಾಲ್ಯದ ಬುತ್ತಿಯನ್ನು ಬಿಚ್ಚಿಟ್ಟರು. ಬೀದಿ ದೀಪದ ಬೆಳಕಲ್ಲಿ ವಿಶಾಲವಾದ ಜಗುಲಿ ಮೇಲೆ ತಾವು ಕಳೆದ ಬಾಲ್ಯವನ್ನು ನೆನಪಿಸಿಕೊಂಡರು.
ವಿದ್ಯಾರಣ್ಯ ಸಾಹಿತ್ಯ ಕೂಟದ ಸಂಚಾಲಕ ಗೋಪಿನಾಥ್ ಪ್ರಾಸ್ತಾವಿಕ ಭಾಷಣ ಮಾಡಿದರು. ಕಾರ್ಯಕ್ರಮದಲ್ಲಿ ಹಲವರು ಪಾಲ್ಗೊಂಡಿದ್ದರು.