ಜಿಲ್ಲೆ

ಪುಸ್ತಕಮನೆಗೆ ಮತ್ತೆ ಸಂಕಷ್ಟ

ಕೋಲಾರ ಡೆಸ್ಕ್

ಕೆ.ಆರ್​.ಚಂದ್ರಶೇಖರ್​ ಲಕ್ಕೂರು

ಮಹತ್ತರ ಪುಸ್ತಕಗಳನ್ನು ಸಂಗ್ರಹಿಸಿರುವ ಪುಸ್ತಕ ಮನೆ ಹರಿಹರಪ್ರಿಯ ಅವರಿಗೆ ಜನಪ್ರತಿನಿಧಿ, ಸರ್ಕಾರಿ ಅಧಿಕಾರಿಗಳು ನೀಡಿದ ಭರಸವೆ ಭರವಸೆಯಾಗಿಯೇ ಉಳಿದಿದ್ದು, ತಿಂಗಳು ಉರುಳಿದರೂ ಸಾಹಿತಿಯ ಸಹಾಯಕ್ಕೆ ಯಾರೂ ಧಾವಿಸಿಲ್ಲ.

ಹೌದು..! ಮಾಲೂರು ಹೊರವಲಯದ -ಹೊಸೂರು ರಸ್ತೆಯ ರ್ನಿಜನ ಪ್ರದೇಶದಲ್ಲಿ ಪುಸ್ತಕ ಮನೆಯನ್ನು ಸ್ಥಾಪಿಸಿ ಸರ್ಕಾರದಿಂದ ಯಾವುದೇ ಸಹಕಾರ ಪಡೆಯದೆ 70 ವರ್ಷದಿಂದ ಕಾಪಾಡಿಕೊಂಡು ಬಂದಿರುವ ಎಲ್ಲ ಪುಸ್ತಕಗಳನ್ನು ಹುಟ್ಟುಹಬ್ಬದಂದು ಬೆಂಕಿಗೆ ಹಾಕುವುದಾಗಿ ಹರಿಹರಪ್ರಿಯ ಹೇಳಿದ್ದರು. ಬಗ್ಗೆ ಕಳೆದ ಜ.20ರಂದು "ವಿಜಯವಾಣಿ'ಯಲ್ಲಿ ವರದಿ ಪ್ರಕಟಗೊಂಡ ಬೆನ್ನಲ್ಲೇ ಸರ್ಕಾರಿ ಅಧಿಕಾರಿಗಳು, ಜನಪ್ರತಿನಿಧಿಗಳು ಹರಿಹರಪ್ರಿಯ ಅವರ ಪುಸ್ತಕಮನೆಗೆ ಧಾವಿಸಿ, ನಿಮಗೆ ನಾವಿದ್ದೇವೆ ಎಂದು ಭರವಸೆ ನೀಡಿದ್ದರು. ಆದರೆ ತಿಂಗಳು ಉರುಳಿದರೂ ಯಾರೂ ಸಹಾಯಕ್ಕೆ ಬಾರದ ಹಿನ್ನೆಲೆಯಲ್ಲಿ ಬೇಸರಗೊಂಡ ಸಾಹಿತಿ, ಪುಸ್ತಕಗಳ ಸಂರಕ್ಷಣೆ ಬಗ್ಗೆ ಅಸಡ್ಡೆ ತೋರುತ್ತಿರುವ ಸರ್ಕಾರ ಹಾಗೂ ಜನಪ್ರತಿನಿಧಿಗಳ ಸುಳ್ಳು ಭರವಸೆಗಳ ವಿರುದ್ಧ ಹೋರಾಟ ಅಸಾಧ್ಯ. ಅನಾರೋಗ್ಯ ಪೀಡಿತನಾಗಿರುವುದರಿಂದ ಮುಂದಿನ ವಿಶ್ರಾಂತಿ ಜೀವನವನ್ನು ಬೆಂಗಳೂರಿನಲ್ಲಿ ಕಳೆಯುವುದಾಗಿ ನಿರ್ಧರಿಸಿ, ಪುಸ್ತಕಮನೆಯನ್ನು ಮಾರಿ, ತೊರೆಯುವುದಾಗಿ ಹೇಳುತ್ತಿದ್ದಾರೆ ಎನ್ನಲಾಗಿದೆ.

ಹೃದಯಾಘಾತಕ್ಕೂ ಮಿಗಿಲಾದ ಆಘಾತ

ಮೂರು ತಿಂಗಳ ಹಿಂದೆ ಹೃದಯಾಘಾತವಾದಾಗ, ವೈದ್ಯಕಿಯ ನೆರವಿಗೆ ಸರ್ಕಾರ ಹಾಗೂ ಸಮಾಜದ ಮುಂದೆ ಪತ್ರಕರ್ತರು ಬರೆದ ಸುದ್ದಿ ಸಾಂತ್ವನ ನೀಡಿತ್ತು. ಆದರೆ, ಕೆಲ ಪ್ರಸಂಗಗಳಿಂದ ಸರ್ಕಾರ ಹಾಗೂ ಸಂಸ್ಥೆಗಳು ನೆರವಿಗೆ ಬರುವ ಆಶ್ವಾನೆಗಳೆಲ್ಲ ಹುಸಿಗೊಂಡು, ಹೃದಯಾಘಾತಕ್ಕೂ ಮಿಗಿಲಾಗಿ ಮಾನಸಿಕ ಆಘಾತ ಉಂಟಾಗಿದೆ. ಹೀಗಾಗಿ ಪುಸ್ತಕಮನೆಯ ಸಂಗ್ರಹವನ್ನು ಸಾರಾಸಗಟಾಗಿ ಮಾರಿಬಿಟ್ಟು, ಬೆಂಗಳೂರಿಗೆ ಹೊರಟು ಹೋಗಲು ನಿರ್ಧರಿಸಿದ್ದೇನೆ. ಯಾವುದಾದರು ಸಂಸ್ಥೆ ಅಥವಾ ಉದ್ಯಮದಾರರು, ಪುಸ್ತಕಪ್ರೀತಿ ಇರುವವರು ಮುಂದೆ ಬಂದು ಪುಸ್ತಕಮನೆಯನ್ನು ಕಾಪಾಡಬೇಕು ಎನ್ನುತ್ತಾರೆ ಹರಿಹರಪ್ರಿಯ.

"ಹರಿಹರಪ್ರಿಯ ಅವರು ಹೋರಾಟ, ಸಂಘಟನೆ ಹಾಗೂ ಸಾಹಿತ್ಯಕ್ಕೆ ಬಹಳಷ್ಟು ಕೊಡುಗೆ ನೀಡಿದ್ದಾರೆ. ದಲಿತ ಬಂಡಾಯದ ಸಂದರ್ಭದಲ್ಲಿ ಮುಖವಾಣಿ ರೀತಿಯಲ್ಲಿ ಕೆಲಸ ಮಾಡಿದ್ದಾರೆ. ನೇರ, ನಿಷ್ಠುರ, ನಿರ್ಭಯದಿಂದ ಮಾತನಾಡುವ ವ್ಯಕ್ತಿ ಹರಿಹರಪ್ರಿಯ. ಅವರ ಸಾಹಿತ್ಯದ ಸೇವೆಗೆ ಕಳಕಳಿಗೊಳ್ಳುವಂತಹವರು ಇಲ್ಲವೇ?, ಅವರ ಬೆನ್ನಿಗೆ ನಿಲ್ಲುವಂತಹವರು ಸಹಕಾರ ನೀಡಬೇಕು."

- ಡಾ.ಅರವಿಂದ ಮಾಲಗತ್ತಿ

ಮಾಜಿ ಅಧ್ಯಕ್ಷ, ಕರ್ನಾಟಕ ಸಾಹಿತ್ಯ ಅಕಾಡೆಮಿ

"ಸಾಹಿತಿ ಹರಿಹರಪ್ರಿಯ ಸುಮಾರು 60 ವರ್ಷಗಳಿಂದ ಸಂಗ್ರಹ ಮಾಡಿ ಸಾಂಸತಿಕ ತಿಜೋರಿಯನ್ನು ಕಾಪಾಡಿಕೊಳ್ಳಲು ನಿಶಕ್ತರಾಗಿದ್ದು, ಅವರಿಗೆ ನೆಮ್ಮದಿ ಬೇಕಾಗಿದೆ. ಅವರಿಗೆ ಸರ್ಕಾರದ ನೆರವು ಬೇಕಿದೆ. ಸರ್ಕಾರ, ಹರಿಹರ ಪ್ರಿಯ ಅವರ ಬಗ್ಗೆ ಅಸಡ್ಡೆ ತೋರುತ್ತಿರುವುದು ಬೇಸರದ ವಿಷಯ. ಇನ್ನಾದರೂ ಜನಪ್ರತಿನಿಧಿಗಳು, ಪುಸ್ತಕ ಪ್ರಿಯರು ಮುಂದೆ ಬಂದು, ಹರಿಹರಪ್ರಿಯ ಹಾಗೂ ಅವರ ಸಂಗ್ರಹವನ್ನು ರಸಬೇಕು."

- ಲಕ್ಷ್ಮಣ್​ ಕೊಡಸೆ ಸಾಹಿತಿ ಪತ್ರಕರ್ತ, ಬೆಂಗಳೂರು