ನುಗ್ಗೇಹಳ್ಳಿ: ನವಿಲೇ ಗೇಟ್ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ 35 ವಿದ್ಯಾರ್ಥಿಗಳು ಮಡಿಕೇರಿ ಪ್ರವಾಸಕ್ಕೆ ತೆರಳಿ ಬುಧವಾರ ರಾತ್ರಿ ವಾಪಸ್ ಬರುವಾಗ ಬಾಗೂರು ಕೆರೆ ಕೋಡಿ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಬಸ್ ಉರುಳಿ ಬಿದ್ದ ಪರಿಣಾಮ 15 ವಿದ್ಯಾರ್ಥಿಗಳು, ಇಬ್ಬರು ಶಿಕ್ಷಕರು ಗಾಯಗೊಂಡಿದ್ದಾರೆ.
ಗಾಯಾಳುಗಳನ್ನು ನುಗ್ಗೇಹಳ್ಳಿ ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗಿದೆ. ಬಸ್ ಉರುಳಿ ಬಿದ್ದ ಸ್ಥಳದಲ್ಲಿದ್ದ ಮೂವರು ಆಂಬುಲೆನ್ಸ್‌ಗೆ ಕರೆ ಮಾಡಿ, ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ಯಲು ನೆರವಾದರು ಎಂದು ಶಿಕ್ಷಕಿ ರೋಜಾ ಮೇರಿ ತಿಳಿಸಿದರು. ಶಿಕ್ಷಕಿ ಭಾರತಿ ಹಾಗೂ ಕವನಾ ಎಂಬ ವಿದ್ಯಾರ್ಥಿನಿಯನ್ನು ಹೆಚ್ಚಿನ ಚಿಕಿತ್ಸೆಗೆ ಹಾಸನಕ್ಕೆ ಕಳುಹಿಸಲಾಗಿದೆ. ಚನ್ನರಾಯಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.