ಹಾನಗಲ್ಲ: ಧರ್ವ ಕಾಲುವೆ ಮೂಲಕ ತಮ್ಮ ಜಮೀನುಗಳು ನೀರಾವರಿಗೊಳಪಡಲಿವೆ ಎಂಬ ಆಶಾಭಾವ ಹೊಂದಿದ್ದ ರೈತರಿಗೆ ತೀವ್ರ ನಿರಾಶೆ ಉಂಟಾಗಿದೆ. ಅತ್ತ ನೀರೂ ಇಲ್ಲ, ಇತ್ತ ಜಮೀನೂ ಇಲ್ಲದಂತ ಸ್ಥಿತಿ ತಾಲೂಕಿನ ಇನಾಂಯಲ್ಲಾಪುರ ರೈತರದ್ದಾಗಿದೆ.
ಮುಂಡಗೋಡ ತಾಲೂಕಿನಲ್ಲಿರುವ ಧರ್ವ ಜಲಾಶಯದ ನೀರು ಹಾನಗಲ್ಲ ತಾಲೂಕಿನ 18 ಸಾವಿರ ಹೆಕ್ಟೇರ್ ಪ್ರದೇಶದ ಕೃಷಿಗೆ ಬಳಕೆಯಾಗುತ್ತದೆ. ಜಲಾಶಯದಿಂದ 45 ಕಿ.ಮೀ. ವರೆಗೆ ಕಾಲುವೆ ನಿರ್ವಿುಸಲಾಗಿದ್ದು, ತಾಲೂಕಿನ ನೂರಾರು ಗ್ರಾಮಗಳ ರೈತರ ಆಶಾಕಿರಣವಾಗಿದೆ.
ಅಕ್ಕಿಆಲೂರು ಗ್ರಾಮದಿಂದ ಮುಂದಿನ ಕಲ್ಲಾಪುರ, ಇನಾಂಯಲ್ಲಾಪುರ ಗ್ರಾಮಗಳಿಗೆ ತೆರಳುವ ಮಾರ್ಗದಲ್ಲಿ ಕಾಲುವೆಯ ಸುಮಾರು 1.2 ಕಿ.ಮೀ. ಉದ್ದಕ್ಕೂ ಹೂಳು ತುಂಬಿಕೊಂಡಿದೆ. ಕಳೆದ ಎರಡು ವರ್ಷದಿಂದ ಅಕ್ಕಿಆಲೂರಿನ ಮುಂದಿನ ಗ್ರಾಮಗಳಾದ ಕಲ್ಲಾಪುರ, ಇನಾಂಯಲ್ಲಾಪುರ, ಶ್ಯಾಡಗುಪ್ಪಿ, ಅರಿಷಣಗುಪ್ಪ ಗ್ರಾಮಗಳ ನೂರಾರು ಎಕರೆಗೆ ಹನಿ ನೀರೂ ಹರಿದಿಲ್ಲ. ಇದನ್ನು ನೀರಾವರಿ, ಕಂದಾಯ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತರಲಾಗಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.
