| ಎನ್.ಮುನಿವೆಂಕಟೇಗೌಡ ಕೋಲಾರ
ತಾಯಿ ಪ್ರಿಯಕರನೊಂದಿಗೆ ಪರಾರಿ, ತಂದೆ ಸಾಲಗಾರರ ಕಾಟ ತಾಳದೆ ಊರು ಬಿಟ್ಟಿದ್ದಾನೆ. ಕಣ್ಣು ಕಾಣದ 60 ವರ್ಷದ ವಯೋವೃದ್ಧನೇ ಮೂವರು ಕಂದಮ್ಮಗಳನ್ನು ಸಾಕಲು ಹೆಣಗಾಡುತ್ತಿದ್ದಾನೆ.
ಈ ಕರುಣಾಜನಕ ಪರಿಸ್ಥಿತಿ ಇರುವುದು ಜಿಲ್ಲೆಯ ಶ್ರೀನಿವಾಸಪುರ ಪಟ್ಟಣದ ಉನಿಕಿಲಿ ಬಡಾವಣೆಯಲ್ಲಿ. 60 ವರ್ಷದ ಚಿನ್ನಪ್ಪ ತಂದೆ-ತಾಯಿ ಬಿಟ್ಟುಹೋಗಿರುವ ಗೌತಮ್ (7), ಭೂಮಿಕಾ (6), ವರುಣ (4) ಎಂಬ ಮೂವರು ಪುಟಾಣಿಗಳನ್ನು ಸಾಕುವ ಜವಾಬ್ದಾರಿ ಹೆಗಲಿಗೇರಿಸಿಕೊಂಡು ಜೀವನ ಸಾಗಿಸುತ್ತಿದ್ದಾರೆೆ. ಸೀಟು ಹರಿದುಹೋಗಿರುವ, ಮಳೆ ಬಂದರೆ ಸೋರುವ ಮನೆಯಲ್ಲಿ ಇವರ ಜೀವನ ಸಾಗುತ್ತಿದೆ.
ತಾಯಿ ತೊರೆದು ಹೋದಳು: ಮಕ್ಕಳ ತಾಯಿ 2 ವರ್ಷಗಳ ಹಿಂದೆ ಗಂಡ, ಮಕ್ಕಳನ್ನು ಬಿಟ್ಟು ಪ್ರಿಯಕರನೊಂದಿಗೆ ಪರಾರಿಯಾಗಿದ್ದಾಳೆ. ಬಳಿಕ ಆಕೆಯ ಗಂಡ ತಿರುಮಲಪ್ಪ (ಮಂಜುನಾಥ್) ಊರಿನಲ್ಲಿ ಸಾಲಗಾರರ ಕಾಟ ತಪ್ಪಿಸಿಕೊಳ್ಳಲು ತಲೆಮರೆಸಿಕೊಂಡು ತಿರುಗಾಡಿ, ಊರು ಬಿಟ್ಟಿದ್ದಾನೆ. ಇದೀಗ ಮೂವರು ಚಿಣ್ಣರು ಮಂಜುನಾಥ್ನ ತಂದೆ ಚಿನ್ನಪ್ಪ ಅವರ ನೆರಳಿನಲ್ಲಿ ಬದುಕುತ್ತಿದ್ದಾರೆ. ಇವರಿಗೆ ವಾಸಿಸಲು ಮನೆಯಿಲ್ಲದ ಕಾರಣ ಗ್ರಾಮಸ್ಥರೇ ತಾತ್ಕಾಲಿಕ ಶೆಡ್ ನಿರ್ವಿುಸಿಕೊಟ್ಟಿದ್ದಾರೆ. ಆದರೆ ಅದಕ್ಕೆ ಗೋಡೆ ಹಾಗೂ ಕಿಟಕಿಯಿಲ್ಲ. ಮಣ್ಣು ನೆಲದಲ್ಲಿಯೇ ಈ ನಾಲ್ವರು ದಿನ ದೂಡುತ್ತಿದ್ದಾರೆ.
ಏಳು ವರ್ಷದ ಬಾಲಕನೇ ಯಜಮಾನ!: ತಂದೆ ದೂರವಾದ ಬಳಿಕ ಹಿರಿಯ ಮಗ ಗೌತಮ್ ವಾರಕ್ಕೆ 1 ಅಥವಾ 2 ದಿನ ಶಾಲೆಗೆ ಹೋಗಿ ತಂಗಿ ಮತ್ತು ತಮ್ಮನ ಆರೈಕೆಯೊಂದಿಗೆ ತಾತನಿಗೆ ನೆರವಾಗುತ್ತಿದ್ದಾನೆ. ತಾತನ ಸಲಹೆ ಪಡೆದು ಮನೆಗೆಲಸ ಮಾಡುತ್ತಾನೆ, ಬಟ್ಟೆ ಒಗೆಯುತ್ತಾನೆ. ಆಟ ಆಡಿ ನಲಿದಾಡುವ ವಯಸ್ಸಿನಲ್ಲಿ ಮನೆಯ ಜವಾಬ್ದಾರಿ ಈ ಪುಟಾಣಿಯ ಹೆಗಲೇರಿದೆ. ಕಣ್ಣು ಕಾಣದ ವಯೋವೃದ್ಧ ಹಾಗೂ ಜಗತ್ತೇ ಕಾಣದ ಬಾಲರ ಪರಿಸ್ಥಿತಿಯನ್ನು ಜಿಲ್ಲಾಡಳಿತ ಮತ್ತು ತಾಲೂಕಾಡಳಿತ, ಜನಪ್ರತಿನಿಧಿಗಳು ಗಮನಿಸಿ ನೆರವಿಗೆ ಧಾವಿಸಬೇಕಾಗಿದೆ.
ದೊಡ್ಡವನಾದ ಗೌತಮ 2ನೇ ತರಗತಿಯಲ್ಲಿರಬೇಕಾಗಿತ್ತು. ತಾತನ ಜತೆಯಲ್ಲಿ ಇದ್ದು ಕೊಂಡು ತಂಗಿ, ತಮ್ಮನನ್ನು ನೋಡಿಕೊಳ್ಳುತ್ತಿದ್ದಾನೆ. ಆತ ಹೇಳಿದಂತೆ ಅನ್ನ ಬೇಯಿಸುವುದು, ಮನೆಗೆಲಸ ಮಾಡುತ್ತಿದ್ದಾನೆ. ಅಂಗನವಾಡಿಯಿಂದ ನಮ್ಮ ಕೈಲಾದ ಸಹಾಯವನ್ನು ಮಾಡುತ್ತಿದ್ದೇವೆ.
| ಶಾರದಮ್ಮ ಅಂಗನವಾಡಿ ಕಾರ್ಯಕರ್ತೆ
ಪುರಸಭೆಯಿಂದ ಮನೆ ನೀಡಲು ಇರುವ ಜಾಗಕ್ಕೆ ದಾಖಲೆಗಳು ಇಲ್ಲದಂತಾಗಿವೆ. ಮನೆ ಮಂಜೂರು ಮಾಡಿಸಿದರೂ ಜವಾಬ್ದಾರಿ ಹೊತ್ತು ನಿರ್ವಹಣೆ ಮಾಡುವವರು ಇಲ್ಲ. ಇರುವ ಮನೆಗೆ ಶೀಟ್ಗಳನ್ನು ಭದ್ರಪಡಿಸಲಾಗಿದೆ. ಅಕ್ಕಪಕ್ಕದ ಮನೆಗಳವರು ಊಟ ತಿಂಡಿ ವ್ಯವಸ್ಥೆ ನೋಡಿಕೊಳ್ಳುತ್ತಿದ್ದಾರೆ. ಗ್ರಾಮಸ್ಥರೇ ಆಗಾಗ ಮಕ್ಕಳು ಮತ್ತು ವೃದ್ಧನಿಗೆ ಬಟ್ಟೆ ನೀಡುತ್ತಿದ್ದಾರೆ.
| ನಾಗರಾಜ್ ಪುರಸಭಾ ಸದಸ್ಯ, ಉನಿಕಿಲಿ