ಪರ್ಯಾಯ ಪುತ್ತಿಗೆ ಶ್ರೀಗಳಿಗೆ ಜನ್ಮದಿನ
ಶ್ರೀಕೃಷ್ಣನಿಗೆ 'ವಿಶ್ವ ರೂಪ ದರ್ಶನ' ಸೇವೆ
ಉಡುಪಿ ಶ್ರೀಕೃಷ್ಣ ಮಠದ ಪರ್ಯಾಯ ಸೇವೆಯಲ್ಲಿ ನಿರತ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಶ್ರೀಪಾದರಿಗೆ ಆಗಸ್ಟ್ 30ರಂದು 64ನೇ ಜನ್ಮನಕ್ಷತ್ರದ ಸಡಗರ. ತನ್ನಿಮಿತ್ತ ಭಗವಂತನಿಗೆ ಪ್ರತ್ಯರ್ಪಣ ರೂಪದಲ್ಲಿ ಸೇವೆ ಮಾಡಲು ಶ್ರೀಗಳು ನಿರ್ಧರಿಸಿದ್ದಾರೆ.
ಜನ್ಮದಿನದ ಸಂದರ್ಭದಲ್ಲಿ ವಿಜಯವಾಣಿಗೆ ವಿಶೇಷ ಸಂದರ್ಶನ ನೀಡಿದ ಪುತ್ತಿಗೆ ಶ್ರೀಗಳು, ಮಧ್ವಾಚಾರ್ಯರ ಅಂಚೆ ಚೀಟಿ ಬಿಡುಗಡೆ, ಆಫ್ರಿಕಾ ವಿವಿಯಿಂದ ಗೌರವ ಡಾಕ್ಟರೇಟ್ ಹಾಗೂ ಶ್ರೀಕೃಷ್ಣನಿಗೆ ವಿಶ್ವರೂಪ ಅಲಂಕಾರದ ಕುರಿತಾಗಿ ಮಾಹಿತಿ ಹಂಚಿಕೊಂಡರು.
ಇಂದಿನ ಜನ್ಮನಕ್ಷತ್ರದ ವಿಶೇಷತೆ ಏನು?
ಚತುರ್ಥ ಪರ್ಯಾಯದ ಸಂದರ್ಭದಲ್ಲಿ ಬಂದಿರುವ ನಮ್ಮ ಜನ್ಮನಕ್ಷತ್ರವನ್ನು ಪ್ರತ್ಯರ್ಪಣ ಸೇವೆಗೆ ಮೀಸಲಿಟ್ಟಿದ್ದೇವೆ. ಅನೇಕ ಸೇವೆ ಸಲ್ಲಿಸಿದ್ದು, ಈ ಬಾರಿ ಉಡುಪಿ ಶ್ರೀಕೃಷ್ಣನಿಗೆ ವಿಶ್ವ ರೂಪ ದರ್ಶನಕ್ಕೆ ಬೇಕಾದ ಚಿನ್ನದ ಸಾಮಗ್ರಿ ಸಮರ್ಪಿಸಲಿದ್ದೇವೆ. ತನ್ಮೂಲಕ ಹರಿ-ಗುರುವಿನ ಸೇವೆಗೆ ಜನ್ಮನಕ್ಷತ್ರ ಮೀಸಲಿಟ್ಟಿದ್ದೇವೆ.
ಜನ್ಮದಿನದ ಆಚರಣೆ ಹೇಗಿರಬೇಕು?
