ಜಿಲ್ಲೆ

ಕೆರೆಯಲ್ಲಿ ಮೀನು ಹಿಡಿಯಲು ಹೋದಾತನ ಶವ ಪತ್ತೆ

ಕುಂದಾಪುರ: ಕಾಳಾವರ ದೇವಸ್ಥಾನದ ಕೆರೆಯಲ್ಲಿ ಮೀನು ಹಿಡಿಯಲು ಹೋಗಿದ್ದ ಕಾಳಾವರ ನರಿಕೊಡ್ಲು ನಿವಾಸಿ ಹರೀಶ್ ಪೂಜಾರಿ(37) ಎಂಬುವರ ಮೃತದೇಹ ಸೋಮವಾರ ಪತ್ತೆಯಾಗಿದೆ.

ಹರೀಶ್ ಪೂಜಾರಿ ಹಾಗೂ ಮೂವರು ಸ್ನೇಹಿತರು ಭಾನುವಾರ ಮೀನು ಹಿಡಿಯಲು ಕಾಳಾವಾರ ದೇವಸ್ಥಾನ ಸಮೀಪದ ಕೆರೆಗೆ ತೆರಳಿದ್ದರು. ಈ ಸಂದರ್ಭ ಹರೀಶ್ ಪೂಜಾರಿ ಕೆರೆಯ ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ಈಜುತ್ತಿದ್ದಾಗ ನೀರಿನಲ್ಲಿ ಮುಳುಗಿದ್ದಾರೆ.

ಕುಂದಾಪುರ ಗ್ರಾಮಾಂತರ ಠಾಣೆ ಪೊಲೀಸರು, ಅಗ್ನಿಶಾಮಕದಳ, ಸ್ಥಳೀಯರು ಆಗಮಿಸಿ ಭಾನುವಾರ ಮಧ್ಯರಾತ್ರಿವರೆಗೂ ಹುಡುಕಾಟ ನಡೆಸಿದ್ದು ಕತ್ತಲಿದ್ದ ಕಾರಣ ಕಾರ್ಯಾಚರಣೆಗೆ ಅಡಚಣೆಯಾಗಿತ್ತು.

ಸೋಮವಾರ ಬೆಳಗ್ಗೆ ಈಶ್ವರ್ ಮಲ್ಪೆ, ಶಬ್ಬೀರ್ ಮಲ್ಪೆ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾಳಾವರ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸುಧೀರ್ ಜಿ., ರಾಜಶೇಖರ್, ಪ್ರಕಾಶ್ ಆಚಾರ್ ಹಾಗೂ ಅಗ್ನಿಶಾಮಕ ದಳದವರು ಜಂಟಿ ಕಾರ್ಯಾಚರಣೆ ನಡೆಸಿದ್ದರು. ಸತತ ಹುಡುಕಾಟದ ಬಳಿಕ ಈಶ್ವರ ಮಲ್ಪೆ ಅವರು ಕೆರೆಯ ಇನ್ನೊಂದು ಬದಿಯ ದಡದ ಸನಿಹ ಮೃತದೇಹ ಪತ್ತೆ ಮಾಡಿ ಮೇಲಕ್ಕೆತ್ತಿದ್ದಾರೆ. ಕುಂದಾಪುರ ಕಂಡ್ಲೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.