ಬೆಂಗಳೂರು: ಪ್ರಯಾಣಿಕರ ಹತ್ತಿಸಿಕೊಳ್ಳಲು ನಿಂತಿದ್ದ ಬಿಎಂಟಿಸಿ ಬಸ್‌ಗೆ ಹಿಂದಿನಿಂದ ವೇಗವಾಗಿ ಬಂದ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ದಿಢೀರ್ ಬೆಂಕಿ ಹೊತ್ತಿಕೊಂಡು ಕಾರು ಸಂಪೂರ್ಣ ಬೆಂಕಿಗಾಹುತಿಯಾಗಿದ್ದು, ಇದರಿಂದ ಬಿಎಂಟಿಸಿ ಬಸ್ಸಿನ ಹಿಂಭಾಗಕ್ಕೆ ಬೆಂಕಿ ತಗುಲಿ ಹಾನಿಯಾಗಿದೆ.
ಸೋಮವಾರ ಬೆಳಗ್ಗೆ ನಾಗರಬಾವಿ ಜಂಕ್ಷನ್ ಸಮೀಪದ ಸುವರ್ಣ ಲೇಔಟ್‌ನ ಬಸ್ ನಿಲ್ದಾಣದಲ್ಲಿ
ಈ ಘಟನೆ ನಡೆದಿದ್ದು, ಅದೃಷ್ಟ ವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.
ಘಟನೆಯಲ್ಲಿ ಕಾರು ಚಾಲಕ ಬೊಮ್ಮಸಂದ್ರದ ಲೋಕೇಶ್ ಆತನ ಪತ್ನಿ ಹಾಗೂ ಮಗಳಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಣಾಪಾಯದಿಂದ ಪಾರಾಗಿದ್ದಾರೆ. ಇನ್ನು ಬಿಎಂಟಿಸಿ ಬಸ್‌ನ ಹಿಂಭಾಗ ಬೆಂಕಿಯಿಂದ ಸುಟ್ಟು ಹೋಗಿದೆ. ಬಿಎಂಟಿಸಿ ಬಸ್ ಚಾಲಕನ ಸಮಯ ಪ್ರಜ್ಞೆಯಿಂದ ಭಾರೀ ಅನಾಹುತ ತಪ್ಪಿದೆ. ಬಸ್‌ನ ಚಾಲಕ ನೀಡಿದ ದೂರಿನ ಮೇರೆಗೆ ಕಾರು ಚಾಲಕ ಲೋಕೇಶ್ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಡಿಕ್ಕಿಯ ರಭಸಕ್ಕೆ ಹೊತ್ತಿಕೊಂಡ ಬೆಂಕಿ:
ಯಶವಂತಪುರ ಕಡೆಯಿಂದ ರಿಂಗ್ ರಸ್ತೆಯಲ್ಲಿ ನಾಯಂಡಹಳ್ಳಿ ಕಡೆಗೆ ತೆರಳುತ್ತಿದ್ದ ಬಿಎಂಟಿಸಿ ಬಸ್ ಬೆಳಗ್ಗೆ ೯ ಗಂಟೆ ಸುಮಾರಿಗೆ ನಾಗರಬಾವಿ ಜಂಕ್ಷನ್ ಸಮೀಪದ ಸುವರ್ಣ ಲೇಔಟ್ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳಲು ನಿಂತಿದೆ. ಈ ವೇಳೆ ಹಿಂದಿನಿಂದ ವೇಗವಾಗಿ ಬಂದ ಕಾರೊಂದು ಏಕಾಏಕಿ ನಿಂತಿದ್ದ ಬಸ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಾರಿನ ಇಂಜಿನ್ ಭಾಗದಲ್ಲಿ ಏಕಾಏಕಿ ಬೆಂಕಿ ಹೊತ್ತಿಕೊಂಡಿದೆ. ತಕ್ಷಣ ಸ್ಥಳೀಯರು ನೆರವಿಗೆ ಧಾವಿಸಿ ಕಾರು ಚಾಲಕ ಲೋಕೇಶ್, ಆತನ ಪತ್ನಿ ಮತ್ತು ಮಗಳನ್ನು ಸುರಕ್ಷಿತವಾಗಿ ಹೊರಗೆ ಕರೆತಂದು, ಆಸ್ಪತ್ರೆಗೆ ಕಳುಹಿಸಿದ್ದಾರೆ.
ಚಾಲಕನ ಸಮಯ ಪ್ರಜ್ಞೆಯಿಂದ ಉಳಿದ ಬಸ್:
ಡಿಕ್ಕಿಯ ರಭಸಕ್ಕೆ ಬಸ್ ಹಿಂಭಾಗಕ್ಕೆ ಕಾರಿನ ಇಂಜಿನ್ ಭಾಗ ಅಂಟಿಕೊಂಡು ಬಸ್‌ಗೂ ಬೆಂಕಿ ಆವರಿಸಿದೆ. ಅಷ್ಟರಲ್ಲಿ ಚಾಲಕ ಮತ್ತು ನಿರ್ವಾಹಕ ಬಸ್‌ನಲ್ಲಿದ್ದ ಪ್ರಯಾಣಿಕರನ್ನು ಮುಂದಿನ ದ್ವಾರದ ಮೂಲಕ ಕೆಳಗೆ ಇಳಿಸಿದ್ದಾರೆ. ಬಳಿಕ ಬಸ್ಸನ್ನು ಮುಂದಕ್ಕೆ ಚಲಾಯಿಸಲು ಮುಂದಾದಾಗ ಬಸ್‌ಗೆ ಅಂಟಿಕೊಂಡಿದ್ದ ಕಾರು ಸಹ ಮುಂದೆ ಬಂದಿದೆ. ಬಳಿಕ ಚಾಲಕ ಸಮಯ ಪ್ರಜ್ಞೆ ಮೆರೆದು ಬಸ್ ಅನ್ನು ರಸ್ತೆ ವಿಭಜಕದ ಮೇಲೆ ಕೊಂಚ ಚಲಾಯಿಸಿದ ಪರಿಣಾಮ ಕಾರು, ಬಸ್‌ನಿಂದ ಬೇರ್ಪಟ್ಟಿದೆ. ಇಲ್ಲವಾಗಿದ್ದರೇ, ಇಡೀ ಬಸ್ ಬೆಂಕಿಗಾಹುತಿಯಾಗುತ್ತಿತ್ತು. ಕಾರಿನಿಂದ ಬಸ್ ಬೇರ್ಪಟ್ಟ ನಂತರ ಸಾರ್ವಜನಿಕರು ಹೋಟೆಲ್‌ವೊಂದರಿಂದ ಬಕೆಟ್‌ಗಳಲ್ಲಿ ನೀರು ತಂದು ಎರಚಿ ಬಳಿಕ ಬೆಂಕಿ ನಂದಿಸುವ ಸಾಧನದಿಂದ ಬೆಂಕಿ ಆರಿಸಿದ್ದರು. ಅಷ್ಟರಲ್ಲಿ ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಕಾರಿನ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಘಟನೆಗೆ ಕಾರು ಚಾಲಕನ ಅತಿವೇಗ ಹಾಗೂ ನಿರ್ಲಕ್ಷ್ಯದ ಚಾಲನೆಯೇ ಕಾರಣ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ. ಈ ಸಂಬಂಧ ಬ್ಯಾಟರಾಯನಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.