ತಾಲೂಕಿನ ಕಲ್ಲಾಪುರ, ಇನಾಂಯಲ್ಲಾಪುರ, ಶ್ಯಾಡಗುಪ್ಪಿ, ಅರಿಷಣಗುಪ್ಪಿ ಗ್ರಾಮಗಳ ರೈತರು ಧರ್ವ ಕಾಲುವೆಯ ನೀರನ್ನು ನಂಬಿಕೊಂಡು ಭತ್ತದ ನಾಟಿ ಕೈಗೊಂಡಿದ್ದಾರೆ. ಆದರೆ, ಕಾಲುವೆಯ ಹೂಳು ತೆರವುಗೊಳಿಸದಿದ್ದರೆ ಅಲ್ಪ ಪ್ರಮಾಣದ ನೀರೂ ಹರಿಯಲಾರದು ಎಂಬುದು ಈ ಭಾಗದ ರೈತರ ಆತಂಕಕ್ಕೆ ಕಾರಣವಾಗಿದೆ. ಕಾಲುವೆ ನಿರ್ವಣದ ಸಂದರ್ಭದಲ್ಲಿ ಸರ್ಕಾರದಿಂದ ಯಾವುದೇ ಪರಿಹಾರಕ್ಕೆ ಆಸೆ ಪಡದೇ ಈ ಕಾಮಗಾರಿಗಾಗಿ ಬೆಲೆಬಾಳುವ ಭೂಮಿ ನೀಡಿದ ರೈತರಿಗೆ ನೀರೂ ಇಲ್ಲ, ಇತ್ತ ಕೃಷಿ ಭೂಮಿಯೂ ಇಲ್ಲದಂತಾಗಿದೆ. ಇದೇ ನೀರಿನ ಆಸರೆಯಲ್ಲಿ ಅಡಕೆ, ಬಾಳೆ ತೋಟಗಳನ್ನು ಬೆಳೆಸಲಾಗಿದ್ದು, ಕಳೆದೆರಡು ವರ್ಷಗಳಿಂದ ಧರ್ವ ಕಾಲುವೆ ನೀರು ಅಚ್ಚುಕಟ್ಟು ಪ್ರದೇಶದ ರೈತರಿಗೆ ಮರೀಚಿಕೆಯಾಗಿದೆ.
ಕಳೆದ ಹತ್ತು ವರ್ಷಗಳ ಹಿಂದೆ ಈ ಕಾಲುವೆಯಿಂದ ಬೇಸಿಗೆ ಅವಧಿಯಲ್ಲೂ ರೈತರ ಬೆಳೆಗಳಿಗೆ ನೀರು ಹರಿಸಲಾಗುತ್ತಿತ್ತು. ಇತ್ತೀಚಿನ ವರ್ಷಗಳಲ್ಲಿ ಕಾಲುವೆಯಲ್ಲಿ ಹೂಳು ಹೆಚ್ಚಳವಾಗುತ್ತಿದೆ. 2019ರಿಂದ ಈಚೆಗೆ ಅತಿವೃಷ್ಟಿ ಸಂದರ್ಭದಲ್ಲಿ ಕಾಲುವೆಗೆ ಹೆಚ್ಚು ನೀರು ಹರಿದು ಬಂದಿರುವುದರಿಂದ ಹೂಳು ತುಂಬಿಕೊಂಡಿದೆ ಎನ್ನಲಾಗುತ್ತಿದೆ. ಆದರೆ, ಕಾಲ-ಕಾಲಕ್ಕೆ ಕಾಲುವೆ ನಿರ್ವಹಣೆಗೆ ಅನುದಾನದ ಕೊರತೆ ಮುಂದಿಟ್ಟು ನೀರಾವರಿ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದರಿಂದ ಧರ್ವ ಜಲಾಶಯದ ನೀರು ಲಭ್ಯವಾಗುತ್ತಿಲ್ಲ ಎಂಬುದು ರೈತರ ಆರೋಪವಾಗಿದೆ.
