ಮೈಸೂರು: ರೈತ ಮುಖಂಡ ಕುರುಬೂರು ಶಾಂತಕುಮಾರ್, ಕನ್ನಡಪರ ಹೋರಾಟಗಾರ ನಾರಾಯಣಗೌಡ ಮೊದಲಾದವರ ಮೇಲಿನ ಪ್ರಕರಣಗಳನ್ನು ವಾಪಸ್ ಪಡೆಯಲಾಗಿದೆ. 43 ಪ್ರಕರಣಗಳಲ್ಲಿ 9 ಮಾತ್ರ ಕಾಂಗ್ರೆಸ್ ನಾಯಕರ ಮನವಿಯಾಗಿದ್ದು, ಉಳಿದ ಮನವಿಗಳೆಲ್ಲವೂ ಬಿಜೆಪಿ ಮತ್ತು ಸಂಘಟನೆಗಳದ್ದಾಗಿವೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಹೇಳಿದರು.
ಹುಬ್ಬಳ್ಳಿ ಪ್ರಕರಣವನ್ನು ಅಲ್ಲಿನ ಅಂಜುಮಾನ್ ಸಮಿತಿ ಹಾಗೂ ಛಲವಾದಿ ಮಹಾಸಭಾ ಮನವಿ ಆಧರಿಸಿ ತೀರ್ಮಾನ ಮಾಡಲಾಗಿದೆ. 43 ಪ್ರಕರಣಗಳಲ್ಲಿ 42 ಪ್ರಕರಣಗಳ ಬಗ್ಗೆ ಮಾತನಾಡುತ್ತಿಲ್ಲ. ಕೇಂದ್ರ ಸಚಿವ ವಿ.ಸೋಮಣ್ಣ, ಪ್ರತಿಪಕ್ಷ ನಾಯಕ ಆರ್.ಅಶೋಕ್, ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಮೊದಲಾದವರು ಕೊಟ್ಟ ಮನವಿ ಆಧರಿಸಿ ಪ್ರಕರಣಗಳನ್ನು ಹಿಂದಕ್ಕೆ ಪಡೆಯಲಾಗಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮುಸ್ಲಿಂ ಸಮುದಾಯದವರ ಮೇಲಿದ್ದ ಪ್ರಕರಣ ಹಿಂಪಡೆದಿದ್ದಕ್ಕೆ ಹೊಟ್ಟೆ ಉರಿಯಾಗಿದೆ. ಆರ್‌ಎಸ್‌ಎಸ್, ಬಿಜೆಪಿ, ಪ್ರಲ್ಹಾದ ಜೋಶಿ, ಆರ್.ಅಶೋಕ್, ಬಿ.ವೈ.ವಿಜಯೇಂದ್ರ ನಿಜವಾದ ಭಯೋತ್ಪಾದಕರು. ಅವರ ವಿರುದ್ಧ ಪ್ರಕರಣ ದಾಖಲಿಸಬೇಕು.
2019ರಿಂದ 2023ರ ವರೆಗೆ 385 ಪ್ರಕರಣಗಳನ್ನು ವಾಪಸ್ ಪಡೆದಿದ್ದು, 182 ದ್ವೇಷ ಭಾಷಣ ಹಾಗೂ ಕೋಮು ಪ್ರಚೋದನೆಗೆ ಸಂಬಂಧಿಸಿದ್ದು. 7361 ರೌಡಿಶೀಟರ್‌ಗಳನ್ನು ಕೈಬಿಟ್ಟ ಕೀರ್ತಿ ಬಿಜೆಪಿಯವರದ್ದು. ಪ್ರಕರಣಗಳನ್ನು ವಾಪಸ್ ಪಡೆಯಲು ಸರ್ಕಾರಕ್ಕೆ ಅವಕಾಶವಿದೆ. ಕೆಲವೊಮ್ಮೆ ದುರುದ್ದೇಶಪೂರಿತ ಪ್ರಕರಣಗಳು ದಾಖಲಾದಾಗ ಸರ್ಕಾರ ಮಧ್ಯಪ್ರವೇಶ ಅನಿವಾರ್ಯವಾಗಿದೆ ಎಂದು ಸಮರ್ಥಿಸಿಕೊಂಡರು.
ಹಲವು ಠಾಣೆಗಳಲ್ಲಿ ಹೂಡಿದ್ದ ಮೊಕದ್ದಮೆಗಳನ್ನು ಹಿಂಪಡೆದಿರುವುದು ರಾಜ್ಯ ಸರ್ಕಾರದ ಪ್ರಸ್ತಾಪವಲ್ಲ. ಸಚಿವ ಸಂಪುಟದಲ್ಲಿ ಮಂಡಿಸಿ ನಂತರ ಆಗಿರುವ ತೀರ್ಮಾನವಾಗಿದೆ. ಸರ್ಕಾರ ಏಕಾಏಕಿ ತೀರ್ಮಾನ ಮಾಡಿಲ್ಲ. ಸಾರ್ವಜನಿಕರಿಂದ ಬಂದ ಮನವಿಗಳನ್ನು ಆಧರಿಸಿ ಮಾಡಿರುವ ನಿರ್ಧಾರವಾಗಿದೆ ಎಂದು ಹೇಳಿದರು.
