ಕಪ್ಪಸೋಗೆ: ಗ್ರಾಮದಿಂದ ಹಾದು ಹೋಗಿರುವ ಹಲಸೂರು ನಾಲೆಯ ಏರಿಯಲ್ಲಿ ಅಡ್ಡಲಾಗಿ ನಿರ್ಮಿಸಿದ್ದ ಸೇತುವೆ ಕುಸಿದಿರುವುದರಿಂದ ಗ್ರಾಮಸ್ಥರು ಜಮೀನುಗಳು ಮತ್ತು ಇತರ ಗ್ರಾಮಗಳಿಗೆ ಸಂಪರ್ಕ ಸಾಧಿಸಲು ಕಷ್ಟವಾಗಿದೆ.
ಏಕಾಏಕಿ ನಾಲೆಗೆ ಅಡ್ಡಲಾಗಿ ನಿರ್ಮಿಸಿದ್ದ ಸೇತುವೆಯು ಕುಸಿದು ಬಿದ್ದಿರುವುದರಿಂದ ಗ್ರಾಮಸ್ಥರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಹಲವಾರು ಬಾರಿ ನಾಲೆಗೆ ನಿರ್ಮಿಸಿದ ಸೇತುವೆಯು ತುಂಬ ಶಿಥಿಲವಾಗಿದ್ದು ಸೇತುವೆಯನ್ನು ಸರಿಪಡಿಸುವಂತೆ ಹಲವಾರು ಬಾರಿ ಗ್ರಾಮಸ್ಥರು ಮನವಿ ಮಾಡಿದ್ದರೂ ಯಾರೂ ಇದರ ಬಗ್ಗೆ ಗಮನ ನೀಡದಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.
ಚಂದ್ರವಾಡಿ, ಕಾಟೂರು, ಬಸಾಪುರ ಮುಖಾಂತರ ಸರಗೂರಿಗೆ ಸೇರುವ ಪ್ರಮುಖ ರಸ್ತೆಯಾಗಿದ್ದು ಇಲ್ಲಿ ಏನಾದರೂ ಅನಾಹುತ ಸಂಭವಿಸಿದರೆ ಯಾರು ಹೊಣೆ? ಎಂದು ಗ್ರಾಮಸ್ಥರು ಪ್ರಶ್ನಿಸಿದ್ದಾರೆ. ಈ ಸ್ಥಳದಲ್ಲಿ ಬಸ್‌ಗಾಗಿ ಹಲವಾರು ಜನರು ಕಾಯುತ್ತಿದ್ದ ವೇಳೆಯೇ ಏಕಾಏಕಿ ನಾಲಿಗೆ ನಿರ್ಮಿಸಿದ ಸೇತುವೆ ಕುಸಿದಿದ್ದರಿಂದೆ ಎಲ್ಲರೂ ದಿಕ್ಕಾಪಾಲಾಗಿ ಓಡಿ ಹೋಗಿ ರಕ್ಷಿಸಿಕೊಂಡಿದ್ದಾರೆ.
ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಮುಂದೆ ನಡೆಯುವ ಅನಾಹುತಗಳಿಗೆ ಅವಕಾಶ ನೀಡದೆ ಆದಷ್ಟು ಬೇಗ ಸೇತುವೆಯನ್ನು ಮರು ನಿರ್ಮಾಣ ಮಾಡಿಕೊಡಬೇಕೆಂದು ಕಪ್ಪಸೋಗೆ ಗ್ರಾಮಸ್ಥರು ಆಗ್ರಹಿಸಿದ್ದಾರೆ. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಸಂಬಂಧಪಟ್ಟ ಕಚೇರಿ ಎದುರು ಪ್ರತಿಭಟನೆ ಕೈಗೊಳ್ಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.