ಜನ್ಮನಕ್ಷತ್ರದ ಆಚರಣೆಯೂ ಸಹ ಕರ್ತವ್ಯ ಎಂದು ಶಾಸ್ತ್ರವೂ ತಿಳಿಸುತ್ತದೆ. ನಮಗೆ ಯಾರೆಲ್ಲ ಸಹಕರಿಸಿದ್ದಾರೆ, ಅನುಗ್ರಹಿಸಿದ್ದಾರೆ ಅವರಿಗೆಲ್ಲ ಈದಿನದಂದು ಕೃತಜ್ಞತೆ ಸಲ್ಲಿಸುವುದೂ ಸಹ ಕರ್ತವ್ಯವಾಗಿದೆ. ಪ್ರಮುಖವಾಗಿ ಕುಲದೇವರಿಗೆ, ಗುರು-ಹಿರಿಯರಿಗೆ ಪ್ರಥಮವಾಗಿ ಕೃತಜ್ಞತೆ ಸಲ್ಲಿಸಬೇಕು. ಅಭಿಮಾನಿಗಳಿಗೆ ಸಂತಸ ತರಬೇಕು. ಸನ್ಯಾಸಿಗಳು ಎಷ್ಟು ಸಾಧ್ಯವೋ ಅಷ್ಟು ಸಮಾಜ ಸೇವೆ, ಗುರು-ಹಿರಿಯರ ಸೇವೆ ಮಾಡಬೇಕು. ಆ ಸಂಕಲ್ಪ ನಾವು ಮಾಡಿದ್ದೇವೆ.
ತಮ್ಮ ಸನ್ಯಾಸ ಜೀವನದ ಸಾಧನೆ-ಕೊಡುಗೆಯೇನು?
ಮಾಡಿದ ಸಾಧನೆ ಅಥವಾ ಕೊಡುಗೆಯ ಬಗ್ಗೆ ಹೇಳಲು ಬಯಸುವುದಿಲ್ಲ. ಅದೆಲ್ಲವೂ ಜನರಿಗೇ ಗೊತ್ತು. ಆದರೆ, ಗರಿಷ್ಠ ಮಟ್ಟದಲ್ಲಿ ಹಾಗೂ ಪ್ರಮಾಣಿಕವಾಗಿ ದೇವರು, ಧರ್ಮ ಹಾಗೂ ಸಮಾಜದ ಸೇವೆ ಮಾಡಿದ್ದೇವೆ. ಮಾಡುತ್ತಲೇ ಇದ್ದೇವೆ. ಆ ತೃಪ್ತಿಭಾವ ಸದಾ ಇದೆ.
ಕೋಟಿ ಗೀತಾ ಲೇಖನದ ಪ್ರಯೋಜನವೇನು?
ಕೋಟಿ ಗೀತಾ ಲೇಖನ ಯಜ್ಞವು ನಮಗೆ ಅತ್ಯಂತ ಇಷ್ಟವಾದ ಕಾರ್ಯ. ಅದು ಶ್ರೀಕೃಷ್ಣನಿಗೂ ಪ್ರಿಯವಾದ ಯೋಜನೆ. ಆ ಕಾರ್ಯದ ಮೂಲಕ ಜನರಿಗೆ ಪುಣ್ಯ ಗಳಿಕೆಗೆ ಅವಕಾಶ ನೀಡುತ್ತ, ಧರ್ಮ ಪ್ರಚಾರ ಮಾಡುತ್ತಿದ್ದೇವೆ. ಸನಾತ ಧರ್ಮದ ಉಳಿವು-ಉದ್ಧಾರಕ್ಕೂ ಸಹ ಇದು ಅಡಿಪಾಯವಾಗಲಿದೆ. ಜನರನ್ನು ಧಾರ್ಮಿಕರನ್ನಾಗಿಸುವ ಯೋಜನೆಯಿದು. ಅದು ನಿರೀಕ್ಷೆಗೂ ಮೀರಿ ಯಶಸ್ವಿಯಾಗಿದೆ. ಗೀತೆ ಬರೆದು ಶ್ರೀಕೃಷ್ಣನಿಗೆ ಸಮರ್ಪಣೆ ಮಾಡಿದವರಿಗೆಲ್ಲ ದೇವರ ಅನುಗ್ರಹ ಲಭಿಸಿದೆ. ಅವರ ಮನೋಕಾಮನೆ ಈಡೇರುತ್ತಿರುವುದನ್ನು ಪ್ರತ್ಯಕ್ಷವಾಗಿ ಕಾಣುತ್ತಿದ್ದೇವೆ. ನಮ್ಮ ಪರ್ಯಾಯದಲ್ಲಿ ಅತ್ಯಂತ ಹೆಚ್ಚು ತೃಪ್ತಿ ನೀಡಿದ ಯೋಜನೆಯಿದು.