ಒಂದು ಪ್ರಕರಣದ ಬಗ್ಗೆ ಮಾತನಾಡುತ್ತಿದ್ದಾರೆಯೇ ಹೊರತು ಉಳಿದ ಪ್ರಕರಣಗಳ ಬಗ್ಗೆ ಚಕಾರ ಎತ್ತುತ್ತಿಲ್ಲ. ಇಡೀ ದೇಶದಲ್ಲಿ ಮುಸ್ಲಿಮರು ಇರಲೇಬಾರದು ಎಂಬ ಮನಸ್ಥಿತಿ ಬಿಜೆಪಿಯದ್ದು. ಆದರೆ, ಅವರ ವ್ಯವಹಾರ, ನೆಂಟಸ್ಥನವೆಲ್ಲ ಅವರೊಂದಿಗೇ ಇದೆ ಎಂದು ಟೀಕಿಸಿದರು.
ಕೇಂದ್ರದಿಂದ ಕರ್ನಾಟಕಕ್ಕೆ ಆಗುತ್ತಿರುವ ತೆರಿಗೆ ಅನ್ಯಾಯವನ್ನು ಖಂಡಿಸಿ ಮುಂದಿನ ವಾರದಿಂದ ರಾಜ್ಯಾದ್ಯಂತ ಹೋರಾಟ ನಡೆಸಲಾಗುವುದು. ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ರಾಜ್ಯಕ್ಕೆ ಆಗಿರುವ ನಷ್ಟದ ಬಗ್ಗೆ ಜನರ ಮುಂದಿಡಲಾಗುವುದು ಎಂದು ಎಂ.ಲಕ್ಷ್ಮಣ್ ತಿಳಿಸಿದರು.
ಮೈಸೂರಿನ ರೈಲ್ವೆ ಗೂಡ್ಸ್ ಶೆಡ್ ಅನ್ನು ಮಂಡ್ಯದ ಯಲಿಯೂರಿಗೆ ಸ್ಥಳಾಂತರಿಸುವ ಪ್ರಯತ್ನ ನಡೆದಿದೆ. ಇದೊಂದು ಮೂರ್ಖತನದ ಪರಮಾವಧಿ. ಯಲಿಯೂರಿನಲ್ಲಿ ಬೇಕಾದರೆ ಮತ್ತೊಂದು ಶೆಡ್ ಮಾಡಲಿ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರ ರೈಲ್ವೆ ಸಚಿವರಿಗೆ ಪತ್ರ ಬರೆದಿದ್ದಾರೆ ಎಂದರು.
ಮುಡಾ ಪ್ರಕರಣದಲ್ಲಿ ಸ್ನೇಹಮಯಿ ಕೃಷ್ಣ ಪಾತ್ರಧಾರಿ, ಸೂತ್ರಧಾರರು ಬಿಜೆಪಿ, ಜೆಡಿಎಸ್‌ನಲ್ಲಿದ್ದಾರೆ. ಸ್ನೇಹಮಯಿ ಕೃಷ್ಣ ಬಳಿ ಇರುವ ದಾಖಲೆಗಳಲ್ಲಿ ಶೇ.50 ನಕಲಿ. ನಕಲಿಯನ್ನು ಅಸಲಿ, ಅಸಲಿಯನ್ನು ನಕಲಿ ಮಾಡುವುದರಲ್ಲಿ ಪ್ರವೀಣರು ಎಂದು ಎಂ.ಲಕ್ಷ್ಮಣ್ ಆರೋಪಿಸಿದರು.
ದೂರುದಾರ ಯಾವಾಗ ಬೇಕಾದರೂ ಬಂದು ದಾಖಲೆ ಕೊಡಬಹುದೇ ಎನ್ನುವುದನ್ನು ಪೊಲೀಸರು ಹೇಳಬೇಕು. ಮೊದಲು ಸ್ನೇಹಮಯಿ ಕೃಷ್ಣ ಅವರನ್ನು ಬಂಧಿಸಬೇಕು. ಈ ಬಗ್ಗೆ ಅ.16ರಂದು ಲೋಕಾಯುಕ್ತ ಎಸ್‌ಪಿ ಅವರಲ್ಲಿ ದೂರು ದಾಖಲಿಸಲಾಗುವುದು.
ಸ್ನೇಹಮಯಿ ಕೃಷ್ಣ ದೂರುದಾರರಾಗಿ ಲೋಕಾಯುಕ್ತರು ಕರೆದ ದಿನ ಕಚೇರಿಗೆ ತೆರಳಿ ವಿಚಾರಣೆಗೆ ಹಾಜರಾಗಬೇಕು. ಅಧಿಕಾರಿಗಳನ್ನು ಬ್ಲಾೃಕ್‌ಮೇಲ್ ಮಾಡಿ ಒತ್ತಡ ಹೇರುವುದು ಸರಿಯಲ್ಲ. ಇವರ ನೇರಕ್ಕೆ ತನಿಖೆ ನಡೆಯಬೇಕೆ? ಅಧಿಕಾರಿಗಳು ಏನಾದರೂ ಬ್ಲಾೃಕ್‌ಮೇಲ್‌ಗೆ ಸಿಕ್ಕಿ ಹಾಕಿಕೊಂಡಿದ್ದೀರಾ? ಸಾಕ್ಷ್ಯನಾಶ ಮಾಡಲು ಇದೇನು ಕೊಲೆ ಪ್ರಕರಣವೇ? ನೋಂದಾಯಿತ ದಾಖಲೆ ನಾಶ ಮಾಡಲು ಸಾಧ್ಯವೇ ಎಂದು ಪ್ರಶ್ನಿಸಿದರು.