ಜಿಲ್ಲೆ

ಒಬ್ಬನ ಶವ ಪತ್ತೆ, ಮತ್ತೊಬ್ಬನಿಗೆ ಹುಡುಕಾಟ

ತೀರ್ಥಹಳ್ಳಿ: ಬೆಂಗಳೂರಿನಿಂದ ತೀರ್ಥಹಳ್ಳಿಗೆ ಪ್ರವಾಸ ಬಂದು ಭೀಮನಕಟ್ಟೆ ಬಳಿ ಭಾನುವಾರ ತುಂಗಾನದಿಯಲ್ಲಿ ಮುಳುಗಿದ್ದ ಇಬ್ಬರು ಯುವಕರಲ್ಲಿ ಗೌತಮ್ ಎಂಬಾತನ ಶವ ಸೋಮವಾರ ಮುಂಜಾನೆ ದೊರೆತಿದ್ದು ಸಂಜಯ್ ಎಂಬಾತನ ಮತದೇಹ ಸಂಜೆಯವರೆಗೂ ದೊರೆತಿರಲಿಲ್ಲ. ಯುವಕರ ಮೃತದೇಹವನ್ನು ನದಿಯಿಂದ ಮೇಲಕ್ಕೆತ್ತಲು ಅಗ್ನಿಶಾಮಕದಳದವರು ಆಗಾಗ ಸುರಿದ ಮಳೆಯ ನಡುವೆಯೂ ಅಹೋರಾತ್ರಿ ಹುಡುಕಾಟ ನಡೆಸಿದ್ದರು. ಉಡುಪಿ ಜಿಲ್ಲೆಯ ಮಲ್ಪೆಯಿಂದ ಬಂದಿದ್ದ ಮುಳುಗು ತಜ್ಞ ಈಶ್ವರ್ ಮಲ್ಪೆ ಎಂಬುವವರು ನದಿಯ ಆಳಕ್ಕೆ ಮುಳುಗಿ ಗೌತಮ್ ಮೃತದೇಹವನ್ನು ಮೇಲಕ್ಕೆ ಎತ್ತಿದ್ದರು. ಯುವಕರು ಮುಳುಗಿದ ಜಾಗದಲ್ಲಿ ಅಂದಾಜು ನೂರು ಅಡಿಗಳಷ್ಟು ಆಳವಿದ್ದು ಒಂದು ಹಂತದಿಂದ ಕೆಳಕ್ಕೆ ಹೋಗಲು ಸಾಧ್ಯವಾಗುತ್ತಿಲ್ಲ ಎಂದು ಮುಳುಗು ತಜ್ಞರು ಹೇಳಿದ್ದಾರೆ.
ಮೃತ ಸಂಜಯ್ ತಂದೆ, ಸೋದರ ಮಾವ ಸೇರಿದಂತೆ ಕುಟುಂಬದವರು ನದಿ ದಡದಲ್ಲೇ ಕಾಯುತ್ತಿದ್ದಾರೆ. ಅಗ್ನಿಶಾಮಕದಳ ಮತ್ತು ಪೊಲೀಸರೂ ಸ್ಥಳದಲ್ಲಿದ್ದಾರೆ. ಗೌತಮ್ ಶವ ಪರೀಕ್ಷೆಯ ನಂತರ ಮತದೇಹವನ್ನು ಬೆಂಗಳೂರಿಗೆ ಒಯ್ಯಲಾಗಿದೆ.