ವಿದೇಶದಲ್ಲೂ ಕೃಷ್ಣ ಪ್ರಸಾರವೇಕೆ?
ಶ್ರೀಕೃಷ್ಣ ಜಗದೊಡೆಯ, ವಿಶ್ವವ್ಯಾಪಿ. ಹೀಗಾಗಿ ದೇಶವಷ್ಟೇ ಅಲ್ಲ, ವಿದೇಶದಲ್ಲೂ ಕೃಷ್ಣ ಭಕ್ತಿ ಪ್ರಸಾರ ಕೈಗೊಂಡಿರುವುದು ಸಂತೋಷ ತಂದಿದೆ. ವಿದೇಶದಲ್ಲಿರುವ ಜನರಿಗೂ ಸಹ ಭಕ್ತಿಯ ತೃಷೆಯಿದೆ. ನಮ್ಮ ಧರ್ಮ, ಸಂಸ್ಕೃತಿ ಹಾಗೂ ಸಂಪ್ರದಾಯ ಉಳಿಸಬೇಕೆಂಬ ನೈಜ ಕಳಕಳಿ ಅಲ್ಲಿನವರಿಗಿದೆ. ಆ ಕಾರಣದಿಂದಾಗಿಯೇ ವಿದೇಶದಲ್ಲಿರುವ ಭಕ್ತರು ನಮ್ಮನ್ನು ಬರಮಾಡಿಕೊಂಡಿದ್ದಾರೆ. ಅಮೆರಿಕದಲ್ಲಿ 11 ಕೃಷ್ಣ ಮಠ, ಕೆನಡಾ ಹಾಗೂ ಲಂಡನ್ನಲ್ಲಿ ತಲಾ ಒಂದು, ಆಸ್ಟ್ರೇಲಿಯಾದಲ್ಲಿ 2 ಕೃಷ್ಣ ಮಠ ಸ್ಥಾಪಿಸಿ ಕೃಷ್ಣ ಪ್ರಜ್ಞೆ ಮೂಡಿಸುವ ಕೆಲಸ ಮಾಡಿದ್ದೇವೆ.
ಡಾಕ್ಟರೇಟ್ ಲಭಿಸಲು ಕಾರಣವೇನು?
ನಾವು ಇದನ್ನು ನಿರೀಕ್ಷೆ ಮಾಡಿರಲಿಲ್ಲ. ನಮ್ಮ ಜನ್ಮ ನಕ್ಷತ್ರದ ದಿನಕ್ಕೆ ಶ್ರೀಕೃಷ್ಣ ಕೊಟ್ಟ ಕೊಡುಗೆಯಾಗಿದೆ. ಈಗಾಗಲೇ ಮಂಗಳೂರಿನ ಶ್ರೀನಿವಾಸ ವಿವಿ ಗೌರವ ಡಾಕ್ಟರೇಟ್ ಗೌರವ ನೀಡಿದೆ. ವಿಶ್ವಾದ್ಯಂತ ಮಧ್ವ ತತ್ವ ಸಿದ್ಧಾಂತ ಹಾಗೂ ಕೃಷ್ಣ ಭಕ್ತಿ ಪ್ರಸಾರದ ಹಿನ್ನೆಲೆಯಲ್ಲಿ ಆಫ್ರಿಕಾದ ವಿಶ್ವ ವಿದ್ಯಾಲಯವು ಇಂದು (ಆ.30ರಂದು) ಗೌರವ ಡಾಕ್ಟರೇಟ್ ಪ್ರದಾನ ಮಾಡುತ್ತಿದೆ.
