ಜಿಲ್ಲೆ

ಭಾರತೀಯ ಸೈನ್ಯದ ದಿಟ್ಟ ಹೆಜ್ಜೆ ವಿಶ್ವಕ್ಕೆ ಮಾದರಿ

ಹುಣಸೂರು; ಪಾಕಿಸ್ತಾನದ ಉಗ್ರರ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ದೇಶದ ಸೈನ್ಯ ನಡೆಸಿದ ಕಾರ್ಯಾಚರಣೆ ಮೂಲಕ ನಿರ್ದಿಷ್ಟ ಉದ್ದೇಶ ಮತ್ತು ಶಾಂತಿ ಸೌಹಾರ್ಧತೆಯನ್ನು ಕಾಪಾಡಿಕೊಳ್ಳಲು ಇಟ್ಟ ಹೆಜ್ಜೆ ವಿಶ್ವಕ್ಕೆ ಮಾದರಿಯಾದ್ದಂತದ್ದು ಎಂದು ಸಂಸದ ಯದುವೀರ್ ಒಡೆಯರ್ ಹೇಳಿದರು.

ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾ ಮತ್ತು ಬಸವ ಸಮಿತಿಯ ತಾಲೂಕು ಘಟಕದ ವತಿಯಿಂದ ಸೋಮವಾರ ಜಗಜ್ಯೋತಿ ಬಸವೇಶ್ವರರ 134ನೇ ಜಯಂತಿ ಅಂಗವಾಗಿ ನಗರದ ಮುನೇಶ್ವರ ಕಾವಲ್ ಮೈದಾನದಲ್ಲಿ ಆಯೋಜಿಸಿದ್ದ ಧಾರ್ಮಿಕ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

ಇಂತಹ ಸಂಕೀರ್ಣ ಸಂದರ್ಭದಲ್ಲೂ ಶಾಂತಿ, ಸಮನ್ವಯತೆ ಸಾಧಿಸಲು ನಮಗೆ ಬುದ್ಧ, ಬಸವಾದಿ ಶರಣರ ಜೀವನ ಆದರ್ಶಗಳೇ ಕಾರಣವಾಗಿದೆ. ಪಹಲ್ಗಾಮ್ ಘಟನೆಗೆ ಕಾರಣಕರ್ತರಾದ ಉಗ್ರರ ಮಾರಣಹೋಮವಷ್ಟೇ ನಮ್ಮ ಗುರಿಯಾಗಿತ್ತು. ಆಪರೇಷನ್ ಸಿಂಧೂರ್ ಮೂಲಕ ಉಗ್ರರ ಗುರಿಯಾಗಿಸಿಕೊಂಡಷ್ಟೇ ದಾಳಿ ನಡೆಸಲಾಗಿದೆ ಎಂದರು.

ಭಾರತ ಪಾಕಿಸ್ಥಾನದ ನಾಗರಿಕನ್ನು ಗುರಿಯಾಗಿಸಿ ದಾಳಿ ನಡೆಸಿಲ್ಲ. ಯುದ್ಧಕಾಲದಲ್ಲಿನ ನಮ್ಮ ನೀತಿಗಳು ಭಗವಾನ್ ಬುದ್ಧ ಮತ್ತು ಬಸವೇಶ್ವರರು ಪ್ರತಿಪಾದಿಸಿದ ಶಾಂತಿಮಂತ್ರಗಳೇ ಕಾರಣ. ಶಾಂತಿ ಸೌಹಾರ್ದತೆ ಈ ನೆಲದ ಶಕ್ತಿಗಳಾಗಿವೆ. ಸಾಮಾಜಿಕ ಅಸಮಾನತೆಯನ್ನು ತೊಡೆದುಹಾಕಲು ಅನುಭವ ಮಂಟಪದಂತಹ ಕ್ರಾಂತಿಕಾರಿ ಆಲೋಚನೆಗಳು ಇಂದಿಗೂ ಪ್ರಸ್ತುತವಾಗಿದ್ದು, ಈ ಮಹನೀಯರ ಸಿದ್ಧಾಂತಗಳನ್ನು ಪರಿಪಾಲಿಸಿ ಎಲ್ಲರೂ ಒಂದಾಗಿ ಬದುಕಬೇಕಿದೆ ಎಂದರು.

