ಜಿಲ್ಲೆ

ಪಾಳುಮನೆಯಲ್ಲಿ ಐವರ ಅಸ್ಥಿಪಂಜರ ಪತ್ತೆ ಪ್ರಕರಣ: ವಿಧಿವಿಜ್ಞಾನ ಪ್ರಯೋಗಾಲಯ ತಜ್ಞ ಡಾ.ದಿನೇಶ್​ರಾವ್ ಹೇಳಿದ್ದಿಷ್ಟು...

ಚಿತ್ರದುರ್ಗ: ಪರಿಣತ ತಜ್ಞರ ನೆರವಿನೊಂದಿಗೆ ವೈಜ್ಞಾನಿಕ ವಿಶ್ಲೇಷಣೆ ಮೂಲಕ ನಗರದ ಜೈಲುರಸ್ತೆಯ ಪಾಳು ಮನೆಯಲ್ಲಿ ಐವರ ನಿಗೂಢ ಸಾವಿನ ರಹಸ್ಯ ಭೇದಿಸಲು ಸಾಧ್ಯವಾಗಲಿದೆ ಎಂದು ಬೆಂ ಗಳೂರು ಮೂಲದ, ಜಮ್ಮು ಎಐಐಎಂಎಸ್​ನ ವಿಧಿವಿಜ್ಞಾನ ಪ್ರಯೋಗಾಲಯದ ಎಚ್​ಒಡಿ ಡಾ.ದಿನೇಶ್ ರಾವ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇಲ್ಲಿ ಸಾವು ಸಂಭವಿಸಿ ಅಂದಾಜು ನಾಲ್ಕು ವರ್ಷಗಳಾಗಿವೆ. ಇದರ ರಹಸ್ಯ ಭೇದಿಸುವುದು ಸಹಜವಾಗಿಯೇ ತನಿಖಾಧಿಕಾರಿಗಳಿಗೆ ದೊಡ್ಡ ಸವಾಲಾಗಿರುತ್ತದೆ. ಅಸ್ಥಿಪಂಜರಗಳ ಗುರುತು ಪತ್ತೆ, ವಯಸ್ಸು, ಸಾವಿನ ಕಾಲಾವಧಿ ತಿಳಿಯುವ ಸಾಧ್ಯತೆಗಳ ಕುರಿತಂತೆ ಡಾ.ದಿನೇಶ್ ರಾವ್ ಅನಿಸಿಕೆ ಹಂಚಿಕೊಂಡಿದ್ದಾರೆ.

ಅನುಭವಿ, ಪರಿಣತ ವೈದ್ಯರು ಹಾಗೂ ವಿಧಿವಿಜ್ಞಾನ ಪ್ರಯೋಗಾಲಯ ತಜ್ಞರ ತಂಡ ಪ್ರಕರಣವನ್ನು ವೈಜ್ಞಾನಿಕ ವಿಶ್ಲೇಷಣೆಗೆ ಪರಿಪೂರ್ಣವಾಗಿ ಒಳಪಡಿಸುವ ಮೂಲಕ ಸಾವಿನ ರಹಸ್ಯ ಬಿಡಿಸಬೇಕಿದೆ. ಒಂದಿಷ್ಟು ವ್ಯತ್ಯಾಸಗಳಾದರೂ ಪ್ರಕರಣದ ನಿಗೂಢತೆ ಅನಾವರಣಕ್ಕೆ ಧಕ್ಕೆಯಾಗುವ ಸಾಧ್ಯತೆ ಅಧಿಕವಾಗಿರುತ್ತದೆ. ಪೋಸ್ಟ್​ಮಾರ್ಟಮ್ ವರದಿಯಲ್ಲಿ ಸಾವಿನ ಕಾರಣ ತಿಳಿಯಲು ಸಾಧ್ಯವಾಗಬಹುದು. ಮೂಳೆ ಪರೀಕ್ಷೆಯಲ್ಲಿ ಕೀಟನಾಶಕದಂಥ ಕಠಿಣ ವಿಷ ಅಥವಾ ಹತ್ಯೆಗೆ ಮಾರಕಾಸ್ತ್ರಗಳ ಬಳಕೆಯಾಗಿದ್ದರೆ ಪಿಎಂ ವರದಿಯಲ್ಲಿ ತಿಳಿಯಲಿದೆ. ಸೈನೈಡ್ ಬಳಕೆಯಾಗಿದ್ದರೆ ಪ್ರಕರಣವನ್ನು ಬೇರೆ ಅಯಾಮದಿಂದಲೂ ಪರಿಶೀಲಿಸಬೇಕಾಗುತ್ತದೆ ಹಾಗೂ ಪರೀಕ್ಷೆಗೆ ಒಳಪಡಿಸಬೇಕಾಗುತ್ತದೆ ಎಂದು ತಿಳಿಸಿದರು.