ಮಧ್ವಾಚಾರ್ಯರ ಅಂಚೆ ಚೀಟಿ ಬಿಡುಗಡೆ
ಭಾರತವು ಧರ್ಮ ಮತ್ತು ಆಧ್ಯಾತ್ಮಿಕತೆಗೆ ಪ್ರಸಿದ್ಧವಾಗಿದ್ದು ಮುಂದೆ ವಿಶ್ವಗುರುವಾಗಿಯೂ ಕಂಗೊಳಿಸಲಿದೆ. ಇಲ್ಲಿ ಅನೇಕ ದಾರ್ಶನಿಕರು ಅವತಾರವೆತ್ತಿದ್ದು, ಅವರಲ್ಲಿ ಮಧ್ವಾಚಾರ್ಯರೂ ಪ್ರಮುಖರು. ಮಧ್ವ ಸಿದ್ಧಾಂತ ಅಥವಾ ದ್ವೈತ ಸಿದ್ಧಾಂತವು ಜಗನ್ಮಾನ್ಯವಾಗಿದೆ. ವೇದಾಂತಗಳಲ್ಲಿ ಅತ್ಯಂತ ಪರಿಷತವಾದ ಸಿದ್ಧಾಂತವೂ ಆಗಿದೆ. ಅಂತಹ ಸಿದ್ಧಾಂತ ಪ್ರತಿಷ್ಠಾಪಿಸಿದವರು ಮಧ್ವರು. ಆ ಸಿದ್ಧಾಂತವನ್ನು ವಿಶ್ವವೇ ಒಪ್ಪಿಕೊಂಡಿದ್ದು ವರ್ಲ್ಡ್ ವಂಡರ್ ಎಂದು ಕರೆಯಲಾಗುತ್ತದೆ. ಚತುರ್ಥ ವಿಶ್ವಗೀತಾ ಪರ್ಯಾಯ ಹಾಗೂ ನಮ್ಮ 64ನೇ ಜನ್ಮನಕ್ಷತ್ರದ ಸುಸಂದರ್ಭದಲ್ಲಿ ಭಾರತ ಸರ್ಕಾರವು ಜಗದ್ಗುರು ಮಧ್ವಾಚಾರ್ಯರ ಜ್ಞಾನ ಮುದ್ರೆಯ ಭಂಗಿಯ ಅಂಚೆ ಚೀಟಿ ಬಿಡುಗಡೆ ಮಾಡುತ್ತಿರುವುದು ಸಂತಸ ತಂದಿದೆ. ಅನೇಕರಿಗೆ ಮಧ್ವರ ಕುರಿತು ತಪ್ಪು ಕಲ್ಪನೆಗಳಿವೆ. ಅದನ್ನು ಹೋಗಲಾಡಿಸಲೂ ಸಹ ಈ ಅಂಚೆ ಚೀಟಿ ಸಹಕಾರಿಯಾಗಿದೆ. ಜಗತ್ತಿಗೆ ಸ್ಫೂರ್ತಿ, ಪ್ರೇರಣೆ, ಮಾರ್ಗದರ್ಶನ ನೀಡುವಂತಾಗಲಿ ಎಂದು ಆಶಿಸುವುದಾಗಿ ಸುಗುಣೇಂದ್ರ ಶ್ರೀ ತಿಳಿಸಿದರು.