ಡಿ.ದೇವರಾಜ ಅರಸು ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ.ಬಿ.ವಿ.ವಸಂತಕುಮಾರ್ ಮಾತನಾಡಿ, ಒಡಕು ಎನ್ನುವುದು ವಿನಾಶಕ್ಕೆ ಕಾರಣ, ಅದು ಮನಸುಗಳ ಒಡಕಾಗಿರಬಹುದು, ಕುಟುಂಬ, ಸಮಾಜ ಅಥವಾ ದೇಶದ್ದಾಗಿರಬಹುದು. ಬಸವಣ್ಣನವರ ಕಾವ್ಯನಾಮ ಕೂಡಲಸಂಗಮದೇವ ಎಂದಾಗಿದ್ದು, ಕನ್ನಡ ಪದ ಕೂಡಲ ಮತ್ತು ಸಂಸ್ಕೃತಪದ ಸಂಗಮ ಎರಡರ ಅರ್ಥವೂ ಒಂದಾಗಿರುವುದು ಎನ್ನುವುದಾಗಿದೆ. ಹಾಗಾಗಿ ಬಸವಣ್ಣ ತಮ್ಮ ವಚನಗಳ ಮೂಲಕ ಒಂದಾಗಿ ಬಾಳುವುದನ್ನು ತಿಳಿಸಿದರು. ಅರಿವು, ಅನ್ನ ಮತ್ತು ಆಚಾರಗಳ ಪ್ರತೀಕವೆಂದರೆ ಅದು ವಚನಗಳಾಗಿವೆ. ಮನುಷ್ಯ ಮನುಷ್ಯನನ್ನು ಜಾತಿ, ಭಾಷೆ, ಪಂಥ ಮೀರಿ ಪ್ರೀತಿಸಬೇಕು. ಸಮಾಜದಲ್ಲಿ ಇಂದು ಕಾಣುತ್ತಿರುವ ಹಲವು ರೋಗಗಳಿಗೆ ಔಷಧ ಪಡೆಯಲು ಬಸವ ಜಯಂತಿ ಆಚರಣೆ ಅಗತ್ಯ ಎಂದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಜಿ.ಡಿ.ಹರೀಶ್‌ಗೌಡ ಮಾತನಾಡಿ, ಸಾಮಾಜಿಕ ನ್ಯಾಯದ ಪರಿಕಲ್ಪನೆಯನ್ನು 12ನೇ ಶತಮಾನದಲ್ಲೇ ಬಸವಣ್ಣ ನೀಡಿದ್ದರೂ, ಇಂದಿಗೂ ನಮ್ಮ ಸಮಾಜ ಬದಲಾಗುವತ್ತ ಮನಸು ಮಾಡದಿರುವುದು ವಿಷಾಧನೀಯ. ಬಸವತತ್ವಗಳು ಶಾಂತಿ ಮತ್ತು ಸಹೋದರತ್ವಕ್ಕೆ ನಾಂದಿ ಹಾಡಿದ್ದು, ಆಧುನಿಕತೆಯ ಸೋಗಿನಲ್ಲಿ ಮನುಷ್ಯ ಮನುಷ್ಯ ಸಂಬಂಧಗಳನ್ನು ಮರೆಯುವುದು ಸರಿಯಲ್ಲ. ಎಲ್ಲರೂ ಎಲ್ಲರಿಗಾಗಿ ಬದುಕುವುದನ್ನು ಕಲಿಯೋಣವೆಂದರು.

ಕನಕಪುರ ದೇಗುಲ ಮಠದ ಶ್ರೀ ಡಾ.ಚನ್ನಬಸವ ಸ್ವಾಮೀಜಿ ಆಶೀರ್ವಚನ ನೀಡಿದರು. ಮಹಾಸಭಾದ ತಾಲೂಕು ಅಧ್ಯಕ್ಷ ಹಂದನಹಳ್ಳಿ ಸೋಮಶೇಖರ್ ಗಣ್ಯರನ್ನು ಸ್ವಾಗತಿಸಿದರೆ, ಬಸವ ಸಮಿತಿ ಅಧ್ಯಕ್ಷ ಕೆ.ಎಚ್.ವೀರಭದ್ರಪ್ಪ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಪೂರ್ಣಚಂದ್ರ ತೇಜಸ್ವಿ ಎಂಬುವರು ಶ್ರೀ ಶಿವರಾತ್ರಿ ದೇಶೀಕೇಂದ್ರ ಸ್ವಾಮಿಗಳ ಕುರಿತಾಗಿ ರಚಿಸಿದ ಕವನಸಂಕಲನವನ್ನು ಮಾಜಿ ಶಾಸಕ ಮಂಜುನಾಥ್ ಬಿಡುಗಡೆಗೊಳಿಸಿದರು.