ನೀರಾವರಿ ಇಲಾಖೆ ಮಳೆಗಾಲದ ಪೂರ್ವದಲ್ಲಿ ಕಾಲುವೆಯನ್ನು ದುರಸ್ತಿಗೊಳಿಸಿ, ಹೂಳು ತೆಗೆಸಿ ನೀರು ಸರಾಗವಾಗಿ ಹರಿಯುವಂತೆ ಕ್ರಮ ಕೈಗೊಳ್ಳಬೇಕಾಗಿತ್ತು. ಜಿಲ್ಲಾಡಳಿತ ರೈತರಿಗೆ ನೀರೊದಗಿಸುವ ಕಾಮಗಾರಿಗಳ ಬಗ್ಗೆ ನಿರ್ಲಕ್ಷ್ಯ ತೋರುತ್ತಿರುವುದು ಕಂಡು ಬರುತ್ತಿದೆ. ಅಧಿಕಾರಿಗಳು ಕೂಡಲೇ ಕಾಲುವೆ ಹೂಳು ತೆಗೆದು ನಂತರ ನೀರು ಹರಿಸಿದರೆ ಎಲ್ಲ ಭಾಗದ ರೈತರಿಗೂ ನೀರು ತಲುಪಿಸಲು ಸಾಧ್ಯವಾಗುತ್ತದೆ. - ರುದ್ರಪ್ಪ ಹಣ್ಣಿ ಇನಾಂಯಲ್ಲಾಪುರ ರೈತ
2019ರಿಂದ ಈಚೆಗೆ ನೀರಾವರಿ ಇಲಾಖೆಗೆ ಸರ್ಕಾರದ ಅನುದಾನ ಬರುತ್ತಿಲ್ಲ. ಕಳೆದ ಎರಡು ವರ್ಷಗಳಿಂದ ಸ್ಥಳೀಯ ಗುತ್ತಿಗೆದಾರರ ಮನವೊಲಿಸಿ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ. ಆದರೆ, ಈ ಕಾಮಗಾರಿಗಳ ಹಣವೂ ಬಿಡುಗಡೆಯಾಗಿಲ್ಲ. ಧರ್ವ ಕಾಲುವೆ ದುರಸ್ತಿ, ಹೂಳು ತೆಗೆಸಲು ಈಗ ಅನುದಾನವಿಲ್ಲದ್ದರಿಂದ ಕಾಮಗಾರಿ ಕೈಗೊಳ್ಳಲಾಗುತ್ತಿಲ್ಲ. - ಪ್ರಲ್ಹಾದ ಶೆಟ್ಟಿ ಎಇಇ ನೀರಾವರಿ ಇಲಾಖೆ ಹಾನಗಲ್ಲ
ಧರ್ವ ಜಲಾಶಯದಿಂದ ಕಾಲುವೆ ಮೂಲಕ ಅಚ್ಚುಕಟ್ಟು ಪ್ರದೇಶದ ರೈತರ ಕೃಷಿ ಭೂಮಿಗೆ ನೀರು ಹರಿಸುವ ಕುರಿತು ರೈತರ ಸಭೆಯನ್ನು ಆ. 19ರಂದು ಬೆಳಗ್ಗೆ 10 ಗಂಟೆಗೆ ಕರೆಯಲಾಗಿದೆ. ಈ ಕುರಿತು ಪ್ರಕಟಣೆ ನೀಡಿರುವ ನೀರಾವರಿ ಇಲಾಖೆ ಎಇಇ ಪ್ರಲ್ಹಾದ ಶೆಟ್ಟಿ, ಧರ್ವ ಜಲಾಶಯದ ಅಡಿಯಲ್ಲಿನ ತಾಲೂಕಿನ ಅಚ್ಚುಕಟ್ಟು ಪ್ರದೇಶದ ರೈತರ ಕೃಷಿ ಭೂಮಿಗೆ ನೀರು ಬಿಡುವ ಕುರಿತಂತೆ ರೈತರ ಅಭಿಪ್ರಾಯ ಸಂಗ್ರಹಿಸಲು ಸವಣೂರು ಉಪವಿಭಾಗಾಧಿಕಾರಿ ಮಮ್ಹದ್ ಕೀಜರ್ ಅಧ್ಯಕ್ಷತೆಯಲ್ಲಿ ಸಭೆ ಕರೆಯಲಾಗಿದೆ. ತಹಸೀಲ್ದಾರ್ ರವಿ ಕೊರವರ ಉಪಸ್ಥಿತಿ ಇರಲಿದ್ದು, ರೈತ ಸಂಘಟನೆಗಳ ಮುಖಂಡರು, ಅಚ್ಚುಕಟ್ಟು ಪ್ರದೇಶದ ರೈತರು ಭಾಗವಹಿಸಬೇಕು ಎಂದು ಪ್ರಲ್ಹಾದ ಶೆಟ್ಟಿ ತಿಳಿಸಿದ್ದಾರೆ.