ಉಡುಪಿ ಶ್ರೀಕೃಷ್ಣ ಮಠಕ್ಕೆ ಡಿ.ಕೆ. ಶಿವಕುಮಾರ ಭೇಟಿ
ಮಧ್ವಾಚಾರ್ಯರ ಅಂಚೆ ಚೀಟಿ ಬಿಡುಗಡೆ
ಉಡುಪಿ: ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಆ.30ರಂದು ಉಡುಪಿಗೆ ಭೇಟಿ ನೀಡಲಿದ್ದಾರೆ. ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಸಂಜೆ 4 ಗಂಟೆಗೆ ನಡೆಯಲಿರುವ ಮಧ್ವಾಚಾರ್ಯರ ಅಂಚೆ ಚೀಟಿ ಬಿಡುಗಡೆ ಹಾಗೂ ಪಾರ್ಯಾಯ ಪುತ್ತಿಗೆ ಸುಗುಣೇಂದ್ರ ತೀರ್ಥ ಶ್ರೀಪಾದರ 64ನೇ ಜನ್ಮನಕ್ಷತ್ರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ಸಮಾರಂಭದಲ್ಲಿ ಅದಮಾರು ಮಠದ ವಿಶ್ವಪ್ರಿಯತೀರ್ಥ ಶ್ರೀಪಾದರು, ಪುತ್ತಿಗೆ ಕಿರಿಯ ಯತಿ ಸುಶ್ರೀಂದ್ರ ಶ್ರೀ ಸಾನ್ನಿಧ್ಯ ವಹಿಸಲಿದ್ದಾರೆ. ಮಣಿಪಾಲ ಮಾಹೆ ಸಹಕುಲಾಧಿಪತಿ ಡಾ. ಎಚ್.ಎಸ್. ಬಲ್ಲಾಳ, ಕರ್ನಾಟಕ ವೃತ್ತ ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್ ಕೆ.ಪ್ರಕಾಶ, ಆಫ್ರಿಕಾದ ಮೈಲ್ಸ್ ಲೀಡರ್ಶಿಪ್ ಯೂನಿವರ್ಸಿಟಿಯ ಉಪಕುಲಪತಿ ಡಾ. ಕೆ.ರವಿ ಆಚಾರ್ಯ ಇತರರು ಪಾಲ್ಗೊಳ್ಳಲಿದ್ದಾರೆ. ನವದೆಹಲಿಯ ಕೇಂದ್ರೀಯ ಸಂಸ್ಕೃತ ವಿ.ವಿ. ಕುಲಪತಿ ಡಾ. ಶ್ರೀನಿವಾಸ ವರಖೇಡಿ ಶುಭಾಶಂಸನೆ ಮಾಡಲಿದ್ದಾರೆ.
ಶ್ರೀಗಳ ಜನ್ಮ ನಕ್ಷತ್ರದ ನಿಮನಿತ್ತ ಶ್ರೀಕೃಷ್ಣನಿಗೆ ಲಕ್ಷ ತುಳಸಿ ಅರ್ಚನೆ, ವಿವಿಧ ಹೋಮ ನಡೆಯಲಿದೆ. ಶ್ರೀಗಳು ಸಾಗರದಾಚೆಯೂ ನಡೆಸಿದ ಶ್ರೀಕೃಷ್ಣ ತತ್ವ ಪ್ರಸಾರ, ಮಂದಿರ ಸ್ಥಾಪನೆ ಸೇರಿದಂತೆ ಶ್ರೀಗಳ ಸಿದ್ಧಿ ಸಾಧನೆ ಕುರಿತು ಎಲ್ಲೂರು ಸುಬ್ರಹ್ಮಣ್ಯ ರಾವ್ ಮತ್ತು ಓಂಪ್ರಕಾಶ ಭಟ್ ಸಂಪಾದಿತ ವಿಶ್ವಮಾನ್ಯ ಯತಿಯ ಯಶೋಗಾಥೆ ಪುಸ್ತಕ ಬಿಡುಗಡೆ ಮಾಡಲಾಗುತ್ತಿದೆ.
ಶ್ರೀಕೃಷ್ಣನಿಗೆ ಕಾಣಿಕೆಯಾಗಿ 50 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿರುವ ವಿಶ್ವರೂಪ ದರ್ಶನ ಕವಚವನ್ನೂ ಸಮರ್ಪಿಸಲಾಗುತ್ತಿದೆ ಎಂದು ಮಠದ ದಿವಾನ ನಾಗರಾಜ ಆಚಾರ್ಯ, ಕಾರ್ಯದರ್ಶಿ ಪ್ರಸನ್ನ ಆಚಾರ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.