ನಾಪೋಕ್ಲು: ಸಮೀಪದ ಬೆಟ್ಟಗೇರಿಯ ತಲೂರು ಜಂಕ್ಷನ್ ಬಳಿ ಚಾಲಕನ ನಿಯಂತ್ರಣ ತಪ್ಪಿ ಪ್ರಪಾತಕ್ಕೆ ಕಾರು ಉರುಳಿ ಬಿದ್ದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿಯಾಗಿಲ್ಲ. ಮೈಸೂರು ಜಿಲ್ಲೆಯ ತಿ.ನರಸೀಪುರದ ನಿವಾಸಿ ನಾಗೇಂದ್ರ ಅವರು ತಮ್ಮ ಕಾರಿನಲ್ಲಿ ಭಾನುವಾರ ಭಾಗಮಂಡಲ ಕಡೆಯಿಂದ ಮಡಿಕೇರಿ ಕಡೆ ತೆರಳುತ್ತಿದ್ದ ವೇಳೆ ಗುಂಡಿ ತಪ್ಪಿಸಲು ಹೋಗಿ ನಿಯಂತ್ರಣ ತಪ್ಪಿದೆ. ಪರಿಣಾಮ ಕಾರು ಪ್ರಪಾತಕ್ಕೆ ಉರುಳಿಬಿದ್ದಿದೆ. ಕಾರಿನಲ್ಲಿದ್ದ ನಾಗೇಂದ್ರ ಅವರ ಪತ್ನಿ ಮತ್ತು ಮಗುವಿಗೆ ಸಣ್ಣಪುಟ್ಟ ಗಾಯಗಳಾಗಿವೆ. ನಂತರ 112 ಪೊಲೀಸರು ಹಾಗೂ ಸ್ಥಳೀಯರ ಸಹಕಾರದಿಂದ ಜಖಂಗೊಂಡ ಕಾರನ್ನು ತೆರವುಗೊಳಿಸಲಾಯಿತು. ಈ ಸಂಬಂಧ ಯಾವುದೇ ಪ್ರಕರಣ ದಾಖಲಾಗಿಲ್ಲ.