ಜಿಲ್ಲೆ

ಆಡಳಿತ ಮಂಡಳಿ ಜಟಾಪಟಿಗೆ ಕೊನೆಗೂ ತೆರೆ

ಹಾಸನ: ಜಿಲ್ಲೆಯ ಪ್ರತಿಷ್ಠಿತ ಮಲೆನಾಡು ತಾಂತ್ರಿಕ ಶಿಕ್ಷಣ ಸಂಸ್ಥೆ ಆಡಳಿತ ಮಂಡಳಿ ಜಟಾಪಟಿಗೆ ಕೊನೆಗೂ ತೆರೆ ಬಿದ್ದಿದೆ. ಡಿಆರ್ ಆದೇಶ ಹಿನ್ನೆಲೆಯಲ್ಲಿ ಅಧಿಕೃತವಾಗಿ 5 ವರ್ಷಗಳ ಅವಧಿಗೆ ಚುನಾಯಿತರಾಗಿ ಆಯ್ಕೆಯಾಗಿದ್ದ ಪದಾಧಿಕಾರಿಗಳು ಬುಧವಾರ ಮತ್ತೆ ಆಡಳಿತ ಮಂಡಳಿ ಕಚೇರಿ ಪ್ರವೇಶಿಸಿ ಕೆಲಸ ಆರಂಭಿಸಿದರು.

ಕೆಲ ದಿನಗಳ ಹಿಂದೆ ಆಡಳಿತ ಮಂಡಳಿಯಲ್ಲಿ ಒಂದಿಷ್ಟು ಗೊಂದಲ ಏರ್ಪಟ್ಟಿದ್ದ ಪರಿಣಾಮ ಆಡಳಿತ ಮಂಡಳಿ ಕಚೇರಿಗೆ ಬೀಗ ಹಾಕಿ ಎರಡೂ ಬಣದವರೂ ಪ್ರವೇಶಿಸದಂತೆ ಪೊಲೀಸರು ನಿರ್ಬಂಧ ಹೇರಿದ್ದರು. ಬುಧವಾರ ಪದಾಧಿಕಾರಿಗಳು ಬೀಗ ತೆರೆದು ಕಚೇರಿ ಪ್ರವೇಶಿಸಿದರು. ಈ ವೇಳೆ ಮಾತನಾಡಿದ ಸಂಸ್ಥೆ ಅಧ್ಯಕ್ಷ ಆರ್.ಟಿ. ದ್ಯಾವೇಗೌಡ ಹಾಗೂ ಕಾರ್ಯದರ್ಶಿ ಜಗದೀಶ್ ಚೌಡುವಳ್ಳಿ, ಜ.11 ರಂದು 20 ಜನ ನಿರ್ದೇಶಕರ ಬೆಂಬಲದೊಂದಿಗೆ ಸರ್ವಾನುಮತದಿಂದ 5 ವರ್ಷಗಳ ಅವಧಿಗೆ ನಾವು ಅಧ್ಯಕ್ಷ-ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದೇವೆ. ಇದುವರೆಗೂ ಸಹಕಾರ ಸಂಘದ ರಿಜಿಸ್ಟ್ರಾರ್ ಅವರಿಂದ ಆಗಲಿ, ನ್ಯಾಯಾಲಯದಿಂದಾಗಲಿ ಅಥವಾ ಸರ್ಕಾರದಿಂದಾಗಲೀ ನಮ್ಮ ಆಡಳಿತ ಮಂಡಳಿ ಪದಚ್ಯುತಿಗೊಳಿಸಿರುವುದಾಗಿ ತೀರ್ಪು/ಆದೇಶ ಅಧಿಕೃತವಾಗಿ ಪ್ರಕಟವಾಗಿಲ್ಲ ಎಂದರು.

ಹಿಂದೆ ಸ್ವಯಂ ಘೋಷಿತ ಅಧ್ಯಕ್ಷ ಎಂದು ಬಿಂಬಿಸಿಕೊಂಡಿದ್ದ ಬಿ.ಆರ್.ಗುರುದೇವ್ ಅವರಿಗೆ ಹಾಸನ ಸಹಕಾರ ಸಂಘಗಳ ಉಪ ನಿಬಂಧಕರು, 13 ಜನ ನಿರ್ದೇಶಕರಿರುವ ತಂಡ ಅಧಿಕಾರ ನಡೆಸಬಹುದೆಂದು ಅಭಿಪ್ರಾಯಿಸಿ ಹಿಂಬರಹ ನೀಡಿತ್ತು. ಅದನ್ನೇ ಆದೇಶವೆಂದು ತಪ್ಪಾಗಿ ಅರ್ಥೈಸಿಕೊಂಡಿದ್ದ ಗುರುದೇವ್ ಅವರು, ನಾವು ಅಧಿಕಾರ ಸ್ವೀಕಾರ ಮಾಡುತ್ತಿದ್ದೇವೆಂದು ಸಂಘದ ಕಚೇರಿ ಬಳಿ ಬಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದರು. ನಂತರ ಅವರಿಗೆ ಈ ಬಗ್ಗೆ ಮನವರಿಕೆಯಾಗಿದ್ದು, ಸಹಕಾರ ಇಲಾಖೆ ಉಪನಿಬಂಧಕರಿಗೆ ಅಭಿಪ್ರಾಯವನ್ನು ಆದೇಶ ಎಂದು ಮಾರ್ಪಾಡು ಮಾಡಿ ನೀಡುವಂತೆ ಮನವಿ ಸಲ್ಲಿಸಿದ ವೇಳೆ, ಉಪನಿಬಂಧಕರು ಈ ವಿಷಯ ಸಂಬಂಧ ನಿರ್ದೇಶಕರಿಗೆ ನಿರ್ದೇಶನ ನೀಡುವ ಅಥವಾ ಆದೇಶ ಮಾಡುವ ಯಾವುದೇ ಶಾಸನ ಬದ್ಧ ಅವಕಾಶ ಹಾಗೂ ಕಾನೂನು ರೀತಿಯ ಮುಂದಿನ ಕ್ರಮ ಕೈಗೊಳ್ಳುವ ಅಧಿಕಾರ ನಮಗೆ ಇಲ್ಲ ಎಂದು ಸ್ಪಷ್ಟವಾಗಿ ತಿಳಿಸಿದರು.

ಕಾಲೇಜಿನ ಶೈಕ್ಷಣಿಕ ಹಿತ ದೃಷ್ಟಿಯಿಂದ ಚುನಾಯಿತ ಆಡಳಿತ ಮಂಡಳಿ ಇಂದಿನಿಂದ ಕಾರ್ಯ ಭಾರ ಪ್ರಾರಂಭಿಸಿದ್ದೇವೆ ಎಂದರು.

ನ್ಯಾಯಾಲಯದಲ್ಲಿ ಪ್ರಕರಣ ಇರುವ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ನಮ್ಮ ಆಡಳಿತ ಮಂಡಳಿಯನ್ನು ಅಧಿಕಾರದಲ್ಲಿ ಮುಂದುವರೆಸುವಂತೆ ಈಗಾಗಲೇ ಹಾಸನದ ಸಿವಿಲ್ ಜಡ್ಜ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ನಾವೇ ದಾವೆ ಹೂಡಿದ್ದು, ಅದು ವಿಚಾರಣೆ ಹಂತದಲ್ಲಿದೆ. ಒಂದು ವೇಳೆ ನ್ಯಾಯಾಲಯ ಅಥವಾ ರಿಜಿಸ್ಟ್ರಾರ್ ಅಥವಾ ಸರ್ಕಾರದಿಂದ ಆದೇಶ ಬಂದಲ್ಲಿ ತಲೆಬಾಗುತ್ತೇವೆ ಎಂದರು.

ಮಾಜಿ ಖಜಾಂಚಿ ವಿರುದ್ಧ ಅಸಮಾಧಾನ: ಇದೇ ವೇಳೆ ನಿರ್ದೇಶಕ ಸ್ಥಾನದಿಂದ ಅಮಾನತು ಗೊಂಡಿರುವ ಮಾಜಿ ಖಜಾಂಚಿ ಶ್ರೀಧರ್ ವಿರುದ್ಧ ಅಸಮಾಧಾನ ಹೊರ ಹಾಕಿದ ಅವರು, ಈ ಗೊಂದಲದಿಂದ ಸಂಸ್ಥೆ ವ್ಯಾಪ್ತಿಗೆ ಒಳ ಪಡುವ 7 ಶಿಕ್ಷಣ ಸಂಸ್ಥೆಗಳ ಸಾವಿರಾರು ಉಪನ್ಯಾಸಕರು, ಸಿಬ್ಬಂದಿ ವೇತನ ಸಿಕ್ಕದೆ ವಂಚಿತರಾಗಿದ್ದರು, ಈ ನಡುವೆ ಉಪನಿಬಂಧಕರು ಪ್ರಕರಣದಲ್ಲಿ ಯಾವುದೇ ಆದೇಶ ಮಾಡಲು ತನಗೆ ಅಧಿಕಾರ ಇಲ್ಲ ಎಂದು ಸ್ಪಷ್ಟಪಡಿಸಿದ ಹಿನ್ನೆಲೆ, ಮತ್ತೆ ಕೆಲಸ ಆರಂಭಿಸಿರುವ ನಾವು, ಸಾಲು ಸಾಲು ಹಬ್ಬ ಇರುವುದರಿಂದ ನೌಕರರಿಗೆ ತೊಂದರೆಯಾಗಬಾರದೆಂಬ ಉದ್ದೇಶದಿಂದ ಎಲ್ಲ 7 ಸಂಸ್ಥೆಗಳ ನೌಕರರ ವೇತನ ಪಾವತಿಸಿದ್ದೇವೆ. ಇದಕ್ಕೆ ಅಡ್ಡಗಾಲು ಹಾಕಿದ್ದ ಶ್ರೀಧರ್, ಬ್ಯಾಂಕ್‌ಗಳ ವ್ಯವಸ್ಥಾಪಕರಿಗೆ ತಪ್ಪು ಮಾಹಿತಿಯ ಮೂಗರ್ಜಿ ಬರೆದು ಆಡಳಿತಕ್ಕೆ ಅಡ್ಡಿಪಡಿಸುತ್ತಿದ್ದು, ಅವರ ವಿರುದ್ಧವೂ ಕಾನೂನು ಕ್ರಮಕ್ಕೆ ಮುಂದಾಗಲಾಗುವುದು ಎಂದರು.

ಖಜಾಂಚಿ ಪಾರ್ಶ್ವನಾಥ್, ಹಿರಿಯ ಉಪಾಧ್ಯಕ್ಷ ಚೌಡುವಳ್ಳಿ ಪುಟ್ಟರಾಜು, ನಿರ್ದೇಶಕ ಜಿ.ಎಲ್.ಮುದ್ದೇಗೌಡ, ಶ್ರೀನಿವಾಸ್, ನಾಗರಾಜ್ ಜೈನ್, ಶಂಕರ್, ರಾಜಶೇಖರ್, ಸುರೇಶ್ ಇತರರಿದ್ದರು.