ಶಿವಮೊಗ್ಗ ಬಿ.ಎಚ್.ರಸ್ತೆಯಲ್ಲಿ ರೈತ ದಸರಾ ಅಂಗವಾಗಿ ಎತ್ತಿನಗಾಡಿ ಜಾಥಾ ನಡೆಯಿತು. ಶಾಸಕ ಎಸ್.ಎನ್.ಚನ್ನಬಸಪ್ಪ, ರೈತ ಸಂಘದ ಅಧ್ಯಕ್ಷ ಎಚ್.ಆರ್.ಬಸವರಾಜಪ್ಪ, ಮುಖಂಡ ಎಚ್.ಸಿ.ಯೋಗೇಶ್ ಮತ್ತಿತರರು ಪಾಲ್ಗೊಂಡಿದ್ದರು. 
ಜಿಲ್ಲೆ

ರೈತ ದಸರಾದಲ್ಲಿ ಗಮನ ಸೆಳೆದ ಎತ್ತಿನಗಾಡಿ ಜಾಥಾ

ಶಿವಮೊಗ್ಗ: ನಾಡಹಬ್ಬ ದಸರಾ ಪ್ರಯುಕ್ತ ರೈತ ದಸರಾ ಈ ಬಾರಿಯೂ ಗಮನ ಸೆಳೆಯಿತು. ನಗರದ ಸೈನ್ಸ್ ಮೈದಾನದಿಂದ ಕುವೆಂಪು ರಂಗಮಂದಿರದವರೆಗೆ ಎತ್ತಿನಗಾಡಿ, ಟ್ರ್ಯಾಕ್ಟರ್, ಟಿಲ್ಲರ್‌ಗಳ ಮೆರವಣಿಗೆ ನಡೆಯಿತು.

ವಿಶೇಷವಾಗಿ ಅಲಂಕಾರ ಮಾಡಿದ್ದು ಗಮನ ಸೆಳೆಯಿತು. ಜಾಥಾಗೆ ಪ್ರಗತಿಪರ ರೈತ ಜಯಪ್ರಕಾಶ್ ಚಾಲನೆ ನೀಡಿದರು. ಜಾಥಾದಲ್ಲಿ ಶಾಸಕ ಎಸ್.ಎನ್.ಚನ್ನಬಸಪ್ಪ, ಮುಖಂಡ ಎಚ್.ಸಿ.ಯೋಗೀಶ್, ರೈತ ಸಂಘದ ರಾಜ್ಯಾಧ್ಯಕ್ಷ ಎಚ್.ಆರ್.ಬಸವರಾಜಪ್ಪ ಎತ್ತಿನಗಾಡಿ ಓಡಿಸಿದರು.
ರೈತ ಸಂಘದ ಉಪಾಧ್ಯಕ್ಷ ಟಿ.ಎಂ.ಚಂದ್ರಪ್ಪ, ಜಿಲ್ಲಾ ಹಸಿರುಸೇನೆ ಸಂಚಾಲಕ ಎಂ.ಡಿ.ನಾಗರಾಜ್, ಶಿವಮೊಗ್ಗ ತಾಲೂಕು ಅಧ್ಯಕ್ಷ ಸಿ.ಚಂದ್ರಪ್ಪ, ಶಿವಮೊಗ್ಗ ತಾಲೂಕು ಪ್ರಧಾನ ಕಾರ್ಯದರ್ಶಿ ಜ್ಞಾನೇಶ ಹಾಗೂ ರೈತ ಮುಖಂಡರು ಹಾಜರಿದ್ದರು.

ಭೂಮಿಗೆ ವಿಷ ಸೇರಿಸುತ್ತಿದ್ದೇವೆ
ಸಾವಯವ ಬಿಟ್ಟು ಭೂಮಿಗೆ ನಾವೇ ವಿಷ ಸೇರಿಸುತ್ತಿದ್ದೇವೆ. ಮುಂದೆ ನಾವೂ ಅದೇ ವಿಷವನ್ನೇ ಸೇವಿಸಬೇಕಾಗುತ್ತದೆ ಎಂದು ರಾಜ್ಯ ಪ್ರಶಸ್ತಿ ಪುರಸ್ಕೃತ, ಪ್ರಗತಿಪರ ರೈತ ಎಲ್.ಸಿ.ಜಯಪ್ರಕಾಶ್ ಹೇಳಿದರು. ನಗರದ ಸೈನ್ಸ್ ಮೈದಾನದಲ್ಲಿ ಶನಿವಾರ ಬೆಳಗ್ಗೆ ಎತ್ತಿನಗಾಡಿ, ಟ್ರಾೃಕ್ಟರ್, ಟಿಲ್ಲರ್ ಜಾಥಾಗೆ ಚಾಲನೆ ನೀಡಿ ಮಾತನಾಡಿದ ಅವರು, ರೈತರು ಈ ದೇಶದ ಬೆನ್ನೆಲುಬು ಎಂಬುದು ಸತ್ಯ. ಆದರೆ ತುಂಬಾ ಶ್ರಮ ಹಾಕಿ ಕೃಷಿ ಮಾಡುವ ರೈತರು ವಿರಳವಾಗಿದ್ದಾರೆ. ಅದಕ್ಕೆ ಕಾರಣ ರಾಗಿ, ಜೋಳ, ಭತ್ತ ಬೆಳೆಯುವ ರೈತರು ಇನ್ನೂ ಆರ್ಥಿಕವಾಗಿ ಸಂಕಷ್ಟದಲ್ಲಿದ್ದಾರೆ. ಅಡಕೆ ಬೆಳೆಯುವ ರೈತರು ಮಾತ್ರ ಸ್ವಲ್ಪ ಆರ್ಥಿಕವಾಗಿ ಸದೃಢವಾಗಿದ್ದು ಒಟ್ಟಾರೆ ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡರೆ ಜೀವನದಲ್ಲಿ ಯಶಸ್ಸು ಸಾಧಿಸಬಹುದು ಎಂದರು.