ಸಮಾರಂಭದಲ್ಲಿ ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಮಾತನಾಡಿದರು. ತುಮಕೂರು ಸಿದ್ಧಗಂಗಾಮಠದ ಮಠಾಧೀಶರಾದ ಸಿದ್ದಲಿಂಗಸ್ವಾಮೀಜಿ, ಗಾವಡಗೆರೆ ಶ್ರೀ ಗುರುಲಿಂಗಜಂಗಮದೇವರ ಮಠದ ಶ್ರೀ ನಟರಾಜಸ್ವಾಮೀಜಿ, ಮಾದಳ್ಳಿ ಉಕ್ಕಿನಕಂತೆ ಮಠದ ಶ್ರೀ ಸಾಂಬಸದಾಶಿವಸ್ವಾಮೀಜಿ ಆಶೀರ್ವಚನ ನೀಡಿದರು.

ಡಾ.ವೃಷಬೇಂದ್ರಸ್ವಾಮಿ, ಚಿನ್ನವೀರಯ್ಯ, ಎಚ್.ಮಹದೇವ್, ಶೇಖರ್, ಬಿಜೆಪಿ ತಾಲೂಕು ಅಧ್ಯಕ್ಷ ಕಾಂತರಾಜು, ನಗರಸಭಾಧ್ಯಕ್ಷ ಗಣೇಶ್ ಕುಮಾರಸ್ವಾಮಿ, ಜೆಡಿಎಸ್ ಮುಖಂಡ ಹರವೆ ಶ್ರೀಧರ್, ಪುಟ್ಟಲಿಂಗಯ್ಯ, ಹಂದನಹಳ್ಳಿ ರಮೇಶ್, ಕಿರಿಜಾಜಿ ಕೆ.ವಿ.ಮಹದೇವ್, ದಲಿತ ಮುಖಂಡ ನಿಂಗರಾಜ ಮಲ್ಲಾಡಿ ಸೇರಿದಂತೆ ಮಹಿಳಾ ಘಟಕದ ಸದಸ್ಯರು ಇತರರು ಇದ್ದರು.

ಭಾವಚಿತ್ರ ಮೆರವಣಿಗೆ: ಧಾರ್ಮಿಕ ಸಭೆಗೂ ಮುನ್ನ ನಗರದ ಶ್ರೀ ಆಂಜನೇಯಸ್ವಾಮಿ ದೇವಾಲಯದ ಆವರಣದಲ್ಲಿ ಬೆಳಗ್ಗೆ 8.30ಕ್ಕೆ ಗಾವಡಗೆರೆ ಶ್ರೀ ಗುರುಲಿಂಗ ಜಂಗಮದೇವರ ಮಠದ ಶ್ರೀ ನಟರಾಜಸ್ವಾಮೀಜಿ ಮತ್ತು ಮಾದಳ್ಳಿ ಉಕ್ಕಿನಕಂತೆ ಮಠದ ಶ್ರೀ ಸಾಂಬಸದಾಶಿವಸ್ವಾಮಿಗಳ ಸಾನ್ನಿಧ್ಯದಲ್ಲಿ ನಂದಿಧ್ವಜಕ್ಕೆ ಪೂಜೆ ಸಲ್ಲಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಲಾಯಿತು. ಮೆರವಣಿಗೆಯಲ್ಲಿ ಕೀಲುಕುದುರೆ, ಪಟ ಕುಣಿತ, ನಗಾರಿ, ಕಂಸಾಳೆ, ವೀರಗಾಸೆ ಕುಣಿತ, ಮಂಗಳವಾದ್ಯ ಸೇರಿದಂತೆ 10ಕ್ಕೂ ಹೆಚ್ಚು ಕಲಾತಂಡಗಳು ಭಾಗವಹಿಸಿದ್ದವು. ಜಗಜ್ಯೋತಿ ಬಸವೇಶ್ವರರ ಭಾವಚಿತ್ರವನ್ನೊಳಗೊಂಡ ಬೆಳ್ಳಿರಥವು ಮೆರವಣಿಗೆಯಲ್ಲಿ ಸಾಗಿಬಂದಿತು. ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿದ ಮೆರವಣಿಗೆ ನಗರದ ಮುನೇಶ್ವರ ಕಾವಲ್ ಮೈದಾನದಲ್ಲಿ ಸಂಪನ್ನಗೊಂಡಿತು.