ಹಿರೀಸಾವೆ: ಹೋಬಳಿಯ ಜಿನ್ನೇನಹಳ್ಳಿ ಗೇಟ್ ಬಳಿ ಸಾಗುತ್ತಿದ್ದ ಸಾರಿಗೆ ಬಸ್ಸಿಗೆ ಅಡ್ಡಲಾಗಿ ದ್ವಿಚಕ್ರ ವಾಹನ ಬಂದ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿದ ಬಸ್ ರಸ್ತೆ ಬದಿಯ ಮನೆಯತ್ತ ನುಗ್ಗಿದೆ.
ದಿಡಗ ಗ್ರಾಮದಿಂದ ಹಿರೀಸಾವೆಗೆ ಸಾಗುತ್ತಿದ್ದ ಸಾರಿಗೆ ಬಸ್ ಜಿನ್ನೇನಹಳ್ಳಿ ಗೇಟ್ ಸಮೀಪಿಸಿದ ವೇಳೆ ವ್ಯಕ್ತಿಯೊಬ್ಬ ಜಿನ್ನೇನಹಳ್ಳಿ ಗ್ರಾಮದ ಕಡೆಯಿಂದ ಬೈಕ್‌ನಲ್ಲಿ ವೇಗವಾಗಿ ಬಂದು ಹಿರೀಸಾವೆ ಕಡೆಗೆ ತಿರುವು ಪಡೆದು ಮುಖ್ಯರಸ್ತೆಗೆ ನುಗ್ಗಿದ್ದಾನೆ.
ಬಸ್ ಚಾಲಕ ಬ್ರೇಕ್ ಹಾಕಿ ಬಸ್ಸನ್ನು ನಿಯಂತ್ರಿಸಿದರಾದರೂ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಕಂಬ ಅರ್ಧಕ್ಕೆ ಮುರಿದಿದ್ದು ವಿದ್ಯುತ್ ಸಂಪರ್ಕ ಇಲ್ಲದಿದ್ದರಿಂದ ಯಾವುದೇ ಅನಾಹುತ ಸಂಭವಿಸಿಲ್ಲ.
ಸವಾರ ಬೈಕ್ ನಿಲ್ಲಿಸದೆ ಹಿರೀಸಾವೆ ಕಡೆಗೆ ವೇಗವಾಗಿ ಸಾಗಿದ್ದಾನೆ. ಬಸ್ಸಿನ ಮುಂಭಾಗ ಜಖಂಗೊಂಡಿದ್ದು, ಪ್ರಯಾಣಿಕರನ್ನು ಪರ್ಯಾಯ ಬಸ್ ಮೂಲಕ ಹಿರೀಸಾವೆಗೆ ಕಳುಹಿಸುವ ವ್ಯವಸ್ಥೆ ಮಾಡಲಾಯಿತು.