ಶಿರಸಿ: ನಮ್ಮ ಅವಧಿಯಲ್ಲಿ ಕೆಲಸಗಾರರನ್ನು ಸಂಸ್ಥೆಗೆ ಕರೆತರುವ ಸಲುವಾಗಿ ವಾಹನದ ಇಂಧನಕ್ಕೆ ನೀಡುವ ದರ ಹೆಚ್ಚಿಸಿ ಸಂಸ್ಥೆಗೆ ಹಾನಿ ಮಾಡಿದ್ದೇವೆ ಎಂದು ಈಗಿನ ಆಡಳಿತ ಮಂಡಳಿ ಪ್ರಕರಣ ದಾಖಲಿಸಿದೆ. ಆದರೆ, ಅಂದು ಆಡಳಿತ ಮಂಡಳಿಯ ಒಪ್ಪಿಗೆ ಪಡೆದೇ ಹಣ ನೀಡಲಾಗಿದ್ದರೂ ಈಗ ದ್ವೇಷದ ಕಾರಣದಿಂದ ದೂರು ನೀಡಿದ್ದಾರೆ ಎಂದು ಟಿಎಸ್‌ಎಸ್ ಮಾಜಿ ಕಾರ್ಯಾಧ್ಯಕ್ಷ ರಾಮಕೃಷ್ಣ ಹೆಗಡೆ ಮತ್ತು ಮಾಜಿ ವ್ಯವಸ್ಥಾಪಕ ರವೀಶ ಹೆಗಡೆ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು, ಸಂಸ್ಥೆಗೆ ಕೆಲಸಗಾರರನ್ನು ಕರೆತರುವ ವಾಹನಗಳ ಹೊರಗುತ್ತಿಗೆ ಶಾಂತಾರಾಮ ಹೆಗಡೆ ಅವರು ಅಧ್ಯಕ್ಷರಾಗಿದ್ದ ವೇಳೆ 2011ರಲ್ಲಿಯೇ ಪ್ರಾರಂಭಗೊಂಡಿದೆ. ನಂತರ ಹಂತ ಹಂತವಾಗಿ ಸಂಘದಿಂದ ವಾಹನ ಖರೀದಿ ಮತ್ತು ಬದಲಾಯಿಸುವ ನಿಧಿಯನ್ನು ಪ್ರಾರಂಭಿಸಿ ಈ ವಾಹನಗಳನ್ನು ಸಂಘದ ಸುಪರ್ದಿಗೆ 2022ರಲ್ಲಿ ಪಡೆಯಲಾಗಿತ್ತು. ತೈಲ ಬೆಲೆ ಏರಿಕೆ ಹಿನ್ನೆಲೆಯಲ್ಲಿ 5 ಟೆಂಪೋಗಳಿಗೆ ಪ್ರತಿ ತಿಂಗಳು 8 ಸಾವಿರ ರೂ. ಹೆಚ್ಚುವರಿಯಾಗಿ ನೀಡಲಾಗಿದೆ. ಆದರೆ, ಈಗಿನ ಆಡಳಿತ ಮಂಡಳಿ ಕೇವಲ ನಮ್ಮಿಬ್ಬರ ಮೇಲೆ ದೂರು ದಾಖಲಿಸಿ ಹೆಚ್ಚುವರಿ ಹಣ ನೀಡಿದ್ದೇವೆ ಎಂದು ಆರೋಪಿಸಿದೆ ಎಂದರು.
ನಮ್ಮ ಅವಧಿಯಲ್ಲಿ ಪಾರದರ್ಶಕವಾಗಿ ನಾವು ಆಡಳಿತ ನಡೆಸಿಕೊಂಡು ಬಂದಿದ್ದೇವೆ. ಆದರೆ, ಈಗಿನ ಆಡಳಿತ ಮಂಡಳಿಯ ಯಾವುದೇ ಸಭೆಯ ನಡಾವಳಿ ಕೇಳಿದರೂ ಲಿಖಿತ ರೂಪದಲ್ಲಿ ನೀಡಲು ನಿರಾಕರಿಸುತ್ತಿದೆ ಎಂದು ಆರೋಪಿಸಿದರು.
ನಮ್ಮ ಅವಧಿಯಲ್ಲಿ ಶುಂಠಿ ಖರೀದಿ ಮಾಡಿದ್ದಕ್ಕೆ ಈಗಿನ ಆಡಳಿತ ಮಂಡಳಿ ಪೊಲೀಸ್ ದೂರಿನಲ್ಲಿ ಉಲ್ಲೇಖಿಸಿದೆ. 2005ರಲ್ಲಿ ನಮ್ಮ ಅವಧಿಯಲ್ಲಿ ರೈತರಿಂದ ಶುಂಠಿ ಖರೀದಿಸಿದ್ದು ನಿಜ. ಅಡಕೆ ಬೆಳೆಗಾರರು ಬೆಳೆದ ಶುಂಠಿಯನ್ನು ನಾವು ಖರೀದಿಸಿದ್ದೆವು. ಆದರೆ, ಅಕಾಲಿಕ ಮಳೆಯಿಂದಾಗಿ ಶುಂಠಿ ಸಂಸ್ಕರಣೆ ಗುಣಮಟ್ಟದಲ್ಲಿ ಆಗದೇ ಹಾನಿ ಅನುಭವಿಸಿದ್ದೆವು.
ಈಗಿನ ಆಡಳಿತ ಮಂಡಳಿ ಜೋಳ ಖರೀದಿಸಿ ಖಾಸಗಿ ಫ್ಯಾಕ್ಟರಿಯೊಂದಕ್ಕೆ ಪೂರೈಸುತ್ತಿದೆ. ನಾವು ರೈತರಿಂದ ಖರೀದಿ ಮಾಡಿದರೆ ನಮ್ಮ ಮೇಲೆ ಪೊಲೀಸ್ ಕೇಸ್, ಈಗಿನ ಆಡಳಿತ ಮಂಡಳಿ ಜೋಳ ಖರೀದಿ ಮಾಡಿದರೆ ಅದು ಬಿಜಿನೆಸ್…ಈ ರೀತಿಯ ದ್ವಂದ್ವವನ್ನು ಈಗಿನ ಆಡಳಿತ ಮಂಡಳಿ ಮಾಡುತ್ತಿದೆ ಎಂದು ರವೀಶ ಹೆಗಡೆ ಆರೋಪಿಸಿದರು.