ಚಿಕ್ಕಬಳ್ಳಾಪುರದ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಪ್ರಚಾರ ಸಭೆಯನ್ನು ಎಚ್.ಡಿ.ಕುಮಾರಸ್ವಾಮಿ, ಆರ್.ಅಶೋಕ್ ಉದ್ಘಾಟಿಸಿದರು. ವೈ.ಎ. ನಾರಾಯಣಸ್ವಾಮಿ, ಬಿ.ಎನ್.ರವಿಕುಮಾರ್, ಎಂ.ರಾಮಲಿಂಗಪ್ಪ ಮತ್ತಿತರರು ಇದ್ದರು. 
ಜಿಲ್ಲೆ

ಹಸನಾಗಲಿಲ್ಲ ಅನ್ನದಾತನ ಬದುಕು

ಚಿಕ್ಕಬಳ್ಳಾಪುರದ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಪ್ರಚಾರ ಸಭೆಯನ್ನು ಎಚ್.ಡಿ.ಕುಮಾರಸ್ವಾಮಿ, ಆರ್.ಅಶೋಕ್ ಉದ್ಘಾಟಿಸಿದರು. ವೈ.ಎ. ನಾರಾಯಣಸ್ವಾಮಿ, ಬಿ.ಎನ್.ರವಿಕುಮಾರ್, ಎಂ.ರಾಮಲಿಂಗಪ್ಪ ಮತ್ತಿತರರು ಇದ್ದರು.

ಎನ್.ವೆಂಕಟೇಶ್

ರೈತರನ್ನು ಮರೆತ ಕಾಂಗ್ರೆಸ್ ಸರ್ಕಾರ- ಮಾಜಿ ಸಿಎಂ ಎಚ್‌ಡಿಕೆ ಕಿಡಿ


ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ರೈತರ ಆತ್ಮಹತ್ಯೆ ಪ್ರಕರಣ ಹೆಚ್ಚಾಗಿದ್ದು, ಕಾಂಗ್ರೆಸ್ ಸರ್ಕಾರ ಅನ್ನದಾತರ ಬದುಕನ್ನು ಹಸನುಗೊಳಿಸುವುದನ್ನೇ ಮರೆತಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕಿಡಿಕಾರಿದರು.
ನಗರದ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಆಗ್ನೇಯ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಚುನಾವಣಾ ಪ್ರಚಾರಸಭೆಯಲ್ಲಿ ಅಭ್ಯರ್ಥಿ ವೈ.ಎ.ನಾರಾಯಣಸ್ವಾಮಿ ಪರ ಮಾತನಾಡಿದರು.
ಹಿಂದೆ ಜೆಡಿಎಸ್-ಬಿಜೆಪಿ ಸಮ್ಮಿಶ್ರ ಸರ್ಕಾರದ 20 ತಿಂಗಳ ಆಡಳಿತಾವಧಿಯಲ್ಲಿ ಉಪ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಜತೆಗೂಡಿ ಕ್ರಾಂತಿಯನ್ನುಂಟು ಮಾಡಲಾಯಿತು. ಜನಪರ ಯೋಜನೆಗಳ ಮೂಲಕ ಮೆಚ್ಚುಗೆ ಪಡೆದಿದ್ದು ಇಂದಿಗೂ ಜನರು ಮೈತ್ರಿ ಸರ್ಕಾರದ ಆಡಳಿತ ವೈಖರಿಯನ್ನು ಮೆಚ್ಚಿಕೊಳ್ಳುತ್ತಾರೆ ಎಂದರು.
ಒಂದು ವರ್ಷದಿಂದ ರಾಜ್ಯದಲ್ಲಿ ರೈತರ ಆತ್ಮಹತ್ಯೆ ಪ್ರಕರಣ ಹೆಚ್ಚಾಗುತ್ತಿವೆ. ದೇಶದ ಜನರಿಗೆ ಅನ್ನ ಕೊಡುವ ಅನ್ನದಾತರ ಕಷ್ಟವನ್ನು ಸರ್ಕಾರ ಅರ್ಥ ಮಾಡಿಕೊಳ್ಳುತ್ತಿಲ್ಲ. ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರಾಗಿ ಮಾರಿದ ರೈತರಿಗೆ ಹಣ ಪಾವತಿಸಿಲ್ಲ. ಇತ್ತೀಚೆಗೆ ಮಳೆಗೆ ಹಲವೆಡೆ ಬೆಳೆ ನಾಶವಾಗಿದ್ದು, ಇದಕ್ಕೂ ಪರಿಹಾರ ಸಿಕ್ಕಿಲ್ಲ ಎಂದರು.
ಮೊದಲಿನಿಂದಲೂ ಈ ಭಾಗದಲ್ಲಿ ಜೆಡಿಎಸ್ ಪರವಾಗಿ ಹೆಚ್ಚಿನ ಒಲವಿದೆ. ಇದಕ್ಕೆ ಪ್ರತ್ಯೇಕ ಜಿಲ್ಲೆಯ ರಚನೆ, ವಿಶೇಷ ಅನುದಾನ ಮಂಜೂರು ಸೇರಿ ನಾನಾ ಕೊಡುಗೆ ನೀಡಲಾಗಿದೆ ಎಂದು ಹೇಳಿದರು.
ಮಾಜಿ ಸಚಿವ ಸಿ.ಎನ್. ಅಶ್ವತ್ಥನಾರಾಯಣ ಮಾತನಾಡಿ, ರಾಜ್ಯದಲ್ಲಿ ಬ್ಲಾಕ್‌ಮೇಲ್ ಸರ್ಕಾರವು ಅಧಿಕಾರ ನಡೆಸುತ್ತಿದೆ. ಬೊಕ್ಕಸವನ್ನು ಬರಿದಾಗಿಸಿ, ಮೂಗಿಗೆ ತುಪ್ಪ ಸವರುವ ಘೋಷಣೆ ಹೆಸರಿನಲ್ಲಿ ಜನರನ್ನು ದಿಕ್ಕು ತಪ್ಪಿಸಲಾಗುತ್ತಿದೆ. ಕಾನೂನು ಸುವ್ಯವಸ್ಥೆ, ಆರ್ಥಿಕ ಪರಿಸ್ಥಿತಿ, ಆಡಳಿತ ವ್ಯವಸ್ಥೆ ಹದಗೆಟ್ಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಶಿಕ್ಷಣದ ಹಿತ ಕಾಪಾಡುವುದಕ್ಕೆ ಶಿಕ್ಷಕರ ಕ್ಷೇತ್ರದ ಚುನಾವಣೆ ನಡೆಯುತ್ತಿದೆ. ಹಿಂದೆ ಯಡಿಯೂರಪ್ಪ ಆಡಳಿತಾವಧಿಯಲ್ಲಿ 150 ಐಟಿಐ ಸಂಸ್ಥೆ ಸ್ಥಾಪಿಸಿದ್ದು, ಹಾಗೆಯೇ ಶಿಕ್ಷಕರಿಗೆ ಸಂಬಳ ಹೆಚ್ಚಿಸಲಾಗಿದೆ ಎಂದರು.
ಆಗ್ನೇಯ ಶಿಕ್ಷಕರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವೈ.ಎ.ನಾರಾಯಣಸ್ವಾಮಿ, ಶಾಸಕ ಬಿ.ಎನ್.ರವಿಕುಮಾರ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಎಂ.ರಾಮಲಿಂಗಪ್ಪ, ಜಿಲ್ಲಾ ಜೆಡಿಎಸ್ ಅಧ್ಯಕ್ಷ ವೆಂಕಟಶಿವಾರೆಡ್ಡಿ, ಮುಕ್ತ ಮುನಿಯಪ್ಪ, ಜಿಪಂಮಾಜಿ ಅಧ್ಯಕ್ಷ ಪಿ.ಎನ್. ಕೇಶವರೆಡ್ಡಿ, ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಮಾಜಿ ಅಧ್ಯಕ್ಷ ಕೆ.ವಿ.ನಾಗರಾಜ್, ನಗರಸಭೆ ಮಾಜಿ ಅಧ್ಯಕ್ಷ ಡಿ.ಎಸ್. ಆನಂದರೆಡ್ಡಿ, ಮುಖಂಡರಾದ ವೇಣುಗೋಪಾಲ್, ಕೆ.ಆರ್.ರೆಡ್ಡಿ, ಕೃಷ್ಣಮೂರ್ತಿ, ಎ.ವಿ.ಭೈರೇಗೌಡ ಮತ್ತಿತರರು ಇದ್ದರು.


ಇದು ಮನೆ ಹಾಳು ಸರ್ಕಾರ
ಬಿಜೆಪಿ ಮತ್ತು ಜೆಡಿಎಸ್ ಒಂದಾಗಿದ್ದರೆ ಮುಂಬರುವ ಚುನಾವಣೆಗಳಲ್ಲಿ ಗೆಲ್ಲಲು ಸಾಧ್ಯವಿಲ್ಲ ಎಂಬ ಭಯ ಕಾಂಗ್ರೆಸ್ ನಾಯಕರನ್ನು ಕಾಡುತ್ತಿದೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಹೇಳಿದರು.
ರಾಜ್ಯದಲ್ಲಿ ಒಂದು ವರ್ಷದಲ್ಲಿ 900 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು, ಎರಡು ತಿಂಗಳಿಂದಲೂ ಶಿಕ್ಷಕರಿಗೆ ಸಂಬಳ ನೀಡಲು ಹಣ ಇಲ್ಲ. ಆಂಬುಲೆನ್ಸ್ ಚಾಲಕರು ಸಹ ವೇತನಕ್ಕಾಗಿ ಕಾಯುತ್ತಿದ್ದಾರೆ. ಮಕ್ಕಳಿಗೆ ವಿದ್ಯಾರ್ಥಿವೇತನ, ಶಾಸಕರಿಗೆ ನಯಾ ಪೈಸೆ ಅನುದಾನ ಸಿಕ್ಕಿಲ್ಲ. ಲೋಕಸಭೆ ಚುನಾವಣಾ ಫಲಿತಾಂಶದ ಬಳಿಕ ಗೃಹಲಕ್ಷ್ಮಿ ಯೋಜನೆ 2 ಸಾವಿರ ರೂ. ನೀಡುವುದಿಲ್ಲ. ಇದು ಮನೆ ಹಾಳು ಸರ್ಕಾರ ಎಂದು ಕಿಡಿಕಾರಿದರು. ದಕ್ಷಿಣ ಭಾರತದಿಂದ ಉತ್ತರ ಕಡೆಗೆ ಸುರಂಗ ಕೊರೆಯುತ್ತಾರಂತೆ. ಇದು ಕರ್ನಾಟಕದ ದುಡ್ಡನ್ನು ದೆಹಲಿಗೆ ಸಾಗಿಸಲು ಇರಬೇಕು ಎಂದು ಅಶೋಕ್ ವ್ಯಂಗ್ಯವಾಡಿದರು.