ಮೈಸೂರು: ನಗರದ ಜೆಎಲ್‌ಬಿ ರಸ್ತೆಯ ದಾಸಪ್ಪ ವೃತ್ತದಲ್ಲಿ ಕಾರಿನಲ್ಲಿ ತೆರಳುತ್ತಿದ್ದ ಉದ್ಯಮಿಯನ್ನು ಅಡ್ಡಗಟ್ಟಿದ ಕಿಡಿಗೇಡಿ ಯುವಕನೊಬ್ಬ ಅಪಘಾತದ ನೆಪದಲ್ಲಿ ಹಣ ವಸೂಲು ಮಾಡಲು ಯತ್ನಿಸಿದ್ದಾನೆ.
ಭಾನುವಾರ ಆಕಾಶವಾಣಿ ವೃತ್ತದಿಂದ ದಾಸಪ್ಪ ವೃತ್ತದ ಕಡೆಗೆ ಕಾರಿನಲ್ಲಿ ತೆರಳುತ್ತಿದ್ದ ಯಾದವಗಿರಿ ನಿವಾಸಿಯಾದ ಉದ್ಯಮಿಯನ್ನು ಸ್ಕೂಟರ್‌ನಲ್ಲಿ ಬಂದು ಯುವಕನೊಬ್ಬ ಅಡ್ಡಗಟ್ಟಿದ್ದಾನೆ. ನಿಮ್ಮ ಕಾರು ಡಿಕ್ಕಿ ಹೊಡೆದಿದ್ದರಿಂದ ನನ್ನ ತಮ್ಮ ಬಿದ್ದು ಗಾಯಗೊಂಡಿದ್ದು, ಆತನಿಗೆ ಚಿಕಿತ್ಸೆ ಕೊಡಿಸಬೇಕಿದೆ ಎಂದು ಹೇಳಿದ ಯುವಕ, ಹಣ ನೀಡಬೇಕು ಎಂದು ಒತ್ತಾಯಿಸಿದ್ದಾನೆ.
ಯುವಕ ವರ್ತನೆಯಿಂದ ಗಲಿಬಿಲಿಗೊಂಡ ಉದ್ಯಮಿ ಅಪಘಾತವಾಗಿರುವ ಕುರಿತು ನನಗೆ ತಿಳಿದಿಲ್ಲ. ಆಸ್ಪತ್ರೆಗೆ ದಾಖಲಿಸೋಣ. ನಾನೂ ಜತೆಗೆ ಬರುತ್ತೇನೆ ಎಂದು ಹೇಳಿದ್ದಾರೆ. ಅದಕ್ಕೆ ಆ ಯುವಕ, ನೀವು ಬರುವುದು ಬೇಡ, ಅಲ್ಲಿ ಜನ ಸೇರಿದ್ದಾರೆ. ನೀವು ಬಂದರೆ ಗಲಾಟೆಯಾಗಲಿದೆ.
30 ಸಾವಿರ ರೂ. ನೀಡಿ ನಾನೆ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತೇನೆ. ಇಲ್ಲದಿದ್ದರೆ ಪೊಲೀಸರಿಗೆ ದೂರು ಕೊಡುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ.
ಬಳಿಕ ಉದ್ಯಮಿ ಶೃಂಗಾರ ಹೋಟೆಲ್ ಬಳಿ ಬಂದರೆ ಹಣ ನೀಡುವುದಾಗಿ ಹೇಳಿ ಮುಂದೆ ಸಾಗಿದ್ದಾರೆ. ಅಷ್ಟರಲ್ಲಿ ಬೈಕ್ ಸವಾರ ಕೂಡ ಹಣ ಸಿಗದೆ ಇರುವುದಕ್ಕೆ ಸ್ಥಳದಿಂದ ಪರಾರಿಯಾಗಿದ್ದಾನೆ. ಘಟನೆ ಸಂಬಂಧ ದೇವರಾಜ ಠಾಣೆ ಪೊಲೀಸರಿಗೆ ಉದ್ಯಮಿ ಮಾಹಿತಿ ನೀಡಿದ್ದಾರೆ.