ಮೈಸೂರು: ಅರಣ್ಯಾಧಿಕಾರಿಗಳ ವಶದಲ್ಲಿ ಇರುವ ವೇಳೆ ಮೃತಪಟ್ಟಿದ್ದ ಎಚ್.ಡಿ.ಕೋಟೆ ತಾಲೂಕು ಎನ್.ಬೇಗೂರು ಗ್ರಾಪಂ ವ್ಯಾಪ್ತಿಯ ಹೊಸಹಳ್ಳಿ ಹಾಡಿ ನಿವಾಸಿ ಕರಿಯಪ್ಪನ ಸಾವಿನ ಪ್ರಕರಣ ಗಂಭೀರ ಸ್ವರೂಪ ಪಡೆದಿದ್ದು, ಪ್ರಕರಣವನ್ನು ಗುರುವಾರ ಸಿಒಡಿ ತನಿಖೆಗೆ ವಹಿಸಲಾಗಿದೆ.
ಕರಿಯಪ್ಪನ ಮರಣೋತ್ತರ ಪರೀಕ್ಷೆ ಗುರುವಾರ ಎಚ್.ಡಿ.ಕೋಟೆ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರ ಸಮ್ಮುಖದಲ್ಲಿ ನಡೆಯಿತು. ನಗರದ ಮೈಸೂರು ಮೆಡಿಕಲ್ ಕಾಲೇಜಿನ ಶವಾಗಾರದಲ್ಲಿ ನ್ಯಾಯಾಧೀಶ ಎಸ್.ಎಂ. ಸುರೇಶ್, ಡಿವೈಎಸ್ಪಿ ರವಿ ಪ್ರಸಾದ್ ಹಾಗೂ ಮೃತ ಕುಟುಂಬ ಸದಸ್ಯರ ಸಮ್ಮುಖದಲ್ಲಿ ವೈದ್ಯಾಧಿಕಾರಿಗಳು ಆದಿವಾಸಿ ಜೇನುಕುರುಬ ಜನಾಂಗದ ಕರಿಯಪ್ಪ ಶರೀರದ ಮರಣೋತ್ತರ ಪರೀಕ್ಷೆ ನಡೆಸಿದರು.
ಇದೇ ವೇಳೆ ನ್ಯಾಯಾಧೀಶ ಎಸ್.ಎಂ. ಸುರೇಶ್ ಅವರು, ಮೃತರ ಮಕ್ಕಳಾದ ಸತೀಶ್, ಸವಿತಾ, ಕುಮಾರಿ ಹಾಗೂ ಹೊಸಹಳ್ಳಿ ಹಾಡಿ ಮುಖಂಡರಿಂದ ಹೇಳಿಕೆ ಹಾಗೂ ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರಿಂದ ಮಾಹಿತಿ ಪಡೆದುಕೊಂಡು ಮೃತ ಕುಟುಂಬಕ್ಕೆ ಸಾಂತ್ವನ ಹೇಳಿ ತೆರಳಿದರು.