ಡಿಎನ್​ಎ ಟೆಸ್ಟ್: ಮೂಳೆ, ಹಲ್ಲುಗಳ ಪರೀಕ್ಷೆಯಿಂದ ಮೃತರ ಅಂದಾಜು ವಯಸ್ಸು, ಹೆಣ್ಣು ಅಥವಾ ಗಂಡು, ಎಷ್ಟು ದಿನಗಳ ಹಿಂದೆ ಮೃತಪಟ್ಟಿರಬಹುದೆಂದು ಹೇಳಲು ಸಾಧ್ಯ. ಮೃತರ ಗುರುತು ಪತ್ತೆಗೆ ಡಿಎನ್​ಎ ಟೆಸ್ಟ್ ಅಗತ್ಯ. ಇದಕ್ಕಾಗಿ ಮೂಳೆ ಹಾಗೂ ಸಂಬಂಧಿಕರ ರಕ್ತ ಮಾದರಿ ಸಂಗ್ರಹಿಸಬೇಕಾಗುತ್ತದೆ. ಅಲ್ಲಿ ದೊರೆತ ರಿಸ್ಟಲ್ ಮೂಲಕ ದಂಪತಿ, ಮಕ್ಕಳ ಗುರುತು ತಿಳಿಯಬಹುದಾಗಿದ್ದು, ಪೂರಕ ಸೂಕ್ತ ಸಾಕ್ಷ್ಯಾಧಾರಗಳನ್ನು ಪರಿಣತರು ಸಂಗ್ರಹಿಸಿ ವೈಜ್ಞಾನಿಕವಾಗಿ ವಿಶ್ಲೇಷಣೆಗೆ ಒಳಪಡಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ತನಿಖಾ ತಂಡ ಬಯಸಿದರೆ ಅಗತ್ಯ ನೆರವು ನೀಡಲು ತಾವು ಸಿದ್ಧ. ಇಂಥ ನೂರಾರು ಪ್ರಕರಣಗಳು ಹೊರ ದೇಶಗಳಲ್ಲೂ ಆಗಿದೆ. ಕೆಲವು ಪ್ರಕರಣ ಬೆಂಗಳೂರಲ್ಲಿ ಆಗಿರುವ ಉದಾಹರಣೆಗಳಿವೆ ಎಂದು ಡಾ.ದಿನೇಶ್ ರಾವ್ ಹೇಳಿದರು.

ಮೆಡಿಕಲ್ ಆಫೀಸರ್ ಹೇಳಬೇಕು: ಮೃತರ ಗುರುತು ಇತ್ಯಾದಿ ಮಾಹಿತಿಗೆ ಡಿಎನ್​ಎ ಟೆಸ್ಟ್ ಅನಿವಾರ್ಯ. ಮೂಳೆಗಳ ಸ್ಯಾಂಪಲ್ ಅನ್ನು ಬೆಂಗಳೂರಿಗೆ ಕಳಿಸುವ ಸಾಧ್ಯತೆ ಇದೆ. ಸಾಕಷ್ಟು ಮೆಟಿರಿಯಲ್ಸ್ ಎವಿಡೆನ್ಸ್ ಗಳನ್ನು ಕಲೆ ಹಾಕಲಾಗಿದೆ. ಎಫ್​ಎಸ್​ಎಲ್ ವರದಿ ಬಳಿಕ ಮೆಡಿಕಲ್ ಆಫೀಸರ್ ಸಾವಿನ ಕಾರಣವನ್ನು ಅಂತಿಮವಾಗಿ ತಿಳಿಸಬೇಕಾಗುತ್ತದೆ ಎಂದು ದಾವಣಗೆರೆ ವಿಧಿ ವಿಜ್ಞಾನ ಪ್ರಯೋಗಾಲಯದ ಮೂಲಗಳು ತಿಳಿಸಿವೆ.

ಮುಕ್ತಿಧಾಮದಲ್ಲಿ ಅಂತಿಮ ಸಂಸ್ಕಾರ

ಚಿತ್ರದುರ್ಗದ ಜೆಎಂಐ ಕ್ಯಾಂಪಸ್ ಶ್ರೀ ಬಸವೇಶ್ವರ ಮೆಡಿಕಲ್ ಕಾಲೇಜು ಶವಾಗಾರದಲ್ಲಿ ಶನಿವಾರ ಐದು ಅಸ್ಥಿ ಪಂಜರಗಳ ಮರಣೋತ್ತರ ಪರೀಕ್ಷೆ ನಡೆಯಿತು. ಪಾಳುಬಿದ್ದ ಮನೆಯಲ್ಲಿ ವಾಸವಿದ್ದ ಎಸ್.ಕೆ.ಜಗನ್ನಾಥ ರೆಡ್ಡಿ, ಪತ್ನಿ ಎಂ.ಆರ್.ಪ್ರೇಮಾಲೀಲಾ, ಪುತ್ರಿ ಎನ್.ಜೆ.ತ್ರಿವೇಣಿ, ಪುತ್ರರಾದ ಎನ್.ಜೆ.ಕೃಷ್ಣ ಹಾಗೂ ಎನ್.ಜೆ.ನರೇಂದ್ರ ಅವರ ಸಂಬಂಧಿಕರಿಗೆ ಅಸ್ಥಿ ಪಂಜರಗಳನ್ನು ಹಸ್ತಾಂತರಿಸಲಾಯಿತು. ನಂತರ ಜೋಗಿಮಟ್ಟಿ ರಸ್ತೆಯ ಮುಕ್ತಿಧಾಮದಲ್ಲಿ ಅಂತಿಮ ಸಂಸ್ಕಾರ ನಡೆಯಿತು.