ಮೈಸೂರು: ನಗರದ ಕಲಾಮಂದಿರದಲ್ಲಿ ಜೂ.29 ರಂದು ಸಂಜೆ 4ಕ್ಕೆ ಅಡವಿ ಅಲರ್ಟ್ ಪ್ರತಿಷ್ಠಾನ ಹೊರತಂದಿರುವ ‘ಉರಗತರಂಗ ಕಲಿಸಿ, ತಿಳಿಸಿ, ಉಳಿಸಿ’ ಕನ್ನಡ ಕೃತಿ ಹಾಗೂ ‘ಸ್ನೇಕ್ಸ್ ಆಫ್ ಮೈಸೂರ್’ ಇಂಗ್ಲಿಷ್ ಕೃತಿ ಬಿಡುಗಡೆ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಲೇಖಕ ಪವನ್ ಜೋಶಿ ತಿಳಿಸಿದರು.
ಈ ಕೃತಿಯನ್ನು ಮೈಸೂರಿನ ಸ್ನೇಕ್ ಮ್ಯಾನ್ ಎಂದು ಖ್ಯಾತಿ ಗಳಿಸಿರುವ ಸ್ನೇಕ್ ಶ್ಯಾಮ್ ಅವರಿಗೆ ಅರ್ಪಿಸಲಾಗಿದೆ. 43 ವರ್ಷಗಳಿಂದ ಅವರು ಜಿಲ್ಲೆಯಲ್ಲಿ ಉರಗಗಳ ಸಂರಕ್ಷಣೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಈ ಕೃತಿಯಲ್ಲಿ ವಿಷಪೂರಿತ, ವಿಷರಹಿತ ಹಾಗೂ ಅರೆ ವಿಷಕಾರಿ ಹಾವುಗಳ ಬಗ್ಗೆ ಮಾಹಿತಿ ನೀಡಲಾಗಿದೆ. ಈ ಹಾವುಗಳನ್ನು ದೇಶದ ಯಾವ ಭಾಗದಲ್ಲಿ ಕಾಣಬಹುದು. ಹಾವುಗಳಿಂದ ನಮ್ಮನ್ನು ರಕ್ಷಿಸಿಕೊಳ್ಳಲು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳು ಹಾಗೂ ಹಾವಿನ ಕಡಿತಕ್ಕೆ ಒಳಗಾದ ನಂತರ ತೆಗೆದುಕೊಳ್ಳಬೇಕಾದ ಉಪಚಾರ ಕುರಿತು ವಿವರಿಸಲಾಗಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕೃತಿ ಬಿಡುಗಡೆ ಸಮಾರಂಭದಲ್ಲಿ ಅರಣ್ಯ ಸಚಿವ ಈಶ್ವರ್ ಖಂಡ್ರೆ, ಸಂಸದರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಸಾಗರ್ ಈಶ್ವರ್ ಖಂಡ್ರೆ, ಚಿತ್ರ ನಿರ್ಮಾಕ ಜೆ.ಎಸ್.ಅಮೋಘವರ್ಷ, ಪರಿಸರ ತಜ್ಞ ಸಂಜಯ್ ಗುಬ್ಬಿ ಹಾಗೂ ಇತರರು ಪಾಲ್ಗೊಳ್ಳಲಿದ್ದಾರೆ ಎಂದರು. ಸುದ್ದಿಗೋಷ್ಠಿಯಲ್ಲಿ ಉರಗ ಸಂರಕ್ಷಕ ಸ್ನೇಕ್ ಶ್ಯಾಮ್ ಇದ್ದರು.