ಚಿಕ್ಕಮಗಳೂರಿನ ಕೆಂಪನಹಳ್ಳಿ ಆಶಾಕಿರಣ ಅಂಧ ಮಕ್ಕಳ ಶಾಲೆಯಲ್ಲಿ ಆಯೋಜಿಸಿದ್ದ ಆರೋಗ್ಯ ತಪಾಸಣಾ ಶಿಬಿರವನ್ನು ಶಾಸಕ ಎಚ್.ಡಿ.ತಮ್ಮಯ್ಯ ಉದ್ಘಾಟಿಸಿದರು. ಚೈತನ್ಯ ಸವೂರ್, ಎಸ್.ಪಿ.ಜಯಣ್ಣ, ಟಿ.ನಾರಾಯಣಸ್ವಾಮಿ ಇತರರಿದ್ದರು. 
ಜಿಲ್ಲೆ

ಅಂಧರು ಎನ್ನದೆ ದಿವ್ಯಾಂಗರು ಎನ್ನಿ

ಚಿಕ್ಕಮಗಳೂರು: ದೃಷ್ಟಿ ಇಲ್ಲದ ಮಕ್ಕಳನ್ನು ಅಂಧರು ಎಂದು ಕರೆಯದೆ ದಿವ್ಯಾಂಗರು ಎಂದು ಕರೆಯಬೇಕು. ಜತೆಗೆ ಅವರಿಗೆ ಸಹಾಯ ಮಾಡುವ ಮನಸ್ಥಿತಿ ಪ್ರತಿಯೊಬ್ಬರೂ ಬೆಳೆಸಿಕೊಳ್ಳಬೇಕು ಎಂದು ಶಾಸಕ ಎಚ್.ಡಿ.ತಮ್ಮಯ್ಯ ತಿಳಿಸಿದರು.
ಕೆಂಪನಹಳ್ಳಿ ಆಶಾಕಿರಣ ಅಂಧ ಮಕ್ಕಳ ಶಾಲೆಯಲ್ಲಿ ಆಯೋಜಿಸಿದ್ದ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿ, ದೃಷ್ಟಿ ಇಲ್ಲದ ಮಕ್ಕಳ ಸೇವೆ ಅತ್ಯಂತ ಪವಿತ್ರವಾದುದು. 34 ವರ್ಷಗಳಿಂದ ಡಾ. ಕೃಷ್ಣೇಗೌಡ ಅವರು ಅಂಧ ಮಕ್ಕಳ ಬಾಳಿನಲ್ಲಿ ಬೆಳಕಾಗಿದ್ದಾರೆ. ಆಶಾಕಿರಣ ಅಂಧ ಮಕ್ಕಳ ಶಾಲೆಯ ಬೇಡಿಕೆಗಳನ್ನು ಈಡೇರಿಸುವ ಕುರಿತು ಸರ್ಕಾರದ ಜತೆ ಚರ್ಚಿಸುತ್ತೇನೆ ಎಂದರು.
ಅಂಧ ಮಕ್ಕಳ ಶಾಲೆ ಮುಖ್ಯಸ್ಥ ಡಾ. ಜೆ.ಪಿ.ಕೃಷ್ಣೇಗೌಡ ಮಾತನಾಡಿ, ಅಂಧ ಮಕ್ಕಳ ಶಾಲೆಗೆ ಸರ್ಕಾರ ಸಮರ್ಪಕ ಅನುದಾನ ನೀಡದಿದ್ದರೂ ದಾನಿಗಳ ನೆರವಿನಿಂದ 34 ವರ್ಷಗಳಿಂದ ಕಷ್ಟಪಟ್ಟು ನಡೆಸಿಕೊಂಡು ಬರಲಾಗುತ್ತಿದೆ. ಕರೊನಾದಂಥ ಸಂದರ್ಭದಲ್ಲಿ ಎಲ್ಲರಿಗೂ ನೆರವು ನೀಡಿದ ಸರ್ಕಾರ ಅಂಧ ಮಕ್ಕಳ ಬೇಡಿಕೆಗೆ ಸ್ಪಂದಿಸಲಿಲ್ಲ. ಆದರೆ ನಮ್ಮ ಟ್ರಸ್ಟ್ ಈ ಸಂದರ್ಭದಲ್ಲಿ ಅಂಧ ಮಕ್ಕಳ ಕುಟುಂಬಗಳಿಗೆ ನೆರವು ನೀಡಿದೆ ಎಂದರು.
ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷ ಚೈತನ್ಯ ಸವೂರ್, ಆಶಾಕಿರಣ ಅಂಧಮಕ್ಕಳ ಶಾಲೆ ಹಳೇ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಎಸ್.ಪಿ.ಜಯಣ್ಣ, ಲಯನ್ಸ್ ಕ್ಲಬ್ ಕಾರ್ಯದರ್ಶಿ ಟಿ.ನಾರಾಯಣಸ್ವಾಮಿ ಇತರರಿದ